ಬೆಂಗಳೂರು: ಎಸ್ಎಸ್ಎಲ್ಸಿ ಸೇರಿದಂತೆ ಬಹುತೇಕ ಎಲ್ಲಾ ತರಗತಿ ಪರೀಕ್ಷೆಗಳು ಮುಗಿದು 2025- 26 ನೇ ಸಾಲಿನ ಶೈಕ್ಷಣಿಕ ವರ್ಷ ಅಂತ್ಯವಾಗುತ್ತಾ ಬಂದಿದೆ. ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಪ್ರಕ್ರಿಯೆ ಪೂರ್ಣಗೊಳಿಸದೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಕಾಲಾವಕಾಶ ವಿಸ್ತರಿಸಿದೆ.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಖಾಸಗಿ ಶಾಲೆ ಆಡಳಿತ ಮಂಡಳಿಗಳು ಹೊಸ ಮಾನ್ಯತೆ ಅಥವಾ ಮಾನ್ಯತೆ ನವೀಕರಣಕ್ಕೆ ಆನ್ಲೈನ್ ಮೂಲಕ ಏಪ್ರಿಲ್ 15 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಕೆಯಾದ ದಿನದಿಂದ ಐದು ದಿನಗಳ ಒಳಗೆ ಜಿಲ್ಲಾ ಉಪ ನಿರ್ದೇಶಕರ ಕಚೇರಿ ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಬೇಕು. ನಂತರದ ಐದು ದಿನಗಳಲ್ಲಿ ಡಿಡಿಪಿಐ ಅವರು ಆಕ್ಷೇಪಣೆಗಳಿದ್ದರೆ ಸಂಬಂಧಿಸಿದ ಶಾಲಾ ಆಡಳಿತ ಮಂಡಳಿಗಳಿಗೆ ಅರ್ಜಿ ವಾಪಸ್ ಕಳುಹಿಸಬಹುದು.
ಏಪ್ರಿಲ್ 7ರಿಂದ ಮೇ 15 ರೊಳಗೆ ಶಾಲೆಯವರು ಆಕ್ಷೇಪಣೆಗಳಿಗೆ ಸೂಕ್ತ ದಾಖಲೆ ಒದಗಿಸಿ ಅರ್ಜಿಯನ್ನು ಡಿಡಿಪಿಐ ಅವರಿಗೆ ಕಳುಹಿಸಬಹುದು. ನಂತರದ ಐದು ದಿನಗಳಲ್ಲಿ ಅರ್ಜಿ ಇತ್ಯರ್ಥಪಡಿಸಿ ಮಾನ್ಯತೆ ಅಥವಾ ಮಾನ್ಯತೆ ನವೀಕರಣ ಪತ್ರ ನೀಡಬೇಕೆಂದು ತಿಳಿಸಲಾಗಿದೆ. ಒಟ್ಟಾರೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಮೇ 21 ಕೊನೆಯ ದಿನವಾಗಿದೆ ಎಂದು ಹೇಳಲಾಗಿದೆ.

