HomeKarnatakaದರ್ಶನ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮತ್ತೊಂದು ತಿರುವು: ತನಿಖೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ...

ದರ್ಶನ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮತ್ತೊಂದು ತಿರುವು: ತನಿಖೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ ಸಂಗತಿ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಂದುವರೆದಂತೆ ಬೆಚ್ಚಿ ಬೀಳಿಸುವ ಸಂಗತಿಗಳು ಬಯಲಾಗುತ್ತಿವೆ. ಆರೋಪಿಗಳು ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ನಂತರ ಆತನ ಮೈಮೇಲಿದ್ದ ಚಿನ್ನದ ಆಭರಣಗಳನ್ನು ದೋಚಿದ ವಿಚಾರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ದರ್ಶನ್ ಮತ್ತು ಸಹಚರರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ವಾದ ಮಂಡಿಸಿದ್ದ ಪೊಲೀಸರ ಪರ ವಿಶೇಷ ಅಭಿಯೋಜಕರು, ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ನೀಡಿ ಕ್ರೌರ್ಯ ಮೆರೆದಿದ್ದರು ಎನ್ನುವ ಭಯಾನಕ ಸಂಗತಿಯನ್ನು ಬಹಿರಂಗಪಡಿಸಿದ್ದರು. ಅದಕ್ಕಿಂತಲೂ ಹೇಯ ಕೃತ್ಯ ಎಸಗಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ರೇಣುಕಾ ಸ್ವಾಮಿ ಕಿಡ್ನಾಪ್ ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಿತ್ರದುರ್ಗದ ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ರಾಘವೇಂದ್ರ ಎಂಬಾತನ ಕೃತ್ಯ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ. ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿ ಕೊಲೆ ಮಾಡಿದ ನಂತರ ಆತನ ಮೈಮೇಲಿದ್ದ ಚಿನ್ನದ ಸರವನ್ನು ರಾಘವೇಂದ್ರ ದೋಚಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೇಣುಕಾಸ್ವಾಮಿ ಕೊಲೆಯಾದ ನಂತರ ಪಟ್ಟಣಗೆರೆ ಶೆಡ್ ನಿಂದ ಹೊರಹೋಗಿದ್ದ ರಾಘವೇಂದ್ರನನ್ನು ಇತರೆ ಆರೋಪಿಗಳು ಕರೆ ಮಾಡಿ 10 ಲಕ್ಷ ರೂಪಾಯಿ ಕೊಡುತ್ತೇವೆ ಬಾ ಎಂದಾಗ ಹಣದಾಸೆಗೆ ಮರಳಿ ಬಂದಿದ್ದ. ರೇಣುಕಾಸ್ವಾಮಿಯ ಶವ ಎಸೆಯಲು ಇತರೆ ಆರೋಪಿಗಳ ಜೊತೆಗೆ ಹೋಗಿದ್ದ. ಶವ ಎಸೆಯುವ ಮೊದಲು ರೇಣುಕಾಸ್ವಾಮಿ ಮೈ ಮೇಲಿದ್ದ ಚಿನ್ನದ ಸರ, ಉಂಗುರ, ಬೆಳ್ಳಿ ಕಡಗ, ವಾಚ್ ಗಳನ್ನು ರಾಘವೇಂದ್ರ ತೆಗೆದುಕೊಂಡಿದ್ದ ಎನ್ನಲಾಗಿದೆ.

ರಾಘವೇಂದ್ರ ಪತ್ನಿಗೆ ಕರೆ ಮಾಡಿ ಬೆಂಗಳೂರಿಗೆ ಕರೆಸಿಕೊಂಡು ಲಾಡ್ಜ್ ನಲ್ಲಿ ಇರಿಸಿದ್ದ. ರೇಣುಕಾಸ್ವಾಮಿ ಶವದ ಮೇಲಿದ್ದ ಆಭರಣಗಳನ್ನು ಪತ್ನಿಗೆ ಕೊಟ್ಟಿದ್ದು, ಆಕೆ ಚಿತ್ರದುರ್ಗಕ್ಕೆ ತೆಗೆದುಕೊಂಡು ಹೋಗಿದ್ದಳು. ಪತ್ನಿಯಿಂದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

