ಪ್ರತಿಷ್ಠಿತ ಕ್ಯಾನೆಸ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಬಾಲಿವುಡ್ ನಟಿ ಆಲಿಯಾ ಭಟ್ ಅವರನ್ನು ಅಲ್ಲಿನ ವಿದೇಶಿ ಮಾಧ್ಯಮಗಳು ಮತ್ತು ಛಾಯಾಗ್ರಾಹಕರು (ಪೆಪರಾಜಿ) ನಿರ್ಲಕ್ಷಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮಟ್ಟದ ಟ್ರೋಲಿಂಗ್ ಮಾಡಲಾಗುತ್ತಿದೆ. ಆಲಿಯಾ ಭಟ್ ಅವರ ಈ ಟ್ರೋಲಿಂಗ್ ವಿಚಾರವಾಗಿ ಈಗ ಬಾಲಿವುಡ್‌ನ ಹಿರಿಯ ನಟಿ ಅಮೀಶಾ ಪಟೇಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತದಲ್ಲಿನ ಈ ನೆಗೆಟಿವ್ ಆನ್‌ಲೈನ್ ಸಂಸ್ಕೃತಿಯನ್ನು ಕಠಿಣ ಪದಗಳಲ್ಲಿ ಖಂಡಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅಮೀಶಾ ಪಟೇಲ್, ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸದೆ ಭಾರತೀಯರ ಕಾಲೆಳೆಯುವ ಮಾನಸಿಕತೆಯ ವಿರುದ್ಧ ಕಿಡಿಕಾರಿದ್ದಾರೆ. ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ನಮ್ಮವರನ್ನೇ ಕೆಳಗೆ ತಳ್ಳುವುದು ನಮ್ಮ ಭಾರತೀಯರ ಮಾನಸಿಕತೆಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ನಾವು ನಮ್ಮನ್ನು ಒಂದೇ ರಾಷ್ಟ್ರ ಮತ್ತು ಒಗ್ಗಟ್ಟಾಗಿದ್ದೇವೆ ಎಂದು ಕರೆದುಕೊಳ್ಳುತ್ತೇವೆ, ಆದರೆ ನಾವು ನಿಜವಾಗಿಯೂ ಹಾಗಿದ್ದೇವಾ ಎಂದು ಪ್ರಶ್ನಿಸಿದ್ದಾರೆ.
ಹಾಗೆಯೇ ಮುಂದುವರಿದು ಮಾತನಾಡಿದ ಅವರು, ಇಲ್ಲಿ ಭಾರತದಲ್ಲಿ ನಟರನ್ನು ನಮ್ಮದೇ ದೇಶದ ಜನರು ಟ್ರೋಲ್ ಮಾಡುವಷ್ಟು ಕೆಟ್ಟದಾಗಿ ಹಾಲಿವುಡ್ ಸ್ಟಾರ್‌ಗಳನ್ನು ಅವರ ದೇಶದ ಜನರು ಎಂದಿಗೂ ಮಾಡುವುದಿಲ್ಲ. ಇದು ಅತ್ಯಂತ ವಿಷಾದನೀಯ ಸಂಗತಿ. ಅಂತರರಾಷ್ಟ್ರೀಯ ಮಟ್ಟದ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಭಾರತೀಯ ತಾರೆಯರ ಉಡುಪು ಅಥವಾ ಅವರ ನೋಟವನ್ನು ಹೆಮ್ಮೆಯಿಂದ ನೋಡುವ ಬದಲು, ನಮ್ಮವರೇ ಅವರನ್ನು ಗುರಿಯಾಗಿಸಿಕೊಂಡು ಅವಮಾನ ಮಾಡುತ್ತಾರೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಬರೆದುಕೊಂಡಿದ್ದಾರೆ. ಅಮೀಶಾ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಅವರು ಕ್ಯಾನೆಸ್‌ನಲ್ಲಿ ಟ್ರೋಲ್ ಆದ ಆಲಿಯಾ ಭಟ್ ಪರವಾಗಿಯೇ ಧ್ವನಿ ಎತ್ತಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ತಮ್ಮನ್ನು ಟ್ರೋಲ್ ಮಾಡಿದವರಿಗೆ ಆಲಿಯಾ ಭಟ್ ಕೂಡ ಅತ್ಯಂತ ಗೌರವಯುತವಾಗಿ ಮತ್ತು ಹಾಸ್ಯಭರಿತವಾಗಿಯೇ ಉತ್ತರ ನೀಡಿದ್ದಾರೆ. ನೆಟ್ಟಿಗನೊಬ್ಬ ಕ್ಯಾನೆಸ್ ಫೋಟೋಗೆ ಕಮೆಂಟ್ ಮಾಡಿ, ಅಯ್ಯೋ ಪಾಪ ನಿಮ್ಮನ್ನು ಅಲ್ಲಿ ಯಾರೂ ಗಮನಿಸಲೇ ಇಲ್ಲ ಎಂದು ನಗುವ ಎಮೋಜಿ ಹಾಕಿದ್ದನು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಆಲಿಯಾ, ಯಾಕೆ ಬೇಸರ ಮಾಡ್ಕೋತೀರಾ ಪ್ರೀತಿಯಿಂದ ಹೇಳ್ತೀನಿ ನೋಡಿ, ನೀವಾದರೂ ನನ್ನನ್ನು ಗಮನಿಸಿದ್ರಲ್ವಾ ಎಂದು ತಿರುಗೇಟು ನೀಡುವ ಮೂಲಕ ನೆಟ್ಟಿಗರ ಬಾಯಿ ಮುಚ್ಚಿಸಿದ್ದಾರೆ.
ಸದ್ಯ ಆಲಿಯಾ ಭಟ್ ಅವರು ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ಆ್ಯಕ್ಷನ್ ಚಿತ್ರ ‘ಆಲ್ಫಾ’ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಈ ಚಿತ್ರವು ಇದೇ ವರ್ಷ ಜುಲೈ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರ ಜೊತೆಗೆ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ‘ಲವ್ ಆಂಡ್ ವಾರ್’ ಚಿತ್ರದಲ್ಲೂ ರಣಬೀರ್ ಕಪೂರ್ ಜೊತೆ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ.

