ಬಾಲಿವುಡ್ ಎಂಬ ಬಣ್ಣದ ಲೋಕ ಎಷ್ಟು ಅದ್ಭುತವೋ ಅಷ್ಟೇ ನಿಗೂಢ. ಇಲ್ಲಿ ರಾತ್ರೋರಾತ್ರಿ ಸ್ಟಾರ್ ಆದವರು ಅಷ್ಟೇ ವೇಗವಾಗಿ ಮರೆಯಾದ ಉದಾಹರಣೆಗಳು ಸಾಕಷ್ಟಿವೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಗಾಯಕಿ ರಾಣು ಮೊಂಡಲ್. 2019ರಲ್ಲಿ ಪಶ್ಚಿಮ ಬಂಗಾಳದ ರಣಘಾಟ್ ರೈಲ್ವೇ ನಿಲ್ದಾಣದಲ್ಲಿ ಲತಾ ಮಂಗೇಶ್ಕರ್ ಅವರ ಹಾಡನ್ನು ಹಾಡುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ಈ ಪ್ರತಿಭೆ, ಇಂದು ಮತ್ತೆ ಹಳೆಯ ಬಡತನದ ಕೂಪಕ್ಕೆ ತಳ್ಳಲ್ಪಟ್ಟಿದ್ದಾರೆ.
ಸಂಗೀತ ನಿರ್ದೇಶಕ ಹಿಮೇಶ್ ರೇಶಮಿಯಾ ಅವರು ರಾಣು ಮೊಂಡಲ್ ಅವರ ಪ್ರತಿಭೆಯನ್ನು ಗುರುತಿಸಿ ಮುಂಬೈಗೆ ಕರೆಸಿಕೊಂಡಿದ್ದರು. ‘ಇಂಡಿಯನ್ ಐಡಲ್’ ಅಂತಹ ದೊಡ್ಡ ರಿಯಾಲಿಟಿ ಶೋ ವೇದಿಕೆಯಲ್ಲಿ ಹಾಡಿದ್ದಷ್ಟೇ ಅಲ್ಲದೆ, ಹಿಮೇಶ್ ಅವರ ಸಿನಿಮಾಗಳಲ್ಲಿ ‘ತೇರಿ ಮೇರಿ ಕಹಾನಿ’ ಸೇರಿದಂತೆ ಹಲವು ಹಿಟ್ ಹಾಡುಗಳನ್ನು ಹಾಡಿ ಸೈ ಎನಿಸಿಕೊಂಡಿದ್ದರು. ಆದರೆ ಈ ಯಶಸ್ಸು ಮತ್ತು ಪ್ರಸಿದ್ಧಿಯ ಬೆಳಕು ಅವರ ಜೀವನದಲ್ಲಿ ದೀರ್ಘಕಾಲ ಉಳಿಯಲಿಲ್ಲ.
ಇತ್ತೀಚೆಗೆ ಯೂಟ್ಯೂಬರ್ ಒಬ್ಬರು ಹಂಚಿಕೊಂಡಿರುವ ವಿಡಿಯೋದಲ್ಲಿ ರಾಣು ಮೊಂಡಲ್ ಅವರ ಪ್ರಸ್ತುತ ಸ್ಥಿತಿ ಅತ್ಯಂತ ಶೋಚನೀಯವಾಗಿರುವುದು ಕಂಡುಬಂದಿದೆ. ರಣಘಾಟ್‌ನಲ್ಲಿರುವ ಅವರ ಹಳೆಯ ಮನೆ ಶಿಥಿಲಾವಸ್ಥೆಯಲ್ಲಿದ್ದು, ಎಲ್ಲೆಡೆ ಕಸದ ರಾಶಿ ಮತ್ತು ಒಡೆದ ಗೋಡೆಗಳೇ ತುಂಬಿವೆ. ಗ್ಲಾಮರ್ ಜಗತ್ತಿನಲ್ಲಿ ಮಿಂಚಿದ್ದ ಈ ಗಾಯಕಿ ಇಂದು ಪ್ಲಾಸ್ಟಿಕ್ ಹಾಳೆಯ ಮೇಲೆ ಕುಳಿತು ಊಟ ಮಾಡುತ್ತಿದ್ದು, ನೆರೆಹೊರೆಯವರು ನೀಡುವ ದಾನ ಧರ್ಮದ ಮೇಲೆ ಜೀವನ ಸಾಗಿಸುತ್ತಿದ್ದಾರೆ.
ನೆರೆಹೊರೆಯವರ ಪ್ರಕಾರ, ರಾಣು ಮೊಂಡಲ್ ಅವರ ಮಾನಸಿಕ ಸ್ಥಿತಿ ಕೂಡ ಸರಿಯಾಗಿಲ್ಲ. ವಿಷಯಗಳನ್ನು ಬೇಗನೆ ಮರೆತುಬಿಡುವ ಅವರು, ದಿನಸಿ ಬಿಲ್‌ಗಳನ್ನು ಪಾವತಿಸಲು ಕೂಡ ಇತರರ ಸಹಾಯ ಪಡೆಯುತ್ತಿದ್ದಾರೆ. “ಕೀರ್ತಿ ಎನ್ನುವುದು ಕ್ಷಣಿಕ” ಎಂಬುದಕ್ಕೆ ರಾಣು ಮೊಂಡಲ್ ಅವರ ಜೀವನವೇ ಸಾಕ್ಷಿಯಾಗಿದೆ. ಅಂದು ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದ ಈ ಗಾಯಕಿಯ ಬಳಿ ಇಂದು ಕನಿಷ್ಠ ಸೌಲಭ್ಯಗಳೂ ಇಲ್ಲದಿರುವುದು ವಿಷಾದನೀಯ ಸಂಗತಿ.

