ಬೆಂಗಳೂರು: ಸರ್ಕಾರಿ ನಿವಾಸಕ್ಕಾಗಿ ಮಾಜಿ ಹಾಗೂ ಹಾಲಿ ಸಚಿವ ನಡುವೆ ಜಟಾಪಟಿ ನಡೆಯುತ್ತಿದ್ದು, ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಹೆಚ್.ಸಿ ಮಹದೇವಪ್ಪ ಅವರ ಸರ್ಕಾರಿ ನಿವಾಸಿವನ್ನು ತಕ್ಷಣ ಖಾಲಿ ಮಾಡುವಂತೆ ಸಚಿವ ಬೈರತಿ ಸುರೇಶ್ ಒತ್ತಡ ಹೇರುತ್ತಿದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಮಹದೇವಪ್ಪ ಅದೇ ಮನೆಯಲ್ಲಿ ಇರುವಾಗಲೇ ಬೈರತಿ ಸುರೇಶ್ ನವೀಕರಣ ಕಾಮಗಾರಿ ಆರಂಭಿಸಿರುವುದು ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಇದೀಗ ಸ್ವತಃ ಬೈರತಿ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.
ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತು ನನ್ನ ನಡುವೆ ಯಾವುದೇ ಗೊಂದಲವಿಲ್ಲ. ಸರ್ಕಾರದ ವಸತಿ ಗೃಹದ ಹಂಚಿಕೆ ವಿಚಾರದಲ್ಲಿ ತಪ್ಪು ಮಾಹಿತಿ ಹೋಗಿದೆ. ಇದು ಹೇಗೆ ಹೋಗುತ್ತಿದೆ ಗೊತ್ತಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಬೈರತಿ ಸುರೇಶ್, ಈ ಹಿಂದೆ ಮಹದೇವಪ್ಪ ಅವರು ವಾಸವಿದ್ದ ಕ್ರೆಸೆಂಟ್ ರಸ್ತೆಯ ನಂಬರ್ 2 ರ ಮನೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನನಗೆ ಕೊಟ್ಟಿದ್ದರು. ಅದರಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮನೆಯ ನವೀಕರಣ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಈ ನವೀಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಅಷ್ಟೇ ಅಲ್ಲ, ಮನೆ ಖಾಲಿ ಮಾಡುವಂತೆ ನಾನು ಡಾ.ಮಹದೇವಪ್ಪ ಅವರಿಗೆ ಯಾವುದೇ ರೀತಿಯ ಒತ್ತಡವನ್ನೂ ಹಾಕಿಲ್ಲ ಎಂದು ತಿಳಿಸಿದರು.
ಸಚಿವರುಗಳಿಗೆ ಸರ್ಕಾರಿ ಮನೆಗಳನ್ನು ಹಂಚಿಕೆ ಮಾಡುವ ವಿವೇಚನೆ ಮುಖ್ಯಮಂತ್ರಿಗಳದ್ದಾಗಿರುತ್ತದೆ. ನನಗೆ ಮನೆ ಬೇಕು ಎಂದು ಕೇಳಿದಾಗ ಸ್ವತಃ ಮುಖ್ಯಮಂತ್ರಿಗಳೇ ನನಗೆ ಕ್ರೆಸೆಂಟ್ ರಸ್ತೆಯಲ್ಲಿ ಖಾಲಿ ಇದ್ದ ಈ ಮನೆ ನೀಡಿದ್ದಾರೆ ಎಂದು ಹೇಳಿದರು.
ಮಹದೇವಪ್ಪ ಅವರು ಸಚಿವ ಸ್ಥಾನದಿಂದ ನಿರ್ಗಮಿಸಿದ ನಂತರ ಕಳೆದ ತಿಂಗಳ 15 ರಂದು ಮನೆ ಖಾಲಿ ಮಾಡಿರುವುದಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಮುಖೇನ ತಿಳಿಸಿದ್ದಾರೆ. ಹೀಗಾಗಿ ಖಾಲಿ ಇದ್ದ ಮನೆಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನವೀಕರಣ ಆರಂಭಿಸಿದ್ದಾರೆ ಎಂದರು.
ನನ್ನ ಸ್ವಂತ ಮನೆಯಾಗಿದ್ದರೆ ನಾನು ಒತ್ತಡ ಹೇರಬಹುದಿತ್ತು. ಆದರೆ, ಹಂಚಿಕೆ ಮಾಡಿರುವ ಮನೆಯು ಸರ್ಕಾರಕ್ಕೆ ಸೇರಿದ್ದಾಗಿದೆ. ಸಂಬಂಧಪಟ್ಟ ಇಲಾಖೆಯವರು ಕೆಲಸ ಕಾರ್ಯಗಳನ್ನು ಆರಂಭಿಸಿದ್ದಾರೆ. ಯಾವುದೋ ತಪ್ಪು ಗ್ರಹಿಕೆಯಿಂದ ಈ ಗೊಂದಲ ಸೃಷ್ಟಿಯಾಗಿರಬಹುದು ಎಂದು ಅವರು ಹೇಳಿದರು.
ಮಹದೇವಪ್ಪ ಅವರ ಮನೆಗೆ ನಾನು ನೂರಾರು ಬಾರಿ ಹೋಗಿದ್ದೇನೆ. ಅವರು ನನ್ನ ಸ್ನೇಹಿತರಿಗಿಂತ ಹೆಚ್ಚಾಗಿ ನನಗಿಂತ ದೊಡ್ಡವರು. ನಾನು ಅವರ ಮಗನ ಸಮಾನ. ಅವರು ನಮ್ಮ ಲೀಡರ್ ಆಗಿದ್ದಾರೆ. ನಮ್ಮಲ್ಲಿ ಯಾವುದೇ ಅಸಮಾಧಾನ, ಗೊಂದಲಗಳಿಲ್ಲ ಎಂದರು.
ಆ ಮನೆಯನ್ನು ನನಗೆ ಹಂಚಿಕೆ ಮಾಡಲಾಗಿದೆ. ಮುಖ್ಯಮಂತ್ರಿಗಳು ಅನುಮತಿ ಕೊಟ್ಟರೆ ಮತ್ತು ಕಾನೂನಿನಲ್ಲಿ ಅವಕಾಶವಿದ್ದರೆ ಮಹದೇವಪ್ಪಣ್ಣ ಇನ್ನೂ ಒಂದೂ ಮುಕ್ಕಾಲು ವರ್ಷ ಅದೇ ಮನೆಯಲ್ಲಿ ವಾಸವಾಗಿರಲಿ. ಇದಕ್ಕೆ ನನ್ನದೇನೂ ತಕರಾರಿಲ್ಲ ಎಂದು ಸ್ಪಷ್ಟಪಡಿಸಿದರು.

