HomeKarnatakaಮಹಾನಗರಗಳಿಗೆ 2000 ಕೋಟಿ ರೂ. ಅನುದಾನ: ಗಾಜನೂರು ಬಳಿ ನೀರು ಶುದ್ಧೀಕರಣ ಘಟಕ ನಿರ್ಮಾಣ

ಮಹಾನಗರಗಳಿಗೆ 2000 ಕೋಟಿ ರೂ. ಅನುದಾನ: ಗಾಜನೂರು ಬಳಿ ನೀರು ಶುದ್ಧೀಕರಣ ಘಟಕ ನಿರ್ಮಾಣ

ಬೆಳಗಾವಿ(ಸುವರ್ಣಸೌಧ): ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಗಾಜನೂರು ಬಳಿ ಹೊಸದಾಗಿ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಸ್ಥಳ ಅರಣ್ಯ ಪ್ರದೇಶದಲ್ಲಿ ಇರುವುದರಿಂದ ಶೀಘ್ರವೇ ಅರಣ್ಯ ಇಲಾಖೆಯಿಂದ ಎನ್.ಓ.ಸಿ ಪಡೆದು ಕಾಮಗಾರಿ ಪ್ರಾರಂಭಿಸಲು ಪ್ರಯತ್ನಿಸಲಾಗುತ್ತಿದೆ. ಒಂದು ವೇಳೆ ಎನ್.ಓ.ಸಿ ಲಭಿಸದಿದ್ದರೆ, ಸೂಕ್ತವಾದ ಬದಲಿ ಜಾಗವನ್ನು ಸಹ ಗುರುತಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಹೇಳಿದರು.

ಬೆಳಗಾವಿ ಸುವರ್ಣಸೌಧಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಶುಕ್ರವಾರ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರ ಚುಕ್ಕೆ ಗುರುತಿನ ಪ್ರಶ್ನಗೆ ಅವರು ಉತ್ತರಿಸಿದರು.

ಶಿವಮೊಗ್ಗ ನಗರಕ್ಕೆ ನೀರು ಸರಬರಾಜು ಮಾಡುತ್ತಿರುವ ಕೃಷ್ಣ ರಾಜೇಂದ್ರ ನೀರು ಸರಬರಾಜು ಕೇಂದ್ರದಲ್ಲಿ 1976ರಲ್ಲಿ 13.62 ಎಂ.ಎಲ್.ಡಿ, 1996ರಲ್ಲಿ 13.38 ಎಂ.ಎಲ್.ಡಿ ಹಾಗೂ 2009 ರಲ್ಲಿ 57 ಎಂ.ಎಲ್.ಡಿ ಸೇರಿ ಒಟ್ಟು 84 ಎಂ.ಎಲ್.ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 1976 ಮತ್ತು 1996ರಲ್ಲಿ ನಿರ್ಮಿಸಿರುವ ಶುದ್ಧೀಕರಣ ಘಟಕಗಳು ಶಿಥಿಲಾವಸ್ಥೆಯಲ್ಲಿವೆ. ಇವುಗಳ ಬದಲು ಹೊಸದಾಗಿ ಶುದ್ಧೀಕರಣ ಘಟಕ ನಿರ್ಮಿಸಲು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸ್ಥಳಾವಕಾಶ ಇಲ್ಲದ ಕಾರಣ, ಗಾಜನೂರು ಅರಣ್ಯ ಪ್ರದೇಶದಲ್ಲಿ ಸ್ಥಳ ಗುರುತಿಸಲಾಗಿದೆ. ಈ ಸ್ಥಳದಿಂದ ಗುರುತ್ವಾಕರ್ಷಣೆ ಮೂಲಕ ಶಿವಮೊಗ್ಗ ನೀರು ಸರಬರಾಜು ಮಾಡಬಹುದು. ಈ ಸಂಬಂಧ ಸರ್ವೆ ಕಾರ್ಯ ಹಾಗೂ ವಿಸ್ತೃತ ಯೋಜನಾ ವರದಿಯನ್ನು ಸಿದ್ದಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿವಮೊಗ್ಗ ನಗರದಲ್ಲಿ ಶೇ.74 ರಷ್ಟು ಒಳಚರಂಡಿ ವ್ಯವಸ್ಥೆ ಇದೆ. ರೂ.115 ಕೋಟಿ ವೆಚ್ಚದಲ್ಲಿ 3ನೇ ಹಂತದ ಸಮಗ್ರ ಒಳಚರಂಡಿ ಯೋಜನೆಯಡಿ, ಏರೇಟೆಡ್ ಲಗೂನ್ ತಂತ್ರಜ್ಞಾನ ಆಧರಿಸಿ 35.58 ಎಂ.ಎಲ್.ಡಿ ತ್ಯಾಜ್ಯ ನೀರು ಶುದ್ದೀಕರಣ ಘಟಕ, 03 ವೆಟ್‌ವೆಲ್, 262 ಕಿ.ಮೀ ಉದ್ದದ ಗ್ರಾಮಸಾರ ಕೊಳವೆ ಮಾರ್ಗವನ್ನು ನಿರ್ಮಿಸಲಾಗಿದೆ. ಅಮೃತ್ ಯೋಜನೆಯಡಿ ರೂ.58 ಕೋಟಿ ಹಾಗೂ ರೂ.7 ಕೋಟಿ ಹೆಚ್ಚುವರಿ ಅನುದಾನದಡಿ ಮಹಾನಗರ ವ್ಯಾಪ್ತಿಯ ವಿವಿಧ ಪ್ರದೇಶದಲ್ಲಿ ಗೃಹ ಸಂಪರ್ಕಿತ ಒಳಚರಂಡಿ ಕೊಳವೆ ಮಾರ್ಗ, ಹಳೆ ಕೊಳವೆ ಮಾರ್ಗಗಳ ಪುನರುಜ್ಜೀವನ, 4 ವೆಟ್‌ವಲ್, 6 ಪಂಪಿAಗ್ ಮೆಷನರಿ, ಡಿ.ಜಿ. ರೂಮ್, ಡಿ.ಜೆ.ಸೆಟ್ ಮತ್ತು ಟ್ರಾನ್ಸ್ ಫಾರ್ಮರ್ ಸಬ್ ಸ್ಟೇಷನ್, 11 ಕೆ.ವಿ. ಎಕ್ಸ್ ಪ್ರೆಸ್ ಫೀಡರ್ ವಿದ್ಯುತ್ ಲೈನ್, 5.13 ಎಂ.ಎಲ್.ಡಿ ಸಾಮರ್ಥ್ಯದ ತ್ಯಾಜ್ಯ ನೀರಿನ ಶುದ್ದೀಕರಣ ಘಟಕ ನಿರ್ಮಿಸಲಾಗಿದೆ. ಈ ಎಲ್ಲಾ ಕಾಮಗಾರಿಗಳು ಸುಸ್ಥಿತಿಯಲ್ಲಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ನಗರದಲ್ಲಿ ಹಾದುಹೋಗಿರುವ ತುಂಗಾ ನದಿಗೆ ಕೊಳಚೆ ನೀರು ಸೇರದಂತೆ ತಡೆಯಲು ಒಳಚರಂಡಿ ವ್ಯವಸ್ಥೆಯಲ್ಲಿನ ಮಿಸಿಂಗ್ ಲಿಂಕ್ಸ್ ಸ್ಥಳಗಳಲ್ಲಿಯೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ 40 ಕೋಟಿ ರೂ. ಅನುದಾನದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಿ, ತ್ಯಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸುವುದಾಗಿ ತಿಳಿಸಿದ್ದಾರೆ.

