ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ ರವೀಂದ್ರ ಜಡೇಜಾ ರಾಜಸ್ಥಾನ್ ರಾಯಲ್ಸ್ ತಂಡ ಸೇರಿಕೊಂಡಿದ್ದಾರೆ. ಈ ಹಿಂದಿನ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕನಾಗಿದ್ದ ಸಂಜು ಸ್ಯಾಮ್ಸನ್‌ರನ್ನು ಪಡೆದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ರವೀಂದ್ರ ಜಡೇಜಾರನ್ನು ಬಿಟ್ಟುಕೊಟ್ಟಿದೆ.
ಈ ಮೂಲಕ ಹದಿನೈದು ವರ್ಷಗಳ ಬಳಿಕ ರವೀಂದ್ರ ಜಡೇಜಾ ಮತ್ತೊಮ್ಮೆ ಪಿಂಕ್ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದಾರೆ. ಸೋಮವಾರ ( ಮಾರ್ಚ್ 30 ) ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ತನ್ನ ಮಾಜಿ ತಂಡದ ವಿರುದ್ಧ 3 ಓವರ್ ಎಸೆದ ರವೀಂದ್ರ ಜಡೇಜಾ ಚೆನ್ನೈನ ಇಬ್ಬರು ಬಲಿಷ್ಟ ಆಟಗಾರರಾದ ಸರ್ಫರಾಜ್ ಖಾನ್ ಹಾಗೂ ಶಿವಮ್ ದುಬೆ ಅವರ ವಿಕೆಟ್ ಕಬಳಿಸಿದರು.
ವಿಕೆಟ್ ಪಡೆದ ಬಳಿಕ ರವೀಂದ್ರ ಜಡೇಜಾ ಕೈ ಎತ್ತಿ ಗನ್ ಶಾಟ್ ಸೆಲೆಬ್ರೇಷನ್ ಮಾಡಿದ್ದರು. ಜಡೇಜಾ ಮಾಡಿದ ಈ ಸೆಲೆಬ್ರೇಷನ್ ಕಂಡು ನೆಟ್ಟಿಗರು ಇದು ತನ್ನನ್ನು ಬಿಟ್ಟುಕೊಟ್ಟ ಚೆನ್ನೈ ಫ್ರಾಂಚೈಸಿ ವಿರುದ್ಧ ಬೇಕಂತಲೇ ಮಾಡಿದ ಸೆಲೆಬ್ರೇಷನ್ ಎಂದು ಪೋಸ್ಟ್‌ಗಳನ್ನು ಮಾಡಲಾರಂಭಿಸಿದರು.
ಇದರ ಕುರಿತು ಸ್ವತಃ ಪ್ರತಿಕ್ರಿಯೆಯನ್ನು ಜಡೇಜಾ ನೀಡಿದ್ದು, ‘ನಾನು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವಾಗ ಇದೇ ರೀತಿಯ ಸೆಲೆಬ್ರೇಷನ್ ಮಾಡುತ್ತಿದ್ದೆ. ಹಾಗಾಗಿ ನಾನು ಈ ಸೆಲೆಬ್ರೇಷನ್ ಅನ್ನು ಯಾಕೆ ಮುಂದುವರಿಸಬಾರದು ಎಂದು ಯೋಚಿಸದೆ, ಅದರಲ್ಲೂ ಚೆನ್ನೈ ವಿರುದ್ಧ’ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ತಾನು ಈ ರೀತಿಯ ಸೆಲೆಬ್ರೇಷನ್ ಅನ್ನು ಈ ಹಿಂದೆಯೇ ಮಾಡಿದ್ದೆ ಎಂದು ತಿಳಿಸಿದ್ದಾರೆ.
ಇನ್ನು ತಮ್ಮ ವಿಭಿನ್ನ ಹೇರ್‌ಸ್ಟೈಲ್ ಕುರಿತು ಸಹ ಪ್ರತಿಕ್ರಿಯಿಸಿದ ಜಡೇಜಾ ‘ಎರಡೂವರೆ ತಿಂಗಳು ಲೀಗ್ ಇರುವುದರಿಂದ ಸಾಲು ಸಾಲು ಪಂದ್ಯಗಳಿರುತ್ತವೆ. ಆಚೆ ಎಲ್ಲಿಯೂ ಹೋಗುವ ಯೋಜನೆ ಇರುವುದಿಲ್ಲ. ಹೀಗಾಗಿ ನಾನು ಕ್ರಿಕೆಟ್ ಮೇಲೆ ನನ್ನ ಗಮನ ಇಡುವ ನಿರ್ಧಾರ ಮಾಡಿದೆ. ಈ ರೀತಿಯ ಹೇರ್‌ಸ್ಟ್ರೈಲ್ ಮಾಡಿಸಿರುವುದಿಂದ ಅದನ್ನು ನಿಭಾಯಿಸುವ ಕಡೆ ಹೆಚ್ಚು ಗಮನ ಹರಿಸದೇ ನಾನು ನನ್ನ ಅಭ್ಯಾಸ ಹಾಗೂ ಪಂದ್ಯಗಳ ಕಡೆ ಹೆಚ್ಚಿನ ಗಮನಹರಿಸಬಹುದು’ ಎಂದು ಹೇಳಿಕೊಂಡರು.
ಅಲ್ಲದೇ ತನ್ನ ಕುಟುಂಬ ತಾನು ರಾಜಸ್ಥಾನ್ ರಾಯಲ್ಸ್ ಪರ ಆಡುವುದರ ಬಗ್ಗೆ ಸಂತಸ ಹೊಂದಿದೆ ಎಂದ ಜಡೇಜಾ ತನ್ನ ಪತ್ನಿ ಹಾಗೂ ಮಗಳೂ ಸಹ ಖುಷಿಯಾಗಿದ್ದಾರೆ, ಪಿಂಕ್ ಅವರ ನೆಚ್ಚಿನ ಕಲರ್ ಎಂದರು.

