ಸ್ಯಾಂಡಲ್‌ವುಡ್‌ನ ಸ್ಟಾರ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಬಾಂಧವ್ಯ ನಿಜವಾದ ಪ್ರೇಮಕಥೆಗೆ ಸಾಕ್ಷಿಯಾಗಿದೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಈ ಜೋಡಿ ಬೆಳ್ಳಿತೆರೆಯ ಮೇಲೆ ಮಾತ್ರವಲ್ಲದೆ ರಿಯಲ್ ಲೈಫ್‌ನಲ್ಲೂ ಅಪಾರ ಅಭಿಮಾನಿಗಳನ್ನು ಗಳಿಸಿದೆ. ಸದ್ಯ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಈ ಜೋಡಿಯ ಅಪರೂಪದ ಜೀವನ ಪಯಣದ ಕುರಿತು ವಿಶೇಷ ಮಾಹಿತಿ ಇಲ್ಲಿದೆ.
ಈ ಇಬ್ಬರು ಕಲಾವಿದರು ಮೊದಲು ಮುಖಾಮುಖಿಯಾಗಿದ್ದು ನಂದಗೋಕುಲ ಧಾರಾವಾಹಿಯ ಸೆಟ್‌ನಲ್ಲಿ. ಆರಂಭದಲ್ಲಿ ಇಬ್ಬರ ನಡುವೆ ಕೊಂಚ ಹಿಂಜರಿಕೆ ಇತ್ತಾದರೂ ನಂತರದ ದಿನಗಳಲ್ಲಿ ಅದು ಉತ್ತಮ ಸ್ನೇಹವಾಗಿ ಬದಲಾಯಿತು. 2008 ರಲ್ಲಿ ತೆರೆಕಂಡ ಮೊಗ್ಗಿನ ಮನಸು ಹಾಗೂ 2012 ರಲ್ಲಿ ಮೂಡಿಬಂದ ಡ್ರಾಮಾ ಸಿನಿಮಾಗಳು ಇವರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಮಾಡಿದವು.
ಸ್ನೇಹ ಪ್ರೀತಿಯಾಗಿ ಬದಲಾದ ನಂತರ ಪ್ರೇಮಿಗಳ ದಿನದಂದು ಯಶ್ ತಮ್ಮ ಮನಸ್ಸಿನ ಮಾತನ್ನು ರಾಧಿಕಾ ಅವರ ಬಳಿ ತೋಡಿಕೊಂಡಿದ್ದರು. ಕೆಲವು ತಿಂಗಳ ನಂತರ ರಾಧಿಕಾ ಕೂಡ ಯಶ್ ಪ್ರೀತಿಗೆ ಹಸಿರು ನಿಶಾನೆ ತೋರಿಸಿದರು. 2016 ರ ಆಗಸ್ಟ್‌ನಲ್ಲಿ ಗೋವಾದಲ್ಲಿ ಇವರ ಅದ್ಧೂರಿ ನಿಶ್ಚಿತಾರ್ಥ ನೆರವೇರಿತು. ಅದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು.
ಇಂದು ಈ ದಂಪತಿಗೆ ಐರಾ ಮತ್ತು ಯಥಾರ್ವ್ ಎಂಬ ಇಬ್ಬರು ಮಕ್ಕಳಿದ್ದಾರೆ. ಬೆಂಗಳೂರಿನ ಉತ್ತರ ಭಾಗದಲ್ಲಿರುವ ಸುಂದರವಾದ ಮನೆಯಲ್ಲಿ ವಾಸವಿರುವ ಈ ಕುಟುಂಬ ಸರಳ ಹಾಗೂ ಸಂತೋಷದ ಜೀವನ ನಡೆಸುತ್ತಿದೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ ಟಾಕ್ಸಿಕ್ ಚಿತ್ರದ ನಂತರ ಯಶ್ ಅವರು ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೃಹತ್ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

