HomeKarnatakaಮೀಸಲಾತಿ ಗೊಂದಲ ಸರಿಪಡಿಸುತ್ತೇವೆ: ಸಿಎಂ ಸಿದ್ಧರಾಮಯ್ಯ; SC/ST ಮೀಸಲಾತಿ ಹೆಚ್ಚಳ 9ನೇ ಶೆಡ್ಯೂಲ್ ನಲ್ಲಿ ಸೇರಿಸಲು...

ಮೀಸಲಾತಿ ಗೊಂದಲ ಸರಿಪಡಿಸುತ್ತೇವೆ: ಸಿಎಂ ಸಿದ್ಧರಾಮಯ್ಯ; SC/ST ಮೀಸಲಾತಿ ಹೆಚ್ಚಳ 9ನೇ ಶೆಡ್ಯೂಲ್ ನಲ್ಲಿ ಸೇರಿಸಲು ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಿರುವುದನ್ನು ಸಂವಿಧಾನದ 9ನೇ ಶೆಡ್ಯೂಲ್‌ ನಲ್ಲಿ ಸೇರಿಸಲು ನಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಬಿಜೆಪಿ ಸರ್ಕಾರವು ತರಾತುರಿಯಲ್ಲಿ ಮೀಸಲಾತಿ ಹೆಚ್ಚಳ ಮಾಡಿರುವುದು ಚುನಾವಣಾ ಗಿಮಿಕ್‌ ಆಗಿತ್ತು. ಮೀಸಲಾತಿ ಹೆಚ್ಚಳ ಕುರಿತ ಕಾಯ್ದೆ ಜಾರಿಗೊಳಿಸಿದರೂ ಅದನ್ನು ಸಂವಿಧಾನದ 9ನೇ ಶೆಡ್ಯೂಲ್‌ ಗೆ ಸೇರ್ಪಡೆಗೊಳಿಸಲು ಚುನಾವಣೆ ಘೋಷಣೆಯ ಎರಡು ದಿನ ಮೊದಲಷ್ಟೇ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು ಎಂದು ಟ್ವೀಟ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಹಾಗೂ ಪರಿಶಿಷ್ಟ ಜಾತಿ ಒಳ ಮೀಸಲಾತಿ ಕಲ್ಪಿಸುವ ನೆಪದಲ್ಲಿ ಹಿಂದಿನ ಸರ್ಕಾರ ಗೊಂದಲ ಸೃಷ್ಟಿಸಿದೆ. ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ ಮೀಸಲಾತಿ ಕಲ್ಪಿಸುವಂತೆ ತಾವು ನೀಡಿದ್ದ ಸಲಹೆಯನ್ನು ನಿರ್ಲಕ್ಷಿಸಿದ ಪರಿಣಾಮ ವಿವಿಧ ಸಮುದಾಯಗಳ ವಿರೋಧ ಎದುರಿಸುವಂತಾಯಿತು. ಸಾಮಾಜಿಕ ನ್ಯಾಯದ ಕುರಿತು ಬದ್ಧತೆ ಇಲ್ಲದೆ ಹೋದರೆ ಇಂತಹ ಗೊಂದಲಗಳಾಗುತ್ತವೆ ಎಂದು ಹೇಳಿದ್ದಾರೆ.

ಜನಸಂಘ ಹಾಗೂ ಬಿಜೆಪಿ ಹಿಂದಿನಿಂದಲೂ ಮೀಸಲಾತಿ ವಿರೋಧಿ ನಿಲುವನ್ನೇ ಹೊಂದಿದ್ದವು. ಈಗ ಮೀಸಲಾತಿ ಹೆಚ್ಚಿಸಿರುವುದು ರಾಜಕೀಯ ಗಿಮಿಕ್. ಇಂಥವರ ಕುರಿತು ನಾವು ಎಚ್ಚರದಿಂದಿರಬೇಕು ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಜನ ಬದಲಾವಣೆ ಬಯಸಿ ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ಅವಕಾಶ ನೀಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ಯಾವತ್ತೂ ಜಾತ್ಯತೀತ ಪಕ್ಷವಾಗಿದ್ದು, ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ, ಸಾಮಾಜಿಕ ನ್ಯಾಯದ ನಿಲುವಿನಲ್ಲಿ ರಾಜಿ ಇಲ್ಲ. ನಮ್ಮ ಸರ್ಕಾರವು ಮೀಸಲಾತಿಯಲ್ಲಿನ ಎಲ್ಲ ಗೊಂದಲಗಳನ್ನು ಸರಿಪಡಿಸಲಿದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಹಲವು ಶತಮಾನಗಳಿಂದ ಅವಕಾಶ ವಂಚಿತರಾದವರಿಗೆ ಈಗ ಅವಕಾಶ ಒದಗಿಸುವ ಮೂಲಕ ಅಸಮಾನತೆಯನ್ನು ನಿವಾರಿಸಿ ಸಮಾನತೆಯನ್ನು ಕಲ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹಿಂದೆ ನಮ್ಮ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು 162 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಂಡಿತ್ತು. ಸಮೀಕ್ಷೆಯ ವರದಿಯನ್ನು ಸ್ವೀಕರಿಸಲು ಹಿಂದಿನ ಸರ್ಕಾರಗಳು ಹಿಂದೇಟು ಹಾಕಿದವು. ಇದೀಗ ನಮ್ಮ ಸರ್ಕಾರ ಈ ವರದಿಯನ್ನು ಸ್ವೀಕರಿಸಲಿದೆ. ವಸ್ತು ಸ್ಥಿತಿಯನ್ನು ಆಧರಿಸಿ, ಜನರಿಗೆ ಶಿಕ್ಷಣ, ಉದ್ಯೋಗ, ಉದ್ಯಮ ಹೀಗೆ ವಿವಿಧ ವಲಯಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಿದೆ ಎಂದಿದ್ದಾರೆ.

ಹಿಂದೆ ನಾವು ಅಧಿಕಾರದಲ್ಲಿದ್ದಾಗ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್‌ ಮೊದಲಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದೆವು. ಇದೀಗ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ. ಇದಕ್ಕೆ ಸುಮಾರು 59,000 ಕೋಟಿ ರೂ. ವಾರ್ಷಿಕ ವೆಚ್ಚವಾಗಲಿದೆ. ನಾಡಿನ ಎಲ್ಲಾ ವರ್ಗಗಳ ಜನರ ಕಲ್ಯಾಣ ನಮಗೆ ಮುಖ್ಯ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular