HomeLatest NewsBIG NEWS : ರಾಜ್ಯದಲ್ಲಿ ಶೀಘ್ರವೇ ಖಾಲಿ ಇರುವ 13,000 ಶಿಕ್ಷಕರ ನೇಮಕಾತಿ : ಸಚಿವ...

BIG NEWS : ರಾಜ್ಯದಲ್ಲಿ ಶೀಘ್ರವೇ ಖಾಲಿ ಇರುವ 13,000 ಶಿಕ್ಷಕರ ನೇಮಕಾತಿ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಣ ಇಲಾಖೆಯು ರೂಪಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ವಿವಿಧ ಯೋಜನೆಗಳ ಉದ್ಘಾಟನೆಗೆ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನವೆಂಬರ್ ಮಾಹೆಯಲ್ಲಿ ಆಗಮಿಸಲಿದ್ದಾರೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.

ಅವರು ಇಂದು ತಮ್ಮ ಕಚೇರಿ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ಕುರಿತು ಮಾಹಿತಿ ನೀಡಿ ಮಾತನಾಡುತ್ತಿದ್ದರು. 3000ಕೋಟಿ ರೂ.ಗಳ ಅಂದಾಜು ವೆಚ್ಚದ ಕರ್ನಾಟಕ ಪಬ್ಲಿಕ್ ಶಾಲೆ ಮಹತ್ವದ ಯೋಜನೆಗೆ ಶಿವಮೊಗ್ಗದಲ್ಲಿಯೇ ಚಾಲನೆ ದೊರೆಯಲಿರುವುದು ವಿಶೇಷವಾಗಿದೆ. ಈ ಹಿಂದೆ ಯುವನಿಧಿ ಯೋಜನೆಯನ್ನೂ ಮಾನ್ಯ ಮುಖ್ಯಮಂತ್ರಿಗಳು ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಉದ್ಘಾಟಿಸಿದ್ದರು ಎಂದವರು ನುಡಿದರು.

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕಗೊಂಡ ಶಿಕ್ಷಕರ ಸಂಖ್ಯೆ ಅತ್ಯಲ್ಪ. ಆದರೆ, ಅಧಿಕವಾಗಿರುವ ಶಿಕ್ಷಕರ ಕೊರತೆಯನ್ನು ನೀಗಿಸಲು ಸರ್ಕಾರವು ದಿಟ್ಟ ಹೆಜ್ಜೆ ಇರಿಸಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ ಶಿಕ್ಷಕರ ಕೊರತೆಯನ್ನು ನೀಗಿಸುವ ಸಂಬಂಧ ಖಾಲಿ ಇರುವ 13000ಶಿಕ್ಷಕರನ್ನು ನೇಮಿಸಿಕೊಳ್ಳಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ ಅರ್ಹ ಪದವೀಧರರಿಗೆ ಡಿಸೆಂಬರ್ 07ರಂದು ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸಲು ಇಲಾಖೆಯು ಅಕ್ಟೋಬರ್ 23ರಂದು ಅಧಿಸೂಚನೆ ಪ್ರಕಟಿಸಲಿದ್ದು, ಪರೀಕ್ಷೆಯಲ್ಲಿ ಹಾಜರಾಗಲಿಚ್ಚಿಸುವ ಅರ್ಹ ಪದವೀಧರರು ನವೆಂಬರ್ 09ರೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೇ ಪ್ರಸ್ತುತ ಶಿಕ್ಷಕರ ಕೊರತೆಯನ್ನು ನೀಗಿಸಲು ಅತಿಥಿ ಶಿಕ್ಷಕರನ್ನು ಸಕಾಲದಲ್ಲಿ ನೇಮಿಸಿಕೊಂಡು ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಯಾವುದೇ ಅಡಚಣೆಯಾಗದಂತೆ ಕ್ರಮ ವಹಿಸಲಾಗಿದೆ. ಹೊಸ ಶಿಕ್ಷಕರ ನೇಮಕಾತಿಯಿಂದಾಗಿ ಆಡಳಿತಾರೂಢ ಸರ್ಕಾರದ ಅವಧಿಯಲ್ಲಿ ಸುಮಾರು 26000ಶಿಕ್ಷಕರನ್ನು ನೇಮಕಾತಿಗೊಳಿಸಿದಂತಾಗಲಿದೆ ಎಂದ ಅವರು, ಎಸ್.ಎಸ್.ಎಲ್.ಸಿ.ಯಲ್ಲಿ ವಿದ್ಯಾರ್ಥಿಗಳಿಗೆ ಉತ್ತೀರ್ಣಗೊಳಿಸಲು ನಿಗಧಿಪಡಿಸಿದ ಅಂಕವನ್ನು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ, ಶೇ.33ಕ್ಕೆ ಮರುನಿಗಧಿಪಡಿಸಲಾಗಿದೆ. ಅದಕ್ಕಾಗಿ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಅಮೂಲಾಗ್ರ ಬದಲಾವಣೆ ಮತ್ತು ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಆರಂಭಿಸಲು ಉದ್ದೇಶಿಸಲಾಗಿದ್ದ ಕರ್ನಾಟಕ ಪಬ್ಲಿಕ್ ಶಾಲೆಗಳ ಸಂಖ್ಯೆಯನ್ನು 500ರಿಂದ 800ಕ್ಕೆ ಹೆಚ್ಚಿಸಲಾಗಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ 200ಶಾಲೆಗಳನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದೆ. ಇದರಿಂದಾಗಿ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಶಿಕ್ಷಣ ಕ್ಷೇತ್ರದ ಪ್ರಗತಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಿದೆ ಎಂದವರು ನುಡಿದರು.

ಈ ಯೋಜನೆಯ ಸಮರ್ಪಕ ಅನುಷ್ಠಾನದಿಂದಾಗಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಸೌಲಭ್ಯ, ಒಂದೇ ಶಾಲಾ ಆವರಣದಲ್ಲಿ 14ವರ್ಷದವರೆಗೆ ಎಲ್ಲಾ ರೀತಿಯ ಶಿಕ್ಷಣ, 01ರಿಂದ 05ರವರೆಗೆ ಕನ್ನಡ ಕಡ್ಡಾಯ ಹಾಗೂ ದ್ವಿಭಾಷಾ ಕಲಿಕೆಗೆ ಅವಕಾಶ, ಮಕ್ಕಳ ಭಾಷಾ ಕಲಿಕೆಯನ್ನಾಧರಿಸಿ, 6ನೇ ತರಗತಿಯ ನಂತರ ಮಾಧ್ಯಮ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲಾ ಶಾಲೆಗಳನ್ನು ಸ್ಮಾರ್ಟ್ ಶಾಲೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಇಂತಹ ಶಾಲೆಗಳಲ್ಲಿ ಏಕಕಾಲಕ್ಕೆ ಒಂದು ಕೇಂದ್ರದಿಂದ ವಿಶೇಷ ತರಗತಿ, ಉಪನ್ಯಾಸಗಳನ್ನು ನೀಡಬಹುದಾಗಿದೆ. ಅಂತಹ ಶಾಲೆಗಳ ಉಸ್ತುವಾರಿಗಾಗಿ ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ ರಚಿಸಿ ನಿರ್ವಹಣೆಯ ಹೊಣೆಗಾರಿಕೆ ನೀಡಲಾಗುವುದು ಎಂದರು.

ಇಷ್ಟೇ ಅಲ್ಲದೇ ʼಮೊಬೈಲ್ ಬಿಡಿ, ಪುಸ್ತಕ ಹಿಡಿʼ ಸೇರಿದಂತೆ ಇನ್ನಷ್ಟು ವಿಶೇಷ ಯೋಜನೆಗಳನ್ನು ರೂಪಿಸಲಾಗಿದ್ದು, ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಅವುಗಳನ್ನು ಲೋಕಾರ್ಪಣೆಗೊಳಿಸಲಾಗುವುದು. ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ 19ಕೆ.ಪಿ.ಎಸ್. ಶಾಲೆಗಳ ಹಂಚಿಕೆಯಾಗಿದ್ದು, ಅದರ ಪ್ರಮಾಣ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಂಭವವಿದೆ ಎಂದವರು ನುಡಿದರು.

ಪ್ರಸ್ತುತ ಆರಂಭಿಸಲಾಗಿರುವ ಆರ್ಥಿಕ ಮತ್ತು ಶೈಕ್ಷಣಿಕ ಗಣತಿಯಿಂದಾಗಿ ಸರ್ಕಾರದಿಂದ ಜನರ ಹಿತಕ್ಕಾಗಿ ರೂಪಿಸಿ ಅನುಷ್ಠಾನಗೊಳಿಸುವ ಯೋಜನೆಗಳನ್ನು ಎಲ್ಲಾ ವರ್ಗದ ಜನರಿಗೆ ತಲುಪಿಸುವಂತೆ ರೂಪಿಸಲು ಅನುಕೂಲವಾಗಲಿದೆ. ಅಲ್ಲದೇ ಜನರ ಜೀವನ ಗುಣಮಟ್ಟವನ್ನು, ಆರ್ಥಿಕ ಅಭಿವೃದ್ಧಿಯ ಶ್ರೇಯಾಂಕವನ್ನು ಗುರುತಿಸಲು ಉಪಕಾರಿಯಾಗಲಿದೆ. ಸದರಿ ಸಮೀಕ್ಷೆಗೆ ಈವರೆಗೂ ಮಾಹಿತಿ ನೀಡದವರು ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿದ ಅವರು, ಸಮೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆ ಶೇ.91.29ರಷ್ಟು ಪ್ರಗತಿ ಸಾಧಿಸಲಾಗಿದೆ. ಸದರಿ ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದ್ದ ಶಿಕ್ಷಕರನ್ನು ಮುಕ್ತಗೊಳಿಸಿ, ಉಳಿಕೆ ಕಾರ್ಯಕ್ಕೆ ಶಿಕ್ಷಣೇತರ ಇಲಾಖೆಗಳ ಅಧಿಕಾರಿ ಸಿಬ್ಬಂಧಿಗಳ ಸೇವೆಯನ್ನು ಪಡೆದುಕೊಳ್ಳಲಾಗುವುದು ಎಂದರು.
ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ, ಮನೋರಂಜನೆಗೆ ಪೂರಕವಾಗಿದ್ದ ಚಿನ್ನಿದಾಂಡು, ಲಗೋರಿ, ಬುಗುರಿ, ನಶಿಸುತ್ತಿರುವ ಮತ್ತಿತರ ಗ್ರಾಮೀಣ ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಅದಕ್ಕಾಗಿ ಮಕ್ಕಳ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶ ನೀಡಬೇಕಾದ ಅಗತ್ಯವಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಆರ್.ಪ್ರಸನ್ನಕುಮಾರ್, ರಮೇಶ್ಶೆಟ್ಟಿ, ಕಲಗೋಡು ರತ್ನಾಕರ್, ಆಯನೂರು ಮಂಜುನಾಥ್, ಹಾಲಪ್ಪ, ವೈ.ಹೆಚ್.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular