HomeUncategorizedಬಿ.ವೈ.ವಿಜಯೇಂದ್ರ ಅವರನ್ನು ಕಡೆಗಣಿಸಿದರೆ ಬಿಜೆಪಿಗೆ ಭಾರಿ ನಷ್ಟ ಕಾದಿದೆ: ರಂಭಾಪುರಿ ಜಗದ್ಗುರುಗಳ ಎಚ್ಚರಿಕೆ

ಬಿ.ವೈ.ವಿಜಯೇಂದ್ರ ಅವರನ್ನು ಕಡೆಗಣಿಸಿದರೆ ಬಿಜೆಪಿಗೆ ಭಾರಿ ನಷ್ಟ ಕಾದಿದೆ: ರಂಭಾಪುರಿ ಜಗದ್ಗುರುಗಳ ಎಚ್ಚರಿಕೆ

ದಾವಣಗೆರೆ: ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಲಹ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆಗಾಗಿ ಹಿರಿಯ ನಾಯಕರಿಂದಲೇ ಒತ್ತಾಯ ಕೇಳಿಬರುತ್ತಿರುವ ಬೆನ್ನಲ್ಲೇ ರಂಭಾಪುರಿ ಜಗದ್ಗುರುಗಳು ಬಿಜೆಪಿ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಬಿಜೆಪಿಯಲ್ಲಿ ಒಂದೆಡೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪರನ್ನು ಮೂಲೆ ಗುಂಪು ಮಾಡಲಾಗುತ್ತಿದೆ. ಮತ್ತೊಂದೆಡೆ ಹಾಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬಗ್ಗೆಯೂ ಪಕ್ಷದಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಈ ಬೆಳವಣಿಗೆ ನಡುವೆ ರಂಭಾಪುರಿ ಜಗದ್ಗುರುಗಳು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಬಿಜೆಪಿ ನಾಯಕರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಶ್ರೀಗಳು, ಕರ್ನಾಟಕದಲ್ಲಿ ಕೇವಲ ಎರಡು ಸ್ಥಾನಗಳಿದ್ದ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ಏರಿಸಿದ ಮುತ್ಸದ್ದಿ ಬಿ.ಎಸ್. ಯಡಿಯೂರಪ್ಪ. ಅಂತಹ ನಾಯಕರನ್ನು ಹಾಗೂ ಅವರ ಪುತ್ರ ವಿಜಯೇಂದ್ರ ಅವರನ್ನು ಕಡೆಗಣಿಸಿ, ವೀರಶೈವ ಲಿಂಗಾಯತ ಸಮುದಾಯವನ್ನು ಅಲಕ್ಷ್ಯ ಮಾಡಿದರೆ ಪಕ್ಷಕ್ಕೆ ಭಾರಿ ನಷ್ಟವಾಗಲಿದೆ ಎಂದು ಎಚ್ಚರಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ದೆಹಲಿ ನಾಯಕರಿಗೂ ಸಂದೇಶ ರವಾನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿ.ಎಸ್. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರೂ ಅವರಿಗೆ ಪರಿಪೂರ್ಣವಾಗಿ ಅಧಿಕಾರ ನಡೆಸಲು ಪಕ್ಷದ ಒಳಗಿನವರೇ ಬಿಡಲಿಲ್ಲ. ಅವರು ಸಿಎಂ ಆಗಿದ್ದಾಗಲೂ ಕಾಲು ಎಳೆಯುವ ಜನರಿದ್ದರು, ಈಗ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೂ ಅಂತಹದ್ದೇ ಪಿತೂರಿಗಳು ಪಕ್ಷದೊಳಗೆ ಮುಂದುವರಿದಿವೆ ಎಂದು ಶ್ರೀಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಹಿಂದೆ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದಾಗ ಚುನಾವಣೆಯಲ್ಲಿ ಯಾವ ರೀತಿ ದುಷ್ಪರಿಣಾಮ ಎದುರಿಸಬೇಕಾಯಿತೋ, ಈಗಲೂ ಅದೇ ತಪ್ಪು ಮರುಕಳಿಸಿದರೆ ತಕ್ಕ ಪಾಠ ಕಲಿಯಬೇಕಾಗುತ್ತದೆ ಎಂದಿದ್ದಾರೆ.

ಬಿಜೆಪಿಯಲ್ಲಿ ಎರಡು-ಮೂರು ಗುಂಪುಗಳಾಗದೆ ಪರಸ್ಪರ ಒಂದಾಗಿ ಕೆಲಸ ಮಾಡಬೇಕು, ಇಲ್ಲದಿದ್ದರೆ ಇದರ ನೇರ ಲಾಭವನ್ನು ವಿರೋಧ ಪಕ್ಷಗಳು ಪಡೆಯಲಿವೆ ಎಂದು ಎಚ್ಚರಿಸಿದರು. ಕೇಂದ್ರ ನಾಯಕರು ತಕ್ಷಣವೇ ಮಧ್ಯಪ್ರವೇಶಿಸಿ ಪಕ್ಷದೊಳಗಿನ ಆಂತರಿಕ ಬೇಗುದಿಯನ್ನು ಶಮನ ಮಾಡಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಅಯೋಧ್ಯೆ ರಾಮ ಮಂದಿರದ ದೇಣಿಗೆ ದುರ್ಬಳಕೆ ವಿವಾದದ ಕುರಿತು ಪ್ರತಿಕ್ರಿಯಿಸಿದ ರಂಭಾಪುರಿ ಶ್ರೀಗಳು, ಜಗತ್ತಿನಾದ್ಯಂತ ಇರುವ ಎಲ್ಲಾ ವರ್ಗದ ಭಕ್ತರು ಭಕ್ತಿ-ಭಾವದಿಂದ ರಾಮ ಮಂದಿರ ನಿರ್ಮಾಣಕ್ಕೆ ಧನ ಸಹಾಯ ಮಾಡಿದ್ದಾರೆ. ಆದರೆ ಅಲ್ಲಿನ ಕೆಲವು ವ್ಯಕ್ತಿಗಳು ಅಡ್ಡದಾರಿಯಲ್ಲಿ ಹೋಗಿ ಪವಿತ್ರವಾದ ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ಬೆಳಕಿಗೆ ಬಂದಿರುವುದು ವಿಷಾದನೀಯ. ಇಂತಹ ಪವಿತ್ರ ಸ್ಥಳದಲ್ಲಿ ಭ್ರಷ್ಟಾಚಾರದ ಕೃತ್ಯಗಳು ನಡೆಯಬಾರದು. ತಪ್ಪು ಮಾಡಿದವರು ಯಾರೇ ಇರಲಿ ಅವರಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular