ದಾವಣಗೆರೆ: ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಕೆರೆ ಕಾಲೋನಿ ಸಮೀಪ ಶುಕ್ರವಾರ ಕಾರ್ ಅಡ್ಡಗಟ್ಟಿದ ದರೋಡೆಕೋರರು ವರ್ತಕನ ಮೇಲೆ ಹಲ್ಲೆ ನಡೆಸಿ 38 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಮೈದೊಳಲು ಗ್ರಾಮದ ವರ್ತಕ ಮಾಲತೇಶ್ ಅವರು ಹಗರಿಬೊಮ್ಮನಹಳ್ಳಿ ತಾಲೂಕಿನ ಮೊರಗೇರಾ ಗ್ರಾಮದಲ್ಲಿದ್ದ 10 ಎಕರೆ ಜಮೀನನ್ನು ಹೊಸಪೇಟೆಯ ವೈದ್ಯರೊಬ್ಬರಿಗೆ ಮಾರಾಟ ಮಾಡಿದ್ದರು. ಶುಕ್ರವಾರ ಜಮೀನಿನ ನೋಂದಣಿ ಪ್ರಕ್ರಿಯೆ ಮುಗಿಸಿ 1.25 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ವ್ಯಕ್ತಿಯೊಬ್ಬರಿಂದ ಪಡೆದ ಸಾಲದ ಹಣ ತೀರಿಸಿ ಉಳಿದ 76 ಲಕ್ಷ ರೂ.ಗಳನ್ನು ಬ್ಯಾಗ್ ನಲ್ಲಿ ಇಟ್ಟುಕೊಂಡು ಸ್ನೇಹಿತನೊಂದಿಗೆ ಕಾರ್ ನಲ್ಲಿ ಗ್ರಾಮಕ್ಕೆ ತೆರಳುವಾಗ ಘಟನೆ ನಡೆದಿದೆ.
ಮಲೆಬೆನ್ನೂರು ಸಮೀಪ ಹಿಂದಿನಿಂದ ಬಂದ ಕಾರ್ ಇವರ ಕಾರ್ ಗೆ ಡಿಕ್ಕಿಯಾಗಿದೆ. ಗಾಬರಿಯಾದ ಮಾಲತೇಶ್ ಕಾರ್ ಅನ್ನು ವೇಗವಾಗಿ ಚಲಾಯಿಸಿದ್ದಾರೆ. ಆದರೂ ಬೆನ್ನತ್ತಿದ್ದ ದುಷ್ಕರ್ಮಿಗಳು ಹೊನ್ನಾಳಿ ತಾಲೂಕಿನ ಅರಕೆರೆ ಕಾಲೋನಿ ಬಳಿ ಕಾರ್ ಅಡ್ಡಗಟ್ಟಿದ್ದಾರೆ. ನಮ್ಮ ಕಾರಿಗೆ ಗುದ್ದಿದ್ದೀರಿ ಎಂದು ಜಗಳ ತೆಗೆದು ಹಲ್ಲೆ ಮಾಡಿದ್ದಾರೆ. ಜೀವ ಭಯದಿಂದ ಮಾಲತೇಶ್ ಮತ್ತು ಸ್ನೇಹಿತ ದೂರ ಓಡಿದಾಗ ಕಿಡಿಗೇಡಿಗಳು ಕಾರ್ ನಲ್ಲಿದ್ದ 38 ಲಕ್ಷ ರೂ. ಹಣ ಇದ್ದ ಚೀಲ ಎತ್ತಿಕೊಂಡು ಪರಾರಿಯಾಗಿದ್ದಾರೆ. ಉಳಿದ ಹಣವಿದ್ದ ಚೀಲ ಕಾರ್ ನಲ್ಲೇ ಉಳಿದಿದೆ. ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

