ಬೆಂಗಳೂರು: ಪ್ರಪಂಚದ ನಕ್ಷೆಯಲ್ಲಿ ಹುಡುಕಿದರೆ ಒಂದು ಸಣ್ಣ ಚುಕ್ಕೆಯಂತೆ ಕಾಣುವ ದೇಶವೊಂದು ಇಂದು ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಿದೆ. ಅದೇ ಯುರೋಪ್ ಖಂಡದ ಲಿಚ್ಟೆನ್‌ಸ್ಟೈನ್. ವಿಶೇಷವೆಂದರೆ, ಈ ದೇಶಕ್ಕೆ ತನ್ನದೇ ಆದ ಕರೆನ್ಸಿ ಇಲ್ಲ, ಕನಿಷ್ಠ ಒಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣವೂ ಇಲ್ಲ ಆದರೂ ಇಲ್ಲಿನ ಜನರ ತಲಾ ಆದಾಯ ವಿಶ್ವದಲ್ಲೇ ಅತ್ಯಧಿಕ. ಈ ದೇಶದ ಯಶಸ್ಸಿನ ಮಂತ್ರವೇ ಒಂದು ರೋಚಕ ಕಥೆ.
ಸ್ವಂತ ಕರೆನ್ಸಿ ಇಲ್ಲದಿದ್ದರೂ ಕಿಂಗ್
ಸಾಮಾನ್ಯವಾಗಿ ಪ್ರತಿ ದೇಶವೂ ತನ್ನದೇ ಆದ ಕರೆನ್ಸಿ ಮತ್ತು ವಿಮಾನಯಾನ ಸಂಸ್ಥೆಯನ್ನು ಸಾರ್ವಭೌಮತ್ವದ ಸಂಕೇತವೆಂದು ಭಾವಿಸುತ್ತದೆ. ಆದರೆ ಲಿಚ್ಟೆನ್‌ಸ್ಟೈನ್ ಭಿನ್ನವಾಗಿ ಯೋಚಿಸಿತು. ನಮ್ಮದೇ ಕರೆನ್ಸಿ ಸೃಷ್ಟಿಸಿ ಅದರ ಏರಿಳಿತದ ಹೊರೆ ಹೊರುವ ಬದಲು, ನೆರೆಯ ಸ್ವಿಟ್ಜರ್‌ಲ್ಯಾಂಡ್‌ನ ಸೌಲಭ್ಯವನ್ನೇ ಏಕೆ ಬಳಸಬಾರದು? ಎಂದು ಯೋಚಿಸಿ ಸ್ವಿಸ್ ಫ್ರಾಂಕ್ಅನ್ನು ಅಳವಡಿಸಿಕೊಂಡಿತು. ಇದರಿಂದ ಕೇಂದ್ರ ಬ್ಯಾಂಕ್ ನಿರ್ವಹಣಾ ವೆಚ್ಚ ಉಳಿತಾಯವಾಯಿತು. ಹಾಗೆಯೇ, ಶತಕೋಟಿ ಡಾಲರ್ ಖರ್ಚು ಮಾಡಿ ವಿಮಾನ ನಿಲ್ದಾಣ ಕಟ್ಟುವ ಬದಲು, ನೆರೆಯ ದೇಶಗಳ ಸಾರಿಗೆ ಮಾರ್ಗವನ್ನೇ ಬುದ್ಧಿವಂತಿಕೆಯಿಂದ ಬಳಸಿಕೊಳ್ಳುತ್ತಿದೆ.
ಜನರಿಗಿಂತ ಕಂಪನಿಗಳೇ ಜಾಸ್ತಿ
ಲಿಚ್ಟೆನ್‌ಸ್ಟೈನ್ ಕೇವಲ ರಹಸ್ಯ ಬ್ಯಾಂಕ್ ಖಾತೆಗಳಿಗೆ ಸೀಮಿತವಾದ ದೇಶವಲ್ಲ. ಇದರ ಅಸಲಿ ಶಕ್ತಿ ಇರುವುದು ‘ಉದ್ಯಮ ಮತ್ತು ನಾವೀನ್ಯತೆ’ಯಲ್ಲಿ. ದಂತವೈದ್ಯಶಾಸ್ತ್ರದಲ್ಲಿ ಬಳಸುವ ಮೈಕ್ರೋ-ಡ್ರಿಲ್‌ಗಳಿಂದ ಹಿಡಿದು ಏರೋಸ್ಪೇಸ್ ತಂತ್ರಜ್ಞಾನದವರೆಗೆ ಎಲ್ಲವನ್ನೂ ಇಲ್ಲಿ ತಯಾರಿಸಲಾಗುತ್ತದೆ. ಜಗತ್ಪ್ರಸಿದ್ಧ ಹಿಲ್ಟಿ (Hilti) ಕಂಪನಿಯ ಹುಟ್ಟೂರೇ ಇದು. ಆಶ್ಚರ್ಯದ ವಿಷಯವೆಂದರೆ, ಈ ದೇಶದ ಜನಸಂಖ್ಯೆಗಿಂತ ಇಲ್ಲಿ ನೋಂದಾಯಿತವಾಗಿರುವ ಕಂಪನಿಗಳ ಸಂಖ್ಯೆಯೇ ಹೆಚ್ಚು! ಹೀಗಾಗಿ ಇಲ್ಲಿ ನಿರುದ್ಯೋಗ ಎಂಬ ಪದವೇ ಕೇಳಿಬರುವುದಿಲ್ಲ.
ಬುದ್ಧಿವಂತಿಕೆಯೇ ಬಂಡವಾಳ
ನಮ್ಮಲ್ಲಿ ಇಲ್ಲದ್ದನ್ನು ಸೃಷ್ಟಿಸಲು ಒದ್ದಾಡುವ ಬದಲು, ಇರುವುದನ್ನೇ ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬ ಪ್ರಾಯೋಗಿಕ ನಿರ್ಧಾರವೇ ಈ ದೇಶವನ್ನು ಇಂದು ವಿಶ್ವದ ಆರ್ಥಿಕ ನಕ್ಷೆಯಲ್ಲಿ ಉತ್ತುಂಗಕ್ಕೆ ಏರಿಸಿದೆ. ಕೇವಲ 160 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದ್ದರೂ, ತನ್ನ ಸ್ಥಿರ ಆರ್ಥಿಕತೆಯಿಂದಾಗಿ ಜಗತ್ತಿಗೆ ಮಾದರಿಯಾಗಿದೆ.

