ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪರವಾಗಿ ರೊನಾಲ್ಡೊ ಮತ್ತು ಡೇವಿಡ್ ಬೆಕ್‌ಹ್ಯಾಮ್ ಹೆಸರಿನ ಸ್ಪರ್ಧಿಗಳು ಕಣಕ್ಕಿಳಿದಿರುವುದು ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಗಮನ ಸೆಳೆದಿದೆ. ವಿಶ್ವಪ್ರಸಿದ್ಧ ಫುಟ್‌ಬಾಲ್ ದೈತ್ಯರ ಹೆಸರುಗಳನ್ನು ನೆನಪಿಸುವ ಈ ಜೋಡಿ ವಾಸ್ತವವಾಗಿ ಫುಟ್‌ಬಾಲ್ ಆಟಗಾರರಲ್ಲ, ಬದಲಿಗೆ ಭಾರತವನ್ನು ಸೈಕ್ಲಿಂಗ್ ವಿಭಾಗದಲ್ಲಿ ಪ್ರತಿನಿಧಿಸುತ್ತಿರುವ ಸೈಕ್ಲಿಂಗ್ ಪಟುಗಳಾಗಿದ್ದಾರೆ.
ಭಾರತದ ಟ್ರ್ಯಾಕ್ ಸೈಕ್ಲಿಂಗ್ ತಂಡದಲ್ಲಿರುವ ರೊನಾಲ್ಡೊ ಸಿಂಗ್ ಲೈಟೋನ್ಜಾಮ್ ಮತ್ತು ಡೇವಿಡ್ ಬೆಕ್‌ಹ್ಯಾಮ್ ಎಲ್ಕಾಟೋಹಚೂಂಗೊ ತಮ್ಮ ವಿಶಿಷ್ಟ ಹೆಸರುಗಳಿಂದಲೇ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದಾರೆ. ಮಣಿಪುರ ಮೂಲದ ರೊನಾಲ್ಡೊ ಸಿಂಗ್ ಭಾರತದ ಪ್ರಮುಖ ಸ್ಪ್ರಿಂಟ್ ಸೈಕ್ಲಿಸ್ಟ್ ಆಗಿದ್ದು, ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಇತಿಹಾಸ ಹೊಂದಿದ್ದಾರೆ. ಕುತೂಹಲಕಾರಿ ಎಂದರೆ ಇವರಿಗೆ ಪೋರ್ಚುಗಲ್ ಕ್ರೀಡಾಪಟು ಕ್ರಿಸ್ಟಿಯಾನೋ ರೊನಾಲ್ಡೊ ಬದಲು ಬ್ರೆಜಿಲ್‌ನ ರೊನಾಲ್ಡಿನೋ ಪ್ರೇರಣೆಯಿಂದ ಈ ಹೆಸರು ಇಡಲಾಗಿತ್ತು.
ಇನ್ನೊಂದೆಡೆ, ಅಂಡಮಾನ್ ಮತ್ತು ನಿಕೋಬಾರ್ ಮೂಲದ ಡೇವಿಡ್ ಬೆಕ್‌ಹ್ಯಾಮ್ ಎಲ್ಕಾಟೋಹಚೂಂಗೊ ಸಹ ಭಾರತದ ಅತ್ಯಂತ ವೇಗದ ಸೈಕ್ಲಿಂಗ್ ಪಟುಗಳಲ್ಲಿ ಒಬ್ಬರಾಗಿದ್ದು, ಹಲವು ರಾಷ್ಟ್ರೀಯ ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಸರ್ ಕ್ರಿಸ್ ಹಾಯ್ ವೆಲೋಡ್ರೋಮ್‌ನಲ್ಲಿ ನಡೆದ ಪುರುಷರ ಟೀಮ್ ಸ್ಪ್ರಿಂಟ್ ಅರ್ಹತಾ ಸುತ್ತಿನಲ್ಲಿ ಇವರಿಬ್ಬರು ಭಾರತದ ಪರವಾಗಿ ಸ್ಪರ್ಧಿಸಿದಾಗ ಸೋಶಿಯಲ್ ಮೀಡಿಯಾದಲ್ಲಿ ಈ ಹೆಸರುಗಳು ತೀವ್ರ ವೈರಲ್ ಆದವು.
ಆರಂಭದಲ್ಲಿ ಫುಟ್‌ಬಾಲ್ ತಾರೆಗಳೇ ಕಣಕ್ಕಿಳಿದಿದ್ದಾರೆ ಎಂದು ಭಾವಿಸಿದ್ದ ಜಾಗತಿಕ ಅಭಿಮಾನಿಗಳು, ಬಳಿಕ ಇಬ್ಬರೂ ಭಾರತದ ಉದಯೋನ್ಮುಖ ಸೈಕ್ಲಿಂಗ್ ತಾರೆಗಳು ಎಂಬ ಸತ್ಯ ತಿಳಿದು ಆಶ್ಚರ್ಯಚಕಿತರಾದರು. ಈ ಜೋಡಿ ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಪಡೆದು ಮುಂದಿನ ಹಂತ ತಲುಪಲು ಸಾಧ್ಯವಾಗದಿದ್ದರೂ, ಭಾರತೀಯ ಸೈಕ್ಲಿಂಗ್ ಕ್ಷೇತ್ರಕ್ಕೆ ಜಾಗತಿಕ ಮಟ್ಟದಲ್ಲಿ ಹೊಸ ಗುರುತು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

