ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಗಳಿಗೆ ಪ್ರಭಾವಿ ಮಹಿಳೆಯ ನಂಟಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸಾಕ್ಷಿಗೆ ಬೆದರಿಕೆ ಒಡ್ಡಿದ ಆರೋಪದಲ್ಲಿ ಪುನೀತ್ ಎಂಬಾತನನ್ನು ಈಗಾಗಲೇ ಬಂಧಿಸಲಾಗಿದೆ. ಆತನೊಂದಿಗೆ ಪ್ರಮುಖ ಆರೋಪಿಗಳಾದ ಗೌರವ್ ಶೆಟ್ಟಿ ಮತ್ತು ಕಿರಣ್ ರೆಡ್ಡಿ ಸಂಪರ್ಕದಲ್ಲಿರುವುದು ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಯಿಂದ ದೃಢಪಟ್ಟಿದೆ. ಅಲ್ಲದೇ ಪ್ರಭಾವಿ ಮಹಿಳೆಯೊಬ್ಬರ ಕೈವಾಡ ಕೂಡ ಇದೆ ಎಂಬುದು ಬಯಲಾಗಿದೆ.
ಪೊಲೀಸರು ತನಿಖೆ ನಡೆಸಿ ಎಫ್‌ಎಸ್‌ಎಲ್ ವರದಿಯನ್ನು ಕೈಗೆತ್ತಿಕೊಂಡಿದ್ದು, ಆರೋಪಿಗಳು ವಾಟ್ಸಾಪ್ ಕರೆಗಳ ಮೂಲಕ ಬೆದರಿಕೆಗೆ ಸಂಚು ರೂಪಿಸಿರುವುದು ದೃಢಪಟ್ಟಿದೆ. ಈ ಪ್ರಕರಣದಲ್ಲಿ ಪೊಲೀಸರು ಈ ಹಿಂದೆ ಪುನೀತ್, ವೇಣು ಮತ್ತು ಸುಹಾಸ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಪುನೀತ್ ಅರೆಸ್ಟ್ ಆಗುತ್ತಿದ್ದಂತೆಯೇ ಗೌರವ್ ಶೆಟ್ಟಿ ಹಾಗೂ ಕಿರಣ್ ರೆಡ್ಡಿ ತಲೆಮರೆಸಿಕೊಂಡಿದ್ದಾರೆ.
ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೀಡಲು ಉದ್ದೇಶಿಸಿದ್ದ ನೋಟಿಸ್‌ಗಳನ್ನು ಸಹ ಸ್ವೀಕರಿಸದೆ ಗೌರವ್ ಮತ್ತು ಕಿರಣ್ ಪರಾರಿಯಾಗಿದ್ದಾರೆ. ಇಬ್ಬರೂ ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಪೊಲೀಸರ ಕೈಗೆ ಸಿಗದಂತೆ ಅಡಗಿಕುಳಿತಿದ್ದಾರೆ. ಸದ್ಯ ಕಾಮಾಕ್ಷಿಪಾಳ್ಯ ಪೊಲೀಸರು ಇಬ್ಬರಿಗಾಗಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.
ತಲೆಮರೆಸಿಕೊಂಡಿರುವ ಗೌರವ್ ಶೆಟ್ಟಿ ಜೊತೆ ಬೆಂಗಳೂರು ನಗರದ ಓರ್ವ ಪ್ರಭಾವಿ ಮಹಿಳೆ ನಿರಂತರ ಸಂಪರ್ಕದಲ್ಲಿರುವುದು ಕಂಡುಬಂದಿದೆ. ಗೌರವ್ ಶೆಟ್ಟಿ ಬಂಧನವಾದರೆ ಈ ಪ್ರಭಾವಿ ಮಹಿಳೆಯ ಪಾತ್ರ ಹಾಗೂ ಆಕೆಯ ಹಿನ್ನೆಲೆ ಹೊರಬೀಳುವ ಸಾಧ್ಯತೆಯಿದ್ದು, ಸಾಕ್ಷಿ ಬೆದರಿಕೆ ಪ್ರಕರಣಕ್ಕೆ ಹೊಸ ತಿರುವು ಸಿಗಲಿದೆ ಎಂದೇ ಹೇಳಲಾಗುತ್ತಿದೆ. ತನಿಖಾಧಿಕಾರಿಗಳು ಸದ್ಯ ಗೌರವ್ ಮತ್ತು ಕಿರಣ್ ಇರುವ ಸ್ಥಳದ ಸುಳಿವು ಆಧರಿಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