10 ದಿನ ಕಳೆದರೂ ಪತ್ತೆಯಾಗದ ಮೊಬೈಲ್

ಕೊಲೆಯಾಗಿ 10 ದಿನ ಕಳೆದರೂ ರೇಣುಕಾಸ್ವಾಮಿ ಮೊಬೈಲ್ ಪತ್ತೆಯಾಗಿಲ್ಲ. ಜೂನ್ 8ರಂದು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಲಾಗಿತ್ತು. ಅಂದು ಬೆಳಿಗ್ಗೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಜೂನ್ 8ರಂದು ಮಧ್ಯಾಹ್ನ ಆರ್.ಆರ್. ನಗರದಲ್ಲಿ ಮೊಬೈಲ್ ಸ್ವಿಚ್ ಆನ್ ಆಗಿದ್ದು, ಮತ್ತೆ ಆರ್.ಆರ್. ನಗರದ ಪಟ್ಟಣಗೆರೆಯಲ್ಲಿ ಸ್ವಿಚ್ ಆಫ್ ಆಗಿದೆ. ಅದೇ ದಿನ ರಾತ್ರಿ ರೇಣುಕಾಸ್ವಾಮಿ ಮೃತದೇಹವನ್ನು ದರ್ಶನ್ ಸಹಚರರು ಬಿಸಾಡಿದ್ದರು. ಹಲವು ಕಡೆ ಹುಡುಕಾಡಿದರೂ ರೇಣುಕಾ ಸ್ವಾಮಿ ಮೊಬೈಲ್ ಪತ್ತೆಯಾಗಿಲ್ಲ. ರಾಜ ಕಾಲುವೆಯಲ್ಲಿ ಬಿಸಾಡಿದ್ದಾಗಿ ಆರೋಪಿಗಳು ಹೇಳಿದ್ದು, ಹುಡುಕಾಟ ನಡೆಸಲಾಗಿದೆ.

ಆರೋಪಿಗಳಲ್ಲಿ ಅನೇಕರಿಗೆ ದರ್ಶನ್ ಪರಿಚಯವೇ ಇಲ್ಲ

18 ಆರೋಪಿಗಳ ಪೈಕಿ 7 ಆರೋಪಿಗಳಿಗೆ ದರ್ಶನ್ ಯಾರೆಂಬುದೇ ಗೊತ್ತಿಲ್ಲ. ಆದರೆ ದರ್ಶನ್ ಗಾಗಿ ಕೊಲೆ ಪ್ರಕರಣದಲ್ಲಿ 7 ಆರೋಪಿಗಳು ಸಹಕಾರ ನೀಡಿದ್ದಾರೆ. ಇವರಿಗೆ ನಟ ದರ್ಶನ್ ಅವರ ನೇರ ಪರಿಚಯವೇ ಇಲ್ಲ. ಕೊಲೆ ಮಾಡಿದ ನಂತರ ದರ್ಶನ್ ಅವರನ್ನು ಮೂವರು ಆರೋಪಿಗಳು ಮೈಸೂರಿನಲ್ಲಿ ಭೇಟಿಯಾಗಿದ್ದಾರೆ. ಕೇಶವ್, ಕಾರ್ತಿಕ್, ನಿಖಿಲ್ ಮೈಸೂರಿನಲ್ಲಿ ದರ್ಶನ್ ಅವರನ್ನು ನೋಡಿದ್ದಾರೆ. ರೇಣುಕಾ ಸ್ವಾಮಿ ಶವವನ್ನು ಈ ಆರೋಪಿಗಳು ಬಿಸಾಡಿದ್ದರು.

ರೇಣುಕಾ ಸ್ವಾಮಿ ಅಪಹರಣ ಪ್ರಕರಣದಲ್ಲಿ ರಾಘವೇಂದ್ರ ಪ್ರಮುಖ ಪಾತ್ರ ವಹಿಸಿದ್ದ. ದರ್ಶನ್ ಅಭಿಮಾನಿಗಳಾದ ಜಗ್ಗು ಮತ್ತು ಅನುಕುಮಾರ್ ಅವರನ್ನು ಕರೆದುಕೊಂಡು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿದ್ದ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular