ಬೆಂಗಳೂರು- ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಸುದ್ದಿ ವಾಹಿನಿ ಮಾಲೀಕ
ಹಾಗೂ ವ್ಯವಸ್ಥಾಪಕ ನಿರ್ದೇಶಕ
ರಾಕೇಶ್ ಶೆಟ್ಟಿ ಅವರಿಗೆ ಬೆಂಗಳೂರಿನ 65ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ವಾದ ಮತ್ತು ಪ್ರತಿವಾದವನ್ನು ಆಲಿಸಿ, ಆದೇಶವನ್ನು ಕಾದಿರಿಸಿದ್ದ ನ್ಯಾಯಾಲಯ ರಾಕೇಶ್ ಶೆಟ್ಟಿ ಅವರಿಗೆ ಷರತ್ತು ಬದ್ಧ ಜಾಮೀನು ಮಂಚೂರಿ ಮಾಡಿ ಆದೇಶ ಹೊರಡಿಸಿತು.
CCH-66 ನ್ಯಾಯಾಲಯದ ನ್ಯಾಯಾಧೀಶರ ಮುಂದೆ Crl.Misc. No. 10523/2026ರ ವಿಚಾರಣೆ ನಡೆದಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 482ರ ಅಡಿಯಲ್ಲಿ ಸಲ್ಲಿಸಲಾಗಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಪರಿಗಣಿಸಿ ಈ ಆದೇಶ ನೀಡಲಾಗಿದೆ.
ಮುಖ್ಯ ನಿರೀಕ್ಷಣಾ ಜಾಮೀನು ಅರ್ಜಿಯ ಇತ್ಯರ್ಥವಾಗುವವರೆಗೆ ಮಧ್ಯಂತರ ರಕ್ಷಣೆ ನೀಡಲಾಗಿದೆ.
ನ್ಯಾಯಾಲಯದ ಷರತ್ತುಗಳು
ನ್ಯಾಯಾಲಯ ವಿಧಿಸಿರುವ ಷರತ್ತುಗಳ ಪ್ರಕಾರ, ಪೊಲೀಸರು ಅರ್ಜಿದಾರರನ್ನು ಬಂಧಿಸುವ ಸಂದರ್ಭದಲ್ಲಿ ಅವರು ಒಂದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅದೇ ಮೊತ್ತಕ್ಕೆ ಒಬ್ಬ ಜಾಮೀನುದಾರರನ್ನು ಒದಗಿಸಬೇಕು.
ಅಲ್ಲದೆ, ತನಿಖಾಧಿಕಾರಿಯೊಂದಿಗೆ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ಅಭಿಯೋಜನಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು
ಅಥವಾ ಸಾಕ್ಷ್ಯಗಳನ್ನು ತಿರುಚಲು ಪ್ರಯತ್ನಿಸಬಾರದು ಎಂದು ನ್ಯಾಯಾಲಯ ಸೂಚಿಸಿದೆ.
ಅಂತಿಮ ನಿರೀಕ್ಷಣಾ ಜಾಮೀನು ದೊರೆಯದಿದ್ದಲ್ಲಿ ಅರ್ಜಿದಾರರು ಶರಣಾಗಬೇಕು ಎಂಬ ಷರತ್ತನ್ನೂ ವಿಧಿಸಲಾಗಿದೆ.
ಮಧ್ಯಂತರ ಆದೇಶದ ಪ್ರತಿಗಳು
ಪ್ರಕರಣಕ್ಕೆ ಸಂಬಂಧಿಸಿದ ಜಾಮೀನು ಅರ್ಜಿ, ಮಧ್ಯಂತರ ಆದೇಶ ಹಾಗೂ BNSS ಸೆಕ್ಷನ್ 482ರ ಅಡಿಯಲ್ಲಿ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಯ ಪ್ರತಿಗಳನ್ನು ಸರ್ಕಾರಿ ಅಭಿಯೋಜಕರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಅಕ್ಟೋಬರ್ 30ರವರೆಗೆ ಕಾಲಾವಕಾಶ ನೀಡಲಾಗಿದೆ.
ಇದಕ್ಕೂ ಮೊದಲು, ಅಕ್ಟೋಬರ್ 22ರಂದು ನಡೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗೆ ಉದ್ದೇಶಿಸಿ ಬರೆದ ಪತ್ರವನ್ನು ಒಳಗೊಂಡ ಮೆಮೊವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಅಂದು ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತು ವಾದಗಳನ್ನು ಆಲಿಸಿದ ನ್ಯಾಯಾಲಯ, ಆದೇಶ ಪ್ರಕಟಿಸಲು ಅಕ್ಟೋಬರ್ 23ಕ್ಕೆ ಮುಂದೂಡಿತ್ತು.

