ಬೆಂಗಳೂರು- ರಾಜ್ಯದಲ್ಲಿ ಅರಣ್ಯ ಮತ್ತು ಕೃಷಿ ಭೂಮಿ ಹೊರತುಪಡಿಸಿ ಒಟ್ಟು 3251707-06 ಎಕರೆ / ಗುಂಟೆ ಸರ್ಕಾರಿ ಭೂಮಿ ವಿಸ್ತೀರ್ಣವಿದೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು.
ಅವರು ಇಂದು ವಿಧಾನ ಪರಿಷತ್ ಸದಸ್ಯರಾದ ಶಿವಕುಮಾರ್ ಕೆ. ಅವರ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿ ಮಾತನಾಡಿದರು.
ಜಮೀನು ಮಂಜೂರಾತಿ / ಗುತ್ತಿಗೆ ನೀಡಿರುವ ಪ್ರಕರಣಗಳಲ್ಲಿ ಷರತ್ತು ಉಲ್ಲಂಘಿಸಿರುವ ಸಂಸ್ಥೆಗಳ ಮಂಜೂರಾತಿಯನ್ನು ರದ್ದುಪಡಿಸುವ ಕುರಿತಂತೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ಅನ್ವಯ ವಿವಿಧ ಸಂಸ್ಥೆಗಳಿಗೆ ಜಮೀನು ಮಂಜೂರಾತಿ / ಗುತ್ತಿಗೆಗೆ ನೀಡಲಾದ ಜಮೀನುಗಳ ಮಂಜೂರಾತಿ ಷರತ್ತು / ಗುತ್ತಿಗೆ ಷರತ್ತು ಉಲ್ಲಂಘನೆ ಪ್ರಕರಣಗಳಾದ ಜಮೀನಿನ ನಿಗದಿತ ಉದ್ದೇಶ ಹೊರತುಪಡಿಸಿ ಇತರೆ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿರುವ, ಮಂಜೂರಾತಿ ಉದ್ದೇಶಕ್ಕೆ ಜಮೀನನ್ನು ಬಳಕೆ ಮಾಡಿಕೊಳ್ಳದ, ಗುತ್ತಿಗೆ ಅವಧಿ ಮುಕ್ತಾಯಗೊಂಡು ಗುತ್ತಿಗೆ ನವೀಕರಿಸದ, ಉಪ ಗುತ್ತಿಗೆ ನೀಡಿರುವ, ಗುತ್ತಿಗೆ ಮೊತ್ತ ಪಾವತಿಯಾಗದ ಹಾಗೂ ಇನ್ನಿತರೆ ಷರತ್ತುಗಳ ಉಲ್ಲಂಘನೆಯಾಗಿರುವ ಸಂಸ್ಥೆಗಳ ಮಂಜೂರಾತಿಯನ್ನು ರದ್ದುಪಡಿಸಲು ನಿಯಮಾನುಸಾರ ಸೂಕ್ತ ಕ್ರಮಕೈಗೊಳ್ಳುವಂತೆ ಮತ್ತು ಸರ್ಕಾರದ ಆದೇಶದನ್ವಯ ಮಂಜೂರಾತಿ / ಗುತ್ತಿಗೆ ನೀಡಲಾದ ಪ್ರಕರಣಗಳಲ್ಲಿ ಮಂಜೂರಾತಿ / ಗುತ್ತಿಗೆ ಷರತ್ತು ಉಲ್ಲಂಘಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಂಜೂರಾತಿಯನ್ನು ರದ್ದುಗೊಳಿಸಲು ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಮುಂದುವರೆದು, ಗುತ್ತಿಗೆ ನೀಡಿರುವ ಸರ್ಕಾರಿ ಜಮೀನುಗಳನ್ನು ಪ್ರಕರಣವಾರು ಪರಾಮರ್ಶಿಸಿ, ಗುತ್ತಿಗೆ ಷರತ್ತುಗಳು ಪಾಲನೆಯಾಗಿರುವ ಬಗ್ಗೆ, ಗುತ್ತಿಗೆ ಹಣ ಕಾಲ ಕಾಲಕ್ಕೆ ಪಾವತಿಸಿರುವ ಬಗ್ಗೆ, ಗುತ್ತಿಗೆ ಮುಗಿದಿರುವ ಪ್ರಕರಣಗಳಲ್ಲಿ ಸರ್ಕಾರಿ ಜಮೀನು ಹಿಂಪಡೆಯುವ ಬಗ್ಗೆ ಜಿಲ್ಲಾಧಿಕಾರಿಗಳು ಪರಾಮರ್ಶಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಭೂ ಮಂಜೂರಾತಿಯಾದ ಪ್ರಕರಣಗಳಲ್ಲಿಯೂ ಸಹ ಮಂಜೂರಾತಿ ಷರತ್ತು ಮತ್ತು ನಿಬಂಧನೆಗಳು ಪಾಲನೆಯಾಗಿರುವ ಬಗ್ಗೆ ಪರಾಮರ್ಶಿಸಿ, ಉಲ್ಲಂಘನೆಯಾಗಿರುವ ಪ್ರಕರಣಗಳಲ್ಲಿ ಕಾನೂನು ಕ್ರಮಗಳನ್ನು ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

