ನವದೆಹಲಿ: ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಡಗರ-ಸಂಭ್ರಮ ಮನೆ ಮಾಡಿದೆ. ಜನವರಿ 26 ದೇಶದ ಸಂವಿಧಾನವನ್ನು ಅಂಗೀಕರಿಸಿದ ಸುದಿನ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಸೇನಾಬಲವನ್ನು ಪ್ರದರ್ಶಿಸುವ ದಿನ. ರಾಷ್ಟ್ರರಾಜಧಾನಿ ನವದೆಹಲಿಯ ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ ನೆರವೇರಿಸಿದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಮೂರು ಸೇನಾ ಮುಖ್ಯಸ್ಥರು, ಗಣ್ಯಾತಿಗಣ್ಯರು ಉಪಸ್ಥಿತಿರಿದ್ದರು. ಈ ಬಾರಿ ಗಣರಾಜ್ಯೋತ್ಸವದಲ್ಲಿ ಹಲವಾರು ವಿಶೇಷತೆಗಳಿವೆ. ವಂದೇಮಾತರಂ ಗೀತೆಗೆ 150ನೇ ವರ್ಷಾಚರಣೆಯ ಸಂಭ್ರಮ ಕೂದ ಈ ಬಾರಿ ಗಣರಾಜ್ಯೋತ್ಸವದ ವಿಶೇಷತೆ.
ದೆಹಲಿಯ ಕರ್ತವ್ಯಪಥದಲ್ಲಿ ನಡೆಯುತ್ತಿರುವ 77ನೇ ಗಣರಾಜ್ಯೋತ್ಸವ ಸಮಾರಂಭಕ್ಕೆ ಈ ಬಾರಿ ಅತಿಥಿಯಾಗಿ ಯುರೋಪಿಯನ್ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವಾನ್ ಆಗಮಿಸಿದ್ದಾರೆ. ನವದೆಹಲಿಯಲ್ಲಿ ಬಿಗಿ ಭದ್ರತೆ ನಡುವೆ ಗಣರಾಜ್ಯೋತ್ಸವ ಸಂಭ್ರಮದಿಂದ ನಡೆಯುತ್ತಿದೆ.
ಬೆಳಗ್ಗೆ 10:03 – ವಾರ್ ಮೆಮೋರಿಯಲ್‌ನತ್ತ ಪ್ರಧಾನಿ ಮೋದಿ ಪ್ರಯಾಣ
ಬೆಳಗ್ಗೆ 10:05- ನ್ಯಾಷನಲ್ ವಾರ್ ಮೆಮೋರಿಯಲ್‌ನಲ್ಲಿ ಪ್ರಧಾನಿ ನಮನ
ಬೆಳಗ್ಗೆ 10:22 – ಕರ್ತವ್ಯ ಪಥದಲ್ಲಿರುವ ಮುಖ್ಯವೇದಿಕೆಗೆ ಮೋದಿ ಆಗಮನ
ಬೆಳಗ್ಗೆ 10:25 – ವೇದಿಕೆಯತ್ತ ಉಪರಾಷ್ಟ್ರಪತಿ ರಾಧಾಕೃಷ್ಣನ್ ಆಗಮನ
ಬೆಳಗ್ಗೆ 10:25 – ಸ್ವಾಗತ ಸಂಗೀತದ ಮೂಲಕ ಗಣ್ಯರ ಬರಮಾಡಿಕೊಳ್ಳುವಿಕೆ
ಬೆಳಗ್ಗೆ 10:27 – ರಾಷ್ಟ್ರಪತಿಗಳ ಅಂಗರಕ್ಷಕ ಪಡೆಯೊಂದಿಗೆ ರಾಷ್ಟ್ರಪತಿಗಳ ಆಗಮನ
ಬೆಳಗ್ಗೆ 10:30 – ರಾಷ್ಟ್ರಧ್ವಜಾರೋಹಣ, ರಾಷ್ಟ್ರಗೀತೆ & 21 ಕುಶಾಲತೋಪುಗಳ ಗೌರವ
ಬೆಳಗ್ಗೆ 10:31 – ಕರ್ತವ್ಯಪಥದಲ್ಲಿ ಭವ್ಯ ಗಣರಾಜ್ಯೋತ್ಸವ ಪರೇಡ್ ಅಧಿಕೃತ ಆರಂಭ
ಮಧ್ಯಾಹ್ನ 12:08 – ಗಣರಾಜ್ಯೋತ್ಸವ ಪರೇಡ್ ಪರೇಡ್ ಮುಕ್ತಾಯ
ಈ ಬಾರಿಯ ಗಣರಾಜ್ಯೋತ್ಸವದ ಅತಿಥಿಯಾಗಿ ಯೂರೋಪಿಯನ್ ಕೌನ್ಸಿಲ್ ಅಧ್ಯ ಆಂಟೋನಿಯಾ ಕೋಸ್ಟಾ ಹಾಗೂ ಯೂರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಭಾಗಿಯಾಗಿದ್ದಾರೆ.
ಈ ವರ್ಷದ ಗಣರಾಜ್ಯೋತ್ಸವವು ವಂದೇಮಾತರಂ ಗೀತೆಯ 150ನೇ ವರ್ಷ ಪೂರೈಸಿದ ಐತಿಹಾಸಿಕ ಕ್ಷಣಕ್ಕೂ ಸಾಕ್ಷಿಯಾಗಿದೆ. ಪಥಸಂಚಲನದಲ್ಲಿ ಭಾರತದ ಸಾಂಸ್ಕೃತಿಕ ಮತ್ತು ಸೇನಾಶಕ್ತಿ ಅನಾವರಣಗೊಳ್ಳುತ್ತಿದೆ.
ಪಥಸಂಚಲನದ ವಿಶೇಷತೆ:
ಈ ಬಾರಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಆಪರೇಷನ್ ಸಿಂಧೂರ್ ರಚನೆಯನ್ನು ವಾಯುಪಡೆ ಪ್ರದರ್ಶಿಸಲಿದೆ. ‘ಆಪರೇಷನ್ ಸಿಂಧೂರ್’ನಲ್ಲಿ ಭಾಗವಹಿಸಿದ್ದ ಯುದ್ಧ ವಿಮಾನಗಳು ಆಕಾಶದಲ್ಲಿ ಹಾರಾಡಿ ವಾಯುಪಡೆಯ ಶಕ್ತಿ ತೋರಿಸಲಿದೆ. ಇದರಲ್ಲಿ ಎರಡು ರಫೇಲ್ ಜೆಟ್‌ಗಳು, ಎರಡು Su-30 ವಿಮಾನಗಳು, ಎರಡು MiG-29 ಯುದ್ಧ ವಿಮಾನಗಳು ಮತ್ತು ಒಂದು ಜಾಗ್ವಾರ್ ಯುದ್ಧ ವಿಮಾನ ಸೇರಿವೆ. ಪಥಸಂಚಲನದಲ್ಲಿ 30 ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿವೆ. ‘ಸ್ವಾತಂತ್ರ್ಯದ ಮಂತ್ರ, ವಂದೇ ಮಾತರಂ’ ಮತ್ತು ‘ಸಮೃದ್ಧಿಯ ಮಂತ್ರ, ಆತ್ಮನಿರ್ಭರ ಭಾರತ’ ಎಂಬುದು ಈ ಬಾರಿಯ ಮುಖ್ಯ ಥೀಮ್‌ಗಳಾಗಿವೆ. ಜೊತೆಗೆ 2,500 ಸಾಂಸ್ಕೃತಿಕ ಕಲಾವಿದರು ಕರ್ತವ್ಯ ಪಥದಲ್ಲಿ ವಂದೇ ಮಾತರಂ ಮತ್ತು ಸ್ವಾವಲಂಬಿ, ಅಭಿವೃದ್ಧಿ ಹೊಂದಿದ ಭಾರತದ ಪರಿಕಲ್ಪನೆಯ ಪ್ರದರ್ಶನ ನೀಡಲಿದ್ದಾರೆ.
30 ಸ್ತಬ್ಧಚಿತ್ರಗಳ ಪೈಕಿ 17 ಸ್ತಬ್ಧಚಿತ್ರಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮತ್ತು 13 ಸ್ತಬ್ಧಚಿತ್ರಗಳು ಕೇಂದ್ರದ ವಿವಿಧ ಸಚಿವಾಲಯಗಳಿಂದ ಇರಲಿವೆ. ಭಾರತೀಯ ವಾಯುಪಡೆಯ ಮಾಜಿ ಸೈನಿಕರನ್ನು ಒಳಗೊಂಡ ವಿಶೇಷ ಸ್ತಬ್ಧಚಿತ್ರವೂ ಭಾಗವಹಿಸಿವೆ.
ಸಾಂಪ್ರದಾಯಿಕ ಧ್ವಜಾರೋಹಣ, ರಾಷ್ಟ್ರಗೀತೆ ಮತ್ತು ಸ್ವದೇಶಿ 105 MM ಲೈಟ್ ಫೀಲ್ಡ್ ಗನ್‌ಗಳನ್ನು ಬಳಸಿ 21-ಸುತ್ತಿನ ಕುಶಾಲತೋಪು ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ವಿವಿಧ ಕ್ಷೇತ್ರಗಳಿಂದ ಬಂದ ಸುಮಾರು 10,000 ವಿಶೇಷ ಅತಿಥಿಗಳು ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ವಿಶ್ವ ಅಥ್ಲೆಟಿಕ್ ಪ್ಯಾರಾ ಚಾಂಪಿಯನ್‌ಶಿಪ್ ವಿಜೇತರು, ಕೃಷಿಕರು, ಗಗನಯಾನ, ಚಂದ್ರಯಾನದಂತಹ ಇತ್ತೀಚಿನ ಇಸ್ರೋ ಯೋಜನೆಗಳಲ್ಲಿ ಭಾಗವಹಿಸಿದ ಅತ್ಯುತ್ತಮ ವಿಜ್ಞಾನಿಗಳು ಮತ್ತು ತಾಂತ್ರಿಕ ತಜ್ಞರು, ಹಾಗೂ ಹೈಡ್ರೋಜನ್ ಉತ್ಪಾದನೆ ಕಂಪನಿಗಳ ಮುಖ್ಯಸ್ಥರು, ಸಿಇಒಗಳನ್ನೂ ಗೌರವ ಅತಿಥಿಗಳಾಗಿ ಭಾಗಿಯಾಗಿದ್ದಾರೆ.
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ.
1 ಸಾವಿರಕ್ಕೂ ಹೆಚ್ಚು ಹೈಡೆಫಿನಿಷನ್ ಸಿಸಿ ಕ್ಯಾಮರಾ ಅಳವಡಿಕೆ
AI ತಂತ್ರಜ್ಞಾನದ ಕಣ್ಗಾವಲು ಇರಿಸುವ ಲೈವ್ ಕ್ಯಾಮರಾಗಳು
ಮುಖಚಹರೆಗಳನ್ನು ಪತ್ತೆ ಮಾಡುವ ಅತ್ಯಾಧುನಿಕ ಕ್ಯಾಮರಾಗಳು
30ಕ್ಕೂ ಹೆಚ್ಚು ಕಂಟ್ರೋಲ್ ರೂಂಗಳಿಂದ ಲೈವ್ ಮಾನಿಟರ್
ದೃಶ್ಯಾವಳಿಗಳ ಮೇಲೆ ನಿಗಾ ಇರಿಸಲು 150ಕ್ಕೂ ಹೆಚ್ಚು ಸಿಬ್ಬಂದಿ
ಭದ್ರತಾ ಪಡೆಗಳಿಗೆ AI ತಂತ್ರಜ್ಞಾನದ ಗ್ಲಾಸ್‌ಗಳನ್ನ ನೀಡಲಾಗಿದೆ
ಪಥಸಂಚಲನ ಮಾರ್ಗದಲ್ಲಿ 10 ಸಾವಿರಕ್ಕೂ ಹೆಚ್ಚು ಪೊಲೀಸರು
ಗುಪ್ತಚರ ಸಿಬ್ಬಂದಿ ಸೇರಿದಂತೆ ಅರೆಸೇನಾಪಡೆ, ಸೇನಾಪಡೆ ನಿಯೋಜಿಸಲಾಗಿದೆ.

