ಬಾಲಿವುಡ್‌ನ ಬಹುನಿರೀಕ್ಷಿತ ‘ಕಾಕ್‌ಟೇಲ್ 2’ ಸಿನಿಮಾದ ಹಾಡು ಬಿಡುಗಡೆ ಸಮಾರಂಭದಲ್ಲಿ ಸ್ಯಾಂಡಲ್‌ವುಡ್ ಬೆಡಗಿ ರಶ್ಮಿಕಾ ಮಂದಣ್ಣ ಅವರು ಮಾಡಿದ ಎಡವಟ್ಟೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸಹ ನಟಿ ಕೃತಿ ಸನೋನ್ ಅವರ ಸೌಂದರ್ಯವನ್ನು ಹೊಗಳುವ ಆತುರದಲ್ಲಿ ರಶ್ಮಿಕಾ ಸಾರ್ವಜನಿಕವಾಗಿಯೇ ಅಶ್ಲೀಲ ಪದವೊಂದನ್ನು (ಎಫ್ ಬಾಂಬ್) ಬಳಸಿದ್ದು, ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಭಾನುವಾರ ರಾತ್ರಿ ನಡೆದ ಭವ್ಯ ಸಮಾರಂಭದಲ್ಲಿ ಚಿತ್ರದ ನಾಯಕ ನಟ ಶಾಹಿದ್ ಕಪೂರ್, ನಾಯಕಿಯರಾದ ಕೃತಿ ಸನೋನ್, ರಶ್ಮಿಕಾ ಮಂದಣ್ಣ, ನಿರ್ಮಾಪಕ ದಿನೇಶ್ ವಿಜನ್, ನಿರ್ದೇಶಕ ಹೋಮಿ ಅದಾಜಾನಿಯಾ ಹಾಗೂ ಸಂಗೀತ ನಿರ್ದೇಶಕ ಪ್ರೀತಮ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಹೊಸ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡ ಸಂಭ್ರಮಿಸಿತು.
ಇದೇ ವೇಳೆ ವೇದಿಕೆ ಮೇಲೆ ಮಾತನಾಡಿದ ರಶ್ಮಿಕಾ ಮಂದಣ್ಣ, ಪಕ್ಕದಲ್ಲೇ ನಿಂತಿದ್ದ ಕೃತಿ ಸನೋನ್ ಅವರ ಗ್ಲಾಮರಸ್ ಲುಕ್ ನೋಡಿ ಫಿದಾ ಆದರು. ಕೃತಿ ಅವರನ್ನು ಅತಿಯಾಗಿ ಹೊಗಳುವ ಬರದಲ್ಲಿ, ನೀನು ತುಂಬಾ ಹಾಟ್ ಆಗಿದ್ದೀಯಾ ಎಂಬ ಅರ್ಥದಲ್ಲಿ ಇಂಗ್ಲಿಷ್‌ನ ಬೈಗುಳದ ಪದವನ್ನು ಬಳಸಿಬಿಟ್ಟರು. ತಕ್ಷಣವೇ ತಮ್ಮ ತಪ್ಪಿನ ಅರಿವಾಗಿ ಬಾಯಿ ಮುಚ್ಚಿಕೊಂಡ ರಶ್ಮಿಕಾ, ದಯವಿಟ್ಟು ಇದನ್ನು ಮ್ಯೂಟ್ ಮಾಡಿ ಎಂದು ಹಾಸ್ಯಮಯವಾಗಿ ಕೇಳಿಕೊಂಡರು. ರಶ್ಮಿಕಾ ಅವರ ಈ ಹಠಾತ್ ಪ್ರತಿಕ್ರಿಯೆ ಕಂಡು ಅಲ್ಲಿದ್ದ ಪ್ರೇಕ್ಷಕರು ಮತ್ತು ಮಾಧ್ಯಮದವರು ಜೋರಾಗಿ ನಕ್ಕರಲ್ಲದೆ, ಚಪ್ಪಾಳೆ ತಟ್ಟಿ ಹೂಟಿಂಗ್ ಮಾಡಿದರು.
ಬಳಿಕ ಚಿತ್ರದ ಬಗ್ಗೆ ಮಾತನಾಡಿದ ರಶ್ಮಿಕಾ, ಚಿತ್ರೀಕರಣದ ಸಮಯದಲ್ಲಿ ಇಡೀ ತಂಡದ ನಡುವೆ ಅದ್ಭುತವಾದ ಬಾಂಧವ್ಯ ಇತ್ತು. ಶಾಹಿದ್ ಕಪೂರ್ ಜೊತೆಗಿನ ಕೆಮಿಸ್ಟ್ರಿ ಮತ್ತು ಚಿತ್ರದ ಪ್ರತಿ ದೃಶ್ಯವೂ ತುಂಬಾ ವಿಭಿನ್ನವಾಗಿ ಮೂಡಿಬಂದಿದೆ. ಈಗ ಬಿಡುಗಡೆಯಾಗಿರುವುದು ಕೇವಲ ಒಂದು ಸಣ್ಣ ತುಣುಕು ಮಾತ್ರ, ಪ್ರೇಕ್ಷಕರಿಗೆ ಸಿನಿಮಾದಲ್ಲಿ ದೊಡ್ಡ ರಸದೂತವೇ ಕಾಯುತ್ತಿದೆ ಎಂದು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದರು.
ಕಳೆದ ವರ್ಷದಿಂದಲೇ ಭಾರಿ ಕುತೂಹಲ ಮೂಡಿಸಿರುವ ‘ಕಾಕ್‌ಟೇಲ್ 2’ ಸಿನಿಮಾ ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು 2012 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ನಟನೆಯ ‘ಕಾಕ್‌ಟೇಲ್’ ಚಿತ್ರದ ಮುಂದುವರಿದ ಭಾಗವಾಗಿದೆ.

