ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಬೆಂಗಳೂರು ನಗರದ ಉದ್ಯಮಿಗಳಿಗೆ ಬಂಪರ್ ಕೊಡುಗೆ ನೀಡಿದೆ. 2026-27ನೇ ಸಾಲಿನ ಉದ್ದಿಮೆ ಪರವಾನಿಗೆಯ ನವೀಕರಣ ಕುರಿತು ಅಪ್‌ಡೇಟ್ ನೀಡಲಾಗಿದೆ.
ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರರಾವ್ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ 2026-27ನೇ ಸಾಲಿನ ಉದ್ದಿಮೆ ಪರವಾನಿಗೆಯ ನವೀಕರಣ ಹೇಗೆ ಮಾಡಬೇಕು? ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
* ಉದ್ದಿಮೆದಾರರ ಅನುಕೂಲಕ್ಕೆ ತಕ್ಕಂತೆ 1 ರಿಂದ 5 ಆರ್ಥಿಕ ವರ್ಷಗಳ ಅವಧಿಗೆ (ಏಪ್ರಿಲ್ ನಿಂದ ಮಾರ್ಚ್) ನವೀಕರಣ ಮಾಡಲು ಸೂಚಿಸಿದೆ.
* ನವೀಕರಣ ಶುಲ್ಕವನ್ನು ಉದ್ದಿಮೆದಾರರು ಕೋರುವ ಆರ್ಥಿಕ ವರ್ಷಕ್ಕೆ ಮಿತಿಗೊಳಿಸಿ ಪಾವತಿಸಿಕೊಳ್ಳಲು ಸೂಚಿಸಿದೆ.
* ಕಳೆದ ಸಾಲಿನಂತೆ ಉದ್ದಿಮೆ ಪರವಾನಿಗೆ ಶುಲ್ಕವನ್ನು ಆನ್‌ಲೈನ್ ಮುಖಾಂತರ ಹಾಗೂ ಬ್ಯಾಂಕ್ ಚಲನ್ ಮೂಲಕ ಕೆನರಾ ಬ್ಯಾಂಕಿನಲ್ಲಿ ಪಾವತಿಸಿಕೊಳ್ಳಬೇಕಿರುತ್ತದೆ.
* ದಿನಾಂಕ 01-02-2026 ರಿಂದ 28-02-2026 ರವರೆಗೆ ದಂಡವಿಲ್ಲದೇ ಪರವಾನಿಗೆ ಶುಲ್ಕವನ್ನು ಪಾವತಿಸಿಕೊಳ್ಳಬೇಕಿರುತ್ತದೆ.
* ದಿನಾಂಕ 01-03-2026 ರಿಂದ 31-03-2026 ರವರೆಗೆ ಪರವಾನಿಗೆ ನವೀಕರಣ ಶೇ 25 ರಷ್ಟು ದಂಡ ಮೊತ್ತದೊಂದಿಗೆ ಪಾವತಿಸಿಕೊಳ್ಳಬೇಕಿರುತ್ತದೆ.
* ದಿನಾಂಕ 01-04-2026 ರಿಂದ ಪರವಾನಿಗೆ ಶುಲ್ಕದ ಶೇಕಡಾ 100 ರಷ್ಟು ದಂಡದ ಮೊತ್ತದೊಂದಿಗೆ ಪರವಾನಿಗೆ ಶುಲ್ಕವನ್ನು ಪಾವತಿಸಿಕೊಳ್ಳಬೇಕಿರುತ್ತದೆ.
* ಪರವಾನಿಗೆ ನವೀಕರಣ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮುಖಾಂತರವೇ ಮಾಡಲು ಸೂಚಿಸಿದೆ.
ಈ ಮೂಲಕ ಜಿಬಿಎ ಬೆಂಗಳೂರಿನ 5 ನಗರ ಪಾಲಿಕೆ ವ್ಯಾಪ್ತಿಯಲ್ಲಿ ಫೆಬ್ರವರಿ 1 ರಿಂದ 28 ರವರೆಗೆ ದಂಡ ರಹಿತವಾಗಿ 2026-27ನೇ ಸಾಲಿನ ಉದ್ದಿಮೆ ಪರವಾನಗಿ ನವೀಕರಣಕ್ಕೆ ಅವಕಾಶ ನೀಡಲಾಗಿದೆ. ಇದನ್ನ ಉದ್ಯಮಿಗಳು ಸದುಪಯೋಗ ಪಡಿಸಿಕೊಂಡು ಪರವಾನಗಿ ನವೀಕರಣ ಮಾಡಿಕೊಳ್ಳಬಹುದು.
ಉದ್ಯಮಿಗಳು 5 ನಗರಪಾಲಿಕೆ ವ್ಯಾಪ್ತಿಯಲ್ಲಿ ಫೆಬ್ರವರಿ ತಿಂಗಳ ಅಂತ್ಯದೊಳಗೆ ತಮ್ಮ ವ್ಯಾಪಾರದ ಲೈಸೆನ್ಸ್ ನವೀಕರಣ ಮಾಡಿಕೊಳ್ಳಬೇಕಿದೆ. ಈ ಪ್ರಕ್ರಿಯೆ ಸಂಪೂರ್ಣ ಆನ್‌ಲೈನ್ ಆಗಿದ್ದು, ಕಚೇರಿಗೆ ಅಲೆದಾಡುವುದು ಬೇಕಾಗಿಲ್ಲ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆಗಿದೆ. ಅಲ್ಲದೇ ನಗರವನ್ನು 5 ನಗರ ಪಾಲಿಕೆಯಾಗಿ ವಿಭಾಗ ಮಾಡಲಾಗಿದೆ. ಆಯಾ ನಗರ ಪಾಲಿಕೆ ವ್ಯಾಪ್ತಿಯ ಉದ್ಯಮಿಗಳು ಪರವಾನಗಿ ನವೀಕರಣವನ್ನು ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

