ಹಾಸನ: ಜಿಲ್ಲೆಯಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ ದಾಸ್ತಾನು ಅಗತ್ಯ ಪ್ರಮಾಣದಲ್ಲಿ ಲಭ್ಯವಿರುವುದರಿಂದ ಎಲ್.ಪಿ.ಜಿ. ಸಿಲಿಂಡರ್ ಗಳ ಸರಬರಾಜಿನ ಬಗ್ಗೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಗ್ರಾಹಕರು ಆತಂಕದಲ್ಲಿ ಅನಗತ್ಯ ಬುಕಿಂಗ್ ಮಾಡದಿರಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಮಾಧ್ಯಮಗಳಲ್ಲಿ ಎಲ್.ಪಿ.ಜಿ. ರಿಫಿಲ್ ಬುಕ್ಕಿಂಗ್ ನಿಯಮಗಳಲ್ಲಿ ಬದಲಾವಣೆಗಳಾಗಿವೆ ಎಂಬ ಸುದ್ದಿ ಹರಿದಾಡುತ್ತಿದೆ, ಈ ಮಾಹಿತಿಗಳು ತಪ್ಪು ಮತ್ತು ಅವಾಸ್ತವಿಕವಾಗಿವೆ ಎಂದು ತಿಳಿಸಲಾಗಿದೆ.
ನಗರ ಪ್ರದೇಶಗಳಲ್ಲಿ ಎರಡು ರಿಫಿಲ್ ಬುಕ್ಕಿಂಗ್ ಗಳ ನಡುವಿನ ಕನಿಷ್ಠ ಅವಧಿ 25 ದಿನಗಳು, ಗ್ರಾಮೀಣ ಪ್ರದೇಶಗಳಲ್ಲಿ ಎರಡು ರಿಫಿಲ್ ಬುಕ್ಕಿಂಗ್ ಗಳ ನಡುವಿನ ಕನಿಷ್ಠ ಅವಧಿ 45 ದಿನಗಳು.
ಯಾವುದಾದರೂ ಏಜೆನ್ಸಿಗಳು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವುದು ಕಂಡುಬಂದಲ್ಲಿ ಅಥವಾ ಗ್ರಾಹಕರಿಗೆ ಮನೆಗೆ ಅನಿಲ ಸಿಲಿಂಡರ್ ಗಳನ್ನು ಸರಬರಾಜು ಮಾಡದೆ ಇದ್ದಲ್ಲಿ ಕಂಪನಿಗಳು ನಿಗದಿಪಡಿಸಿದ ಸಮಯದಲ್ಲಿ ಕಾರ್ಯನಿರ್ವಹಿಸದೆ ಇದ್ದಲ್ಲಿ ಸಾರ್ವಜನಿಕರು ಸಂಬಂಧಿಸಿದ ತಾಲ್ಲೂಕಿನ ತಹಶೀಲ್ದಾರ್ ರವರ ಕಚೇರಿಯ ಆಹಾರ ಸಿಬ್ಬಂದಿಗಳಿಗೆ ಹಾಗೂ ಜಿಲ್ಲೆಯ ಜಂಟಿ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 9606025519 ಗೆ ದೂರು ಸಲ್ಲಿಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ದಾಸ್ತಾನು
ಪೆಟ್ರೋಲ್ ಹಾಗೂ ಡೀಸೆಲ್ ಉಪಯೋಗಿಸುವ ಗ್ರಾಹಕರಿಗೆ ತಿಳಿಯಪಡಿಸುವುದೆನೆಂದರೆ ಜಿಲ್ಲೆಯಲ್ಲಿ ಒಟ್ಟು 228 ಪೆಟ್ರೋಲ್ ಬಂಕ್ ಗಳು ಕಾರ್ಯನಿರ್ವಹಿಸುತ್ತಿದ್ದು, ಸದರಿ ಪೆಟ್ರೋಲ್ ಬಂಕ್ ಗಳಲ್ಲಿ ದಾಸ್ತಾನು ಅಗತ್ಯ ಪ್ರಮಾಣದಲ್ಲಿ ಲಭ್ಯವಿರುವುದರಿಂದ, ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಯಾವುದಾದರೂ ಪೆಟ್ರೋಲ್ ಬಂಕ್ ನಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವುದು ಕಂಡುಬಂದಲ್ಲಿ, ಗ್ರಾಹಕರಿಗೆ ಪೆಟ್ರೋಲ್ ಹಾಗೂ ಡೀಸೆಲ್ ನೀಡದೆ ಇದ್ದಲ್ಲಿ ಅಥವಾ ಕಂಪನಿಗಳು ನಿಗದಿಪಡಿಸಿದ ಸಮಯದಲ್ಲಿ ಕಾರ್ಯನಿರ್ವಹಿಸದೆ ಇದ್ದಲ್ಲಿ ಸಾರ್ವಜನಿಕರು ಸಂಬಂಧಿಸಿದ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯ ಆಹಾರ ಇಲಾಖೆ ಸಿಬ್ಬಂದಿಗಳಿಗೆ ಹಾಗೂ ಹಾಸನ ಜಿಲ್ಲೆಯ ಜಂಟಿ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ: 9606025519 ಗೆ ದೂರು ಸಲ್ಲಿಸಬಹುದಾಗಿದೆ.