ಮಹಾನಗರಗಳಿಗೆ 2000 ಕೋಟಿ ರೂ.ಅನುದಾನ:

ಸರ್ಕಾರ ರಾಜ್ಯ ಹಣಕಾಸು ನಿಗಮದಿಂದ ಬೃಹತ್ ಬೆಂಗಳೂರು ಸೇರಿ ಇತರೆ 10 ಮಹಾನಗರ ಪಾಲಿಕೆಗಳಿಗೆ ಒಟ್ಟು 2000 ರೂ. ಕೋಟಿ ಅನುದಾನ ನೀಡಿದೆ. ಇದರಲ್ಲಿ ಶಿವಮೊಗ್ಗ ನಗರಕ್ಕೆ 140 ಕೋಟಿ ರೂ.ಅನುದಾನವನ್ನು ಒದಗಿಸಲಾಗಿದೆ ಎಂದು ಸಚಿವ ಬೈರತಿ ಸುರೇಶ್ ಸದನದಲ್ಲಿ ಮಾಹಿತಿ ನೀಡಿದರು.

ಶಾಸಕ ಚನ್ನಬಸಪ್ಪ ಅವರು ರಾಜ್ಯ ಹಣಕಾಸು ನಿಗಮದಿಂದ ನೀಡಿದ ಅನುದಾನದಲ್ಲಿ ಶೇ.20 ರಷ್ಟು ಮಾತ್ರ ಕುಡಿಯುವ ನೀರಿನ ಕಾಮಗಾರಿಗಳಿಗೆ ಬಳಸಿಕೊಳ್ಳಲು ಅವಕಾಶವಿದೆ. ಈ ಮಿತಿಯನ್ನು ಸಡಿಲಗೊಳಿಸಿ ಹೆಚ್ಚಿನ ಅನುದಾನವನ್ನು ಕುಡಿಯುವ ನೀರಿನ ಕಾಮಗಾರಿಗಳಿಗೆ ಬಳಸಿಕೊಳ್ಳಲು ಸರ್ಕಾರ ಅನುಮತಿ ನೀಡುವಂತೆ ಕೋರಿದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular