HomeLatest News1925ರಲ್ಲೇ ಆರ್.ಎಸ್.ಎಸ್.  ಸ್ಥಾಪನೆಯಾಗಿದ್ದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಲಿಲ್ಲ: ಸಿಎಂ ಸಿದ್ಧರಾಮಯ್ಯ

1925ರಲ್ಲೇ ಆರ್.ಎಸ್.ಎಸ್.  ಸ್ಥಾಪನೆಯಾಗಿದ್ದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಲಿಲ್ಲ: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಇಂದಿರಾ ಗಾಂಧಿಯವರು ದೇಶಕ್ಕಾಗಿ ಹುತಾತ್ಮರಾದರು. ಆದರೆ ಅವರ ಆದರ್ಶಗಳು ನಮ್ಮೊಂದಿಗೆ ಇವೆ. ಅವುಗಳನ್ನು ಪಾಲಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಇಂದು ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆ  ಹಾಗೂ ಸರ್ದಾರ್‌ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಾಂಗ್ಲಾದೇಶದ ವಿಮೋಚನಾ ಸಂದರ್ಭದಲ್ಲಿ ವಾಜಪೇಯಿಯವರು ದುರ್ಗೆಯೆಂದು ಇಂದಿರಾ ಅವರನ್ನು ಸಂಭೋಧಿಸಿದ್ದರು. ಪಾಕಿಸ್ತಾನವನ್ನು ಸದೆಬಡೆದು ಬಾಂಗ್ಲಾದೇಶವನ್ನು ವಿಮೋಚನೆಗೊಳಿಸಿದ ಈ ಯುದ್ಧದಲ್ಲಿ ಸುಮಾರು 90 ಸಾವಿರ ಪಾಕಿಸ್ತಾನ ಸೈನಿಕರು ಸೆರೆಯಾಗಿದ್ದರು. ಇಂದಿರಾ ಗಾಂಧಿಯವರ ದಿಟ್ಟತನಕ್ಕೆ ಅವರನ್ನು ಉಕ್ಕಿನ ಮಹಿಳೆ ಎಂದು ಕರೆಯಲಾಗುತ್ತಿತ್ತು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದಿರಾ ಗಾಂಧಿಯವರು ಧೀಮಂತ ನಾಯಕಿ. ದೀರ್ಘ ಕಾಲದವರೆಗೆ ದೇಶವನ್ನಾಳಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಅವಧಿಯಲ್ಲಿ ಬಡತನ ನಿರ್ಮೂಲನೆಗೊಳಿಸುವ ‘ಗರೀಬಿ ಹಠಾವೋ’ ಘೋಷಣೆಯನ್ನು ಮಾಡಿದ್ದರು. ಭಾರತದಲ್ಲಿ ಅಸಮಾನತೆಯಿದೆ. ಇಂದಿರಾಗಾಂಧಿಯವರ ಕಾಲಘಟ್ಟದಲ್ಲಿ ಬಡವರ ಸಂಖ್ಯೆ ಹೆಚ್ಚಿತ್ತು. ಆದ್ದರಿಂದ ಬಡತನ ಹೋಗಲಾಡಿಸಲು 20 ಅಂಶಗಳ  ಕಾರ್ಯಕ್ರಮವನ್ನು ಅವರು ಜಾರಿಗೆ ತಂದರು ಎಂದು ಹೇಳಿದ್ದಾರೆ.

ನಮ್ಮ ಸಂವಿಧಾನ ಎಲ್ಲರಿಗೂ ಬದುಕುವ ಹಕ್ಕನ್ನು ನೀಡಿದೆ. ಜಾತಿವ್ಯವಸ್ಥೆಯಿಂದ ಅಸಮಾನತೆ ಹೆಚ್ಚಿದ್ದು, ಬಹುಸಂಖ್ಯಾತ ಜನರು, ಮಹಿಳೆಯರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಚತುರ್ವರ್ಣ ವ್ಯವಸ್ಥೆಯಲ್ಲಿ ಮೊದಲ ಮೂರು ವರ್ಗಗಳಿಗೆ ಎಲ್ಲ ಅವಕಾಶಗಳು ಸಿಗುತ್ತಿತ್ತು. ಆದರೆ ಮೇಲ್ವರ್ಗದ ಹೆಣ್ಣುಮಕ್ಕಳೂ ಸಹ ಶಿಕ್ಷಣದಿಂದ ವಂಚಿತರಾಗಿದ್ದರು. ಸಮಸಮಾಜ ಪರಿಕಲ್ಪನೆಗೆ ಜೀವತುಂಬಿದ್ದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದರು. ನಮ್ಮ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣವರ ಫೋಟೋವನ್ನು ಅಳವಡಿಸಲು ಆದೇಶ ನೀಡಿದೆ. ಇಂದಿರಾ ಗಾಂಧಿಯವರು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲೇ ನಡೆಯುವ ಪ್ರಯತ್ನವನ್ನು ಮಾಡಿದ್ದರು ಎಂದು ಹೇಳಿದ್ದಾರೆ.

ವಲ್ಲಭಭಾಯಿ ಪಟೇಲರು ದೇಶದ ಉಪ ಪ್ರಧಾನಿಗಳಾಗಿದ್ದರಲ್ಲದೇ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಲ್ಲಿ ಅಗ್ರಗಣ್ಯರು. ಸ್ವಾತಂತ್ರ್ಯ ಗಳಿಸಿದಾಗ ದೇಶದಲ್ಲಿ 562 ಸಂಸ್ಥಾನಗಳನ್ನು ಭಾರತಕ್ಕೆ ಸೇರಿಸಲು ಆಗ ಗೃಹ ಸಚಿವರಾಗಿದ್ದ ಪಟೇಲರ ಪ್ರಯತ್ನವೇ ಕಾರಣ. ಅದಕ್ಕಾಗಿಯೇ ಅವರನ್ನು ಉಕ್ಕಿನ ಮನುಷ್ಯ ಎಂದು ಕರೆಯುತ್ತೇವೆ. ಅವರ 150ನೇ ಜನ್ಮದಿನದಂದು ಗೌರವದಿಂದ ಸ್ಮರಿಸುತ್ತೇನೆ ಎಂದು ಹೇಳಿದ್ದಾರೆ.

ಬಿಜೆಪಿಯವರು ನೆಹರೂ ಅವರನ್ನು ಟೀಕಿಸುತ್ತಾರೆ. ಆದರೆ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಅನೇಕರ ಜೊತೆಗೂಡಿ ಹೋರಾಡಿದರು. ಇಂದು ದೇಶ ಸ್ವತಂತ್ರವಾಗಿದ್ದರೆ ಅದು ಅವರ ಹೋರಾಟದ ಫಲ. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಯೇ ಇಲ್ಲ. ಸಾವರ್ಕರ್, ಗೋಲ್ವಾಲ್ಕರ್ ಆಗಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ. ಈಗ ಬಿಜೆಪಿಯವರು ಮಹಾನ್ ದೇಶಭಕ್ತರಂತೆ ಮಾತನಾಡುತ್ತಾರೆ. ಇದು ಬಿಜೆಪಿಯವರ ಢೋಂಗಿತನ ಎಂದು ಟೀಕಿಸಿದ್ದಾರೆ.

ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದು ಕಾಂಗ್ರೆಸ್ ಹೊರತು ಬೇರ್ಯಾರೂ ಅಲ್ಲ. 1925ರಲ್ಲಿಯೇ ಆರ್.ಎಸ್.ಎಸ್  ಸ್ಥಾಪನೆಯಾಗಿತ್ತು. ಆಗ ಸ್ವಾತಂತ್ರ್ಯ ಹೋರಾಟ ಬಹಳ ಬಿರುಸಾಗಿ ನಡೆಯುತ್ತಿದ್ದ ಕಾಲ. ಕೆ.ಬಿ. ಹೆಡ್ಗೆವಾರ್ ಯಾವತ್ತೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಎಂದು ಆರ್.ಎಸ್.ಎಸ್ ಕಾರ್ಯಕರ್ತರಿಗೆ ಕರೆ ನೀಡಲಿಲ್ಲ. ಸಾವರ್ಕರ್ ಮತ್ತು ಹಿಂದೂ ಮಹಾಸಭಾದ ಅಧ್ಯಕ್ಷ ಗೋಲ್ವಾಲ್ಕರ್ ಇಬ್ಬರೂ ಸಂವಿಧಾನವನ್ನು ವಿರೋಧಿಸಿದವರು. ಮನುವಾದಿಗಳು, ಚತುರ್ವರ್ಣ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟುಕೊಂಡವರು ಯಾವತ್ತೂ ಸಂವಿಧಾನದ ಪರವಾಗಿಲ್ಲ ಎಂದು ಆರೋಪಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular