ಶಿವಮೊಗ್ಗ: ಬಹುಮಾನದ ಸ್ಕೀಮ್ ಯೋಜನೆಯಡಿ ಗ್ರಾಹಕರಿಗೆ ಸುಮಾರು 3 ಕೋಟಿ ರೂ. ವಂಚಿಸಿದ್ದ ಉಡುಪಿ ಮೂಲದ ಆರೋಪಿಯನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಅಬ್ದುಲ್ ರಜಾಕ್ ಬಂಧಿತ ಆರೋಪಿ. ವಂಚನೆಗೊಳಗಾದ ಹೊಸನಗರದ ನಿವಾಸಿ ನಿಹಾಲ್ ಎಂಬುವರು ದೂರು ನೀಡಿದ್ದರು. ಅಯಾನ್ ಗ್ರೂಪ್ ಮಾಲೀಕ ಅಬ್ದುಲ್ ರಜಾಕ್, ಶೇಖ್ ಮೊಹಮ್ಮದ್ ಫಜಲ್ ಎಂಬುವವರು ತಮಗೆ 2023ರಲ್ಲಿ ಪರಿಚಯವಾಗಿದ್ದು, ತಮ್ಮ ಸಂಸ್ಥೆಯಲ್ಲಿ ಕೆಲ ತಿಂಗಳಿಗೆ ಹಣ ಕಟ್ಟಿದ್ದಲ್ಲಿ ಕೊನೆಯಲ್ಲಿ ಉತ್ತಮ ಬಹುಮಾನ ಸಿಗಲಿದೆ. ಗೃಹಪಯೋಗಿ ವಸ್ತುಗಳನ್ನು ನೀಡಲಾಗುವುದು ಎಂದು ತಿಳಿಸಿದ್ದರು.
ಹೀಗಾಗಿ ತಾವು ತಮ್ಮ ಗ್ರಾಹಕರಿಂದ ಹಣ ಕಟ್ಟಿಸಿದ್ದು, ಒಟ್ಟು 24 ಲಕ್ಷ ರೂ. ಹಣ ಕಟ್ಟಲಾಗಿದೆ. ಆದರೆ ಸ್ಕೀಮ್ ಅವಧಿ ಮುಗಿದ ನಂತರ ಹಣ ನೀಡಿರುವುದಿಲ್ಲ, ಸಂಸ್ಥೆಯ ಕಚೇರಿ ಮುಚ್ಚಲಾಗಿದೆ. ಇದೇ ರೀತಿ 1900ಕ್ಕೂ ಹೆಚ್ಚು ಮಂದಿಗೆ ಹಣ ನೀಡಬೇಕಿದ್ದು, ಸುಮಾರು ಮೂರು ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ನಿಹಾಲ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಅಬ್ದುಲ್ ರಜಾಕ್ ನನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

