ನವದೆಹಲಿ : ಪ್ರೀತಿ ಹಾಗೂ ಮದುವೆಯ ಭರವಸೆ ನೀಡಿ ಮಹಿಳೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ ನಂತರ, ‘ಜಾತಕ ಅಥವಾ ಕುಂಡಲಿ’ ಹೊಂದಾಣಿಕೆಯಾಗುತ್ತಿಲ್ಲ ಎಂಬ ಕ್ಷುಲ್ಲಕ ಕಾರಣ ನೀಡಿ ಮದುವೆಯಿಂದ ಹಿಂದೆ ಸರಿಯುವುದು ಇನ್ಮುಂದೆ ಕೇವಲ ನೈತಿಕ ತಪ್ಪಲ್ಲ, ಅದು ಶಿಕ್ಷಾರ್ಹ ಕ್ರಿಮಿನಲ್ ಅಪರಾಧ ಎಂದು ದೆಹಲಿ ಹೈಕೋರ್ಟ್ ಆಘಾತಕಾರಿ ತೀರ್ಪು ನೀಡಿದೆ.
ಹೌದು. ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ ನಂತರ, ‘ಕುಂಡಲಿ’ (ಜಾತಕ) ಹೊಂದಾಣಿಕೆಯಾಗುತ್ತಿಲ್ಲ ಎಂಬ ಕಾರಣ ನೀಡಿ ಮದುವೆಯನ್ನು ನಿರಾಕರಿಸುವುದು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 69 ರ ಅಡಿಯಲ್ಲಿ ಕ್ರಿಮಿನಲ್ ಅಪರಾಧಕ್ಕೆ ಕಾರಣವಾಗಬಹುದು ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ.
ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು, ಅಂತಿಮ ಕ್ಷಣದಲ್ಲಿ ಜಾತಕದ ನೆಪ ಹೇಳಿ ಕೈಕೊಡುವ ವಂಚಕರಿಗೆ ದೆಹಲಿ ಹೈಕೋರ್ಟ್ ಬಿಸಿ ಮುಟ್ಟಿಸಿದೆ. ಇಂತಹ ಪ್ರಕರಣಗಳು ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 69 ರ ಅಡಿಯಲ್ಲಿ ‘ವಂಚನೆಯಿಂದ ಕೂಡಿದ ಮದುವೆ ಭರವಸೆ’ ಎಂಬ ಗಂಭೀರ ಅಪರಾಧದ ವ್ಯಾಪ್ತಿಗೆ ಬರುತ್ತವೆ ಎಂದು ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರ ಪೀಠ ಸ್ಪಷ್ಟಪಡಿಸಿದೆ.
ತನ್ನ ಕುಟುಂಬಕ್ಕೆ ಜಾತಕದ ಮೇಲೆ ನಂಬಿಕೆಯಿದೆ ಎಂಬುದು ಮೊದಲೇ ತಿಳಿದಿದ್ದರೂ, ಮಹಿಳೆಗೆ ಸುಳ್ಳು ಭರವಸೆ ನೀಡಿ ಸಂಬಂಧ ಬೆಳೆಸುವುದು ‘ಅತ್ಯಾಚಾರ’ದ ಸಮಾನವಾದ ವಂಚನೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಇದೇ ಕಾರಣಕ್ಕಾಗಿ ಜಾಮೀನು ಕೋರಿದ್ದ ವ್ಯಕ್ತಿಯ ಅರ್ಜಿಯನ್ನು ವಜಾಗೊಳಿಸಿ ಕಠಿಣ ಸಂದೇಶ ರವಾನಿಸಿದೆ.
ಪ್ರಕರಣದ ಹಿನ್ನೆಲೆ
ಮಹಿಳೆಯೊಬ್ಬರ ಜೊತೆ ದೈಹಿಕ ಸಂಬಂಧ ಬೆಳೆಸಿ, ನಂತರ ಜಾತಕ ಸರಿ ಇಲ್ಲ ಎಂಬ ಕಾರಣ ನೀಡಿ ಮದುವೆಯಾಗಲು ನಿರಾಕರಿಸಿದ ವ್ಯಕ್ತಿಯೊಬ್ಬನ ಜಾಮೀನು ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ಈ ಅವಲೋಕನ ಮಾಡಿದ್ದಾರೆ.
ನ್ಯಾಯಾಲಯದ ಪ್ರಮುಖ ಅಂಶಗಳು
ಸುಳ್ಳು ಭರವಸೆ: ಮದುವೆಗೆ ಜಾತಕ ಸೇರಿದಂತೆ ಯಾವುದೇ ಅಡೆತಡೆಗಳಿಲ್ಲ ಎಂದು ಆರೋಪಿಯು ಪದೇ ಪದೇ ಮಹಿಳೆಗೆ ಭರವಸೆ ನೀಡಿದ್ದರಿಂದ ಅವರ ನಡುವೆ ಸಂಬಂಧ ಬೆಳೆದಿತ್ತು. ಆದ್ದರಿಂದ, ಈ ಹಂತದಲ್ಲಿ ಆತನ ನಡವಳಿಕೆಯು BNS ಸೆಕ್ಷನ್ 69 ರ ಅಡಿಯಲ್ಲಿ ಅಪರಾಧವೆಂದು ಪರಿಗಣಿತವಾಗುತ್ತದೆ ಎಂದು ನ್ಯಾಯಾಧೀಶರು ಗಮನಿಸಿದರು.
ದೂರಿನ ವಿವರ: ಸಂತ್ರಸ್ತ ಮಹಿಳೆ ಮೊದಲು 2025ರ ನವೆಂಬರ್ನಲ್ಲಿ ದೂರು ನೀಡಿದ್ದರು. ಆದರೆ ಆರೋಪಿ ಮತ್ತು ಆತನ ಕುಟುಂಬದವರು ಮದುವೆಯಾಗುವುದಾಗಿ ನೀಡಿದ ಭರವಸೆಯ ಮೇರೆಗೆ ದೂರನ್ನು ಹಿಂಪಡೆದಿದ್ದರು. ಆದರೆ ನಂತರ ಆರೋಪಿಯು ಜಾತಕ ಹೊಂದಾಣಿಕೆಯಾಗುತ್ತಿಲ್ಲ ಎಂದು ಮದುವೆ ನಿರಾಕರಿಸಿದಾಗ, ಜನವರಿ 2026 ರಲ್ಲಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಬಿಎನ್ಎಸ್ ಸೆಕ್ಷನ್ 69 ರ ಅಡಿಯಲ್ಲಿ ಹೊಸದಾಗಿ ಎಫ್ಐಆರ್ ದಾಖಲಿಸಲಾಯಿತು.
ಕೇವಲ ಸಂಬಂಧ ಮುರಿದ ಪ್ರಕರಣವಲ್ಲ: ಇದು ಕೇವಲ “ಸಂಬಂಧ ಹಳಸಿತು” ಅಥವಾ “ಮದುವೆ ಮುರಿದುಬಿದ್ದ” ಪ್ರಕರಣವಲ್ಲ. ಆರೋಪಿಯ ಕುಟುಂಬಕ್ಕೆ ಜಾತಕ ಹೊಂದಾಣಿಕೆ ಮುಖ್ಯ ಎಂಬುದು ಆತನಿಗೆ ಮೊದಲೇ ತಿಳಿದಿದ್ದರೂ, ಆತ ಮಹಿಳೆಗೆ ಮದುವೆಯ ಸುಳ್ಳು ಭರವಸೆ ನೀಡುತ್ತಾ ಬಂದಿದ್ದ ಎಂದು ಕೋರ್ಟ್ ಹೇಳಿದೆ.
ಕೋರ್ಟ್ ತೀರ್ಪು
“ಕೇವಲ ಪ್ರೇಮ ಸಂಬಂಧ ವಿಫಲವಾಯಿತು ಅಥವಾ ಮದುವೆ ನಡೆಯಲಿಲ್ಲ ಎಂಬ ಕಾರಣಕ್ಕೆ ಕ್ರಿಮಿನಲ್ ಕಾನೂನನ್ನು ಬಳಸಲಾಗದು. ಆದರೆ, ಈ ಪ್ರಕರಣದಲ್ಲಿ ಮದುವೆಯಾಗುವುದಾಗಿ ಭರವಸೆ ನೀಡಿ, ನಂತರ ಜಾತಕದ ನೆಪ ಹೇಳಿ ನಿರಾಕರಿಸಿರುವುದು ಆ ಭರವಸೆಯ ಪ್ರಾಮಾಣಿಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ,” ಎಂದು ನ್ಯಾಯಾಲಯ ಹೇಳಿದೆ. ತನಿಖೆ ನಡೆಯುತ್ತಿರುವುದು ಮತ್ತು ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, ನ್ಯಾಯಾಲಯವು ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

