ವಿರಾಜಪೇಟೆ: ಉದಯಪುರದಲ್ಲಿ ನಡೆದ ಅದ್ಧೂರಿ ಮದುವೆಯ ನಂತರ, ಇದೀಗ ವಿರಾಜಪೇಟೆಯಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿಯ ಆಪ್ತ ರಿಸೆಪ್ಷನ್ ನಡೆದಿದೆ. ಏಪ್ರಿಲ್ 6ರಂದು ರಶ್ಮಿಕಾ ಅವರ ಜನ್ಮದಿನದ ಮರುದಿನವೇ ನಡೆದ ಈ ಸಮಾರಂಭವು ಅಪ್ಪಟ ಕೊಡಗಿನ ಸಂಪ್ರದಾಯಕ್ಕೆ ಸಾಕ್ಷಿಯಾಯಿತು.ತಮ್ಮ ಹುಟ್ಟೂರಿನ ಸಂಭ್ರಮದಲ್ಲಿ ರಶ್ಮಿಕಾ ಅವರು ಕೊಡವ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕೊಡವ ಶೈಲಿಯ ಸೀರೆಯಲ್ಲಿ ರಶ್ಮಿಕಾ ಮಿಂಚಿಂಗ್
ಈ ವಿಶೇಷ ಸಂಜೆಗಾಗಿ ರಶ್ಮಿಕಾ ಗುಲಾಬಿ ಮತ್ತು ಆಲಿವ್ ಗ್ರೀನ್ ಬಣ್ಣದ ಕಾಂಜೀವರಂ ರೇಷ್ಮೆ ಸೀರೆಯನ್ನು ಆರಿಸಿಕೊಂಡಿದ್ದರು. ಸಾಮಾನ್ಯ ಶೈಲಿಯಲ್ಲಿ ಸೀರೆ ಉಡುವ ಬದಲು ಅವರು ಕಟ್ಟುನಿಟ್ಟಾದ ಕೊಡವ ಶೈಲಿಯಲ್ಲಿ (Kodagu Drape) ಸೀರೆ ಉಟ್ಟು ಎಲ್ಲರ ಗಮನ ಸೆಳೆದರು.
ಸೀರೆಯ ವೈಶಿಷ್ಟ್ಯ: ಈ ಉಡುಗೆಯಲ್ಲಿ ಸೀರೆಯ ನೆರಿಗೆಗಳು (Pleats) ಮುಂಭಾಗದ ಬದಲು ಹಿಂಭಾಗದಲ್ಲಿ ಬರುತ್ತವೆ. ಸೆರಗನ್ನು ಬಲ ಭುಜದ ಮೇಲೆ ತಂದು ಅಂದವಾಗಿ ಸಿಕ್ಕಿಸಲಾಗುತ್ತದೆ.
ಸಾಂಪ್ರದಾಯಿಕ ಆಭರಣ: ಸೀರೆಗೆ ಪೂರಕವಾಗಿ ಕೊಡಗಿನ ಹೆಮ್ಮೆಯ ಆಭರಣಗಳಾದ ಪತ್ತಾಕ್ ಹಾರ, ಕೊಕ್ಕೇತಾತಿ ಪೆಂಡೆಂಟ್ ಧರಿಸಿ ರಶ್ಮಿಕಾ ಅಪ್ಪಟ ಕೊಡವ ವಧುವಿನಂತೆ ಕಂಗೊಳಿಸಿದರು.
ಏನಿದು ಕೊಡವ ಶೈಲಿಯ ಇತಿಹಾಸ?
ಕೊಡಗು ಜಿಲ್ಲೆಯ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಕಾಫಿ ತೋಟಗಳಲ್ಲಿ ಕೆಲಸ ಮಾಡುವಾಗ ಮತ್ತು ದೈನಂದಿನ ಕೆಲಸಗಳ ವೇಳೆ ಮಹಿಳೆಯರಿಗೆ ಓಡಾಡಲು ಸುಲಭವಾಗಲಿ ಎಂಬ ಕಾರಣಕ್ಕೆ ಈ ಶೈಲಿಯ ಉಡುಗೆ ರೂಢಿಗೆ ಬಂದಿತ್ತು. ಹಿಂಭಾಗದಲ್ಲಿ ನೆರಿಗೆಗಳಿರುವುದರಿಂದ ಗುಡ್ಡಗಾಡು ಪ್ರದೇಶದಲ್ಲಿ ಓಡಾಟಕ್ಕೆ ಹೆಚ್ಚು ಅನುಕೂಲವಾಗುತ್ತದೆ. ಕಾಲಕ್ರಮೇಣ ಇದು ಕೊಡವ ಸಮುದಾಯದ ಹೆಮ್ಮೆಯ ಗುರುತಾಗಿ ಬದಲಾಯಿತು.
ಮಣ್ಣಿನ ಸಂಪ್ರದಾಯದ ಮೇಲೆ ರಶ್ಮಿಕಾ ಪ್ರೀತಿ
ರಶ್ಮಿಕಾ ಅವರಿಗೆ ಕೊಡವ ಸಂಪ್ರದಾಯದ ಮೇಲೆ ಮೊದಲಿನಿಂದಲೂ ಅಪಾರ ಅಭಿಮಾನ.
ಕಳೆದ ಮಾರ್ಚ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆದ ರಿಸೆಪ್ಷನ್‌ನಲ್ಲಿ ರಶ್ಮಿಕಾ ತಾಯಿ ಕೂಡ ಇದೇ ಶೈಲಿಯ ಸೀರೆಯಲ್ಲಿ ಮಿಂಚಿದ್ದರು.
ಅಷ್ಟೇ ಅಲ್ಲದೆ, 2024ರಲ್ಲಿ ನಡೆದ ಗೆಳೆಯನ ಮದುವೆ ಮತ್ತು 2022ರ ಸಮಾರಂಭಗಳಲ್ಲೂ ರಶ್ಮಿಕಾ ಕೊಡವ ಶೈಲಿಯಲ್ಲೇ ಸೀರೆ ಉಟ್ಟು ಸಂಭ್ರಮಿಸಿದ್ದರು.ಒಟ್ಟಿನಲ್ಲಿ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಜೋಡಿಯ ಮದುವೆಯ ಸಂಭ್ರಮವು ಕೊಡಗಿನ ಸಂಪ್ರದಾಯದ ಸೊಗಡಿನೊಂದಿಗೆ ಮತ್ತಷ್ಟು ಕಳೆಗಟ್ಟಿದೆ.

