ಬೆಂಗಳೂರು: ಕಡ್ಡಾಯವಾಗಿ ಗ್ರಾಮೀಣ ಸೇವೆ ಸಲ್ಲಿಸದ ಮತ್ತು 50 ವರ್ಷ ಮೀರd ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯನ್ನು ಗುರುತಿಸಿ ತಕ್ಷಣವೇ ಗ್ರಾಮೀಣ ಪ್ರದೇಶ ಸೇವೆಗೆ ವರ್ಗಾವಣೆ ಮಾಡಬೇಕೆಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಅಲ್ಲದೆ, ವಿಶೇಷ ತಜ್ಞರು ಮತ್ತು ಹಿರಿಯ ವಿಶೇಷ ತಜ್ಞರು ಅವರ ವಿಶೇಷ ವಿದ್ಯಾರ್ಹತೆಗೆ ಗೊತ್ತುಪಡಿಸದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಲ್ಲಿ ಅವರ ಸೇವೆಯನ್ನು ಕೂಡಲೇ ಹಿಂಪಡೆದು ವಿಶೇಷ ವಿದ್ಯಾರ್ಹತೆಗೆ ಗೊತ್ತುಪಡಿಸಿದ ಹುದ್ದೆಗಳಿಗೆ ವರ್ಗಾವಣೆ ಮಾಡುವಂತೆ ತಿಳಿಸಲಾಗಿದೆ.
ಕನಿಷ್ಠ ಮೂರು ವರ್ಷ ಗ್ರೂಪ್ ಎ ಹುದ್ದೆಯಲ್ಲಿ, ಕನಿಷ್ಠ ನಾಲ್ಕು ವರ್ಷ ಗ್ರೂಪ್ ಬಿ ಹುದ್ದೆಯಲ್ಲಿ, ಕನಿಷ್ಠ ಐದು ವರ್ಷ ಗ್ರೂಪ್ ಸಿ ಹುದ್ದೆಯಲ್ಲಿ ಹಾಗೂ ಕನಿಷ್ಠ ಏಳು ವರ್ಷ ಗ್ರೂಪ್ ಡಿ ಹುದ್ದೆಯಲ್ಲಿ ನಿರಂತರ ಸೇವೆಯನ್ನು ಸರ್ಕಾರಿ ಆಸ್ಪತ್ರೆ ಮತ್ತು ಸರ್ಕಾರಿ ಸಂಸ್ಥೆಯಲ್ಲಿ ಸಲ್ಲಿಸಿದ ಒಬ್ಬ ವೈದ್ಯಾಧಿಕಾರಿ ಅಥವಾ ಇತರೆ ಸಿಬ್ಬಂದಿಯನ್ನು ಅದೇ ಪ್ರದೇಶ ಅಥವಾ ವಲಯ ಇತರೆ ವಲಯ ಅಥವಾ ಪ್ರದೇಶದ ಸರ್ಕಾರಿ ಆಸ್ಪತ್ರೆ ಅಥವಾ ಸಂಸ್ಥೆಗೆ ವರ್ಗಾವಣೆ ಮಾಡಬಹುದು ಎಂದು ಹೇಳಲಾಗಿದೆ.
ವರ್ಗಾವಣೆಯ ಮೂಲಕ ಭರ್ತಿ ಮಾಡಬೇಕಾದ ಖಾಲಿ ಹುದ್ದೆಗಳ ಪಟ್ಟಿಯನ್ನು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಿ ಕೌನ್ಸೆಲಿಂಗ್ ಮೂಲಕ ಖಾಲಿ ಹುದ್ದೆಗಳನ್ನು ನೀಡುವಾಗ ತೀರ ಅಗತ್ಯವಿರುವ ಖಾಲಿ ಸ್ಥಾನದ ಹುದ್ದೆಗಳನ್ನು ಇತರೆ ಖಾಲಿ ಹುದ್ದೆಗಳಿಗಿಂತ ಆದ್ಯತೆಯ ಮೇಲೆ ನೀಡತಕ್ಕದ್ದು ಎಂದು ತಿಳಿಸಲಾಗಿದೆ.
ಗಣಕೀಕೃತ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ನಡೆಸಬೇಕು. ಆದ್ಯತಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಇಲಾಖಾ ವೆಬ್ಸೈಟ್ ಮತ್ತು ಪತ್ರಿಕಾ ಪ್ರಕಟಣೆಗಳ ಮೂಲಕ ಕೌನ್ಸೆಲಿಂಗ್ ಗೆ ನಿಗದಿಪಡಿಸಿದ ದಿನಾಂಕವನ್ನು ತಿಳಿಸಬೇಕು ಎಂದು ಹೇಳಲಾಗಿದೆ.
ಗಂಭೀರ ಕಾಯಿಲೆ ಹೊಂದಿರುವ ಸಿಬ್ಬಂದಿ, ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಇರುವವರು, ಗರ್ಭಿಣಿಯರು ಎರಡು ವರ್ಷದೊಳಗೆ ವಯೋನಿವೃತ್ತರಾಗುವ ಸಿಬ್ಬಂದಿಗೆ ವಿನಾಯಿತಿ ನೀಡಲಾಗುವುದು.