ಬೆಂಗಳೂರು: ಬರ ತಾಲೂಕುಗಳ ಪಟ್ಟಿಯಲ್ಲಿ ತಮ್ಮ ಕ್ಷೇತ್ರ ಇಂಡಿ ತಾಲೂಕನ್ನು ಸೇರಿಸದ ಹಿನ್ನೆಲೆಯಲ್ಲಿ ಬೇಸರಗೊಂಡು ಶಾಸಕ ಸ್ಥಾನಕ್ಕೆ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ನೀಡಿದ್ದು, ಸದನದಲ್ಲಿ ಭಾರಿ ಗದ್ದಲ ಹಾಗೂ ಕೋಲಾಹಲಕ್ಕೆ ಕಾರಣವಾಯಿತು.
ಇಂಡಿ, ಚಡಚಣ ತಾಲೂಕುಗಳನ್ನು ಬರಪಟ್ಟಿಗೆ ಸೇರ್ಪಡೆಗೊಳಿಸದ ಹಿನ್ನೆಲೆ ಅಸಮಾಧಾನಗೊಂಡ ಯಶವಂತರಾಯಗೌಡ ವಿಧಾನಸೌಧದಲ್ಲಿ ಸ್ಪೀಕರ್ರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ. ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಮನನೊಂದು ಈ ನಿರ್ಧಾರ ಕೈಗೊಂಡಿದ್ದಾಗಿ ಯಶವಂತರಾಯಗೌಡ ಪಾಟೀಲ್ ತಿಳಿಸಿದ್ದಾರೆ.
ಬರ ವಿಚಾರವಾಗಿ ವಿಧಾನಸಭೆ ಕಲಾಪದಲ್ಲಿ ಚರ್ಚೆ ನಡೆಯುತ್ತಿರುವ ವೇಳೆ ಶಾಸಕ ಯಶವಂತರಾಯಗೌಡ ರಾಜೀನಾಮೆ ಪತ್ರ ಸಲ್ಲಿಕೆ ಪ್ರತಿಧ್ವನಿಸಿತು. ವಿಪಕ್ಷ ನಾಯಕ ಆರ್.ಅಶೋಕ್ ಸದನದಲ್ಲಿ ಕಾಂಗ್ರೆಸ್ ಶಾಸಕರ ರಾಜೀನಾಮೆ ಪತ್ರದ ವಿಷಯ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಶಾಸಕರ ರಾಜೀನಾಮೆ ಪತ್ರದಲ್ಲಿದೆ ಎಂಬುದನ್ನೂ ಓದಿ ಹೇಳಿದರು.
ತಮ್ಮ ರಾಜೀನಾಮೆ ವಿಜಯಪುರ ಜಿಲ್ಲೆಯ ನಾನು ಪ್ರತಿನಿಧಿಸುವ ಇಂಡಿ ತಾಲೂಕು 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೀವ್ರ ಬರಗಾಲಕ್ಕೆ ತುತ್ತಾಗಿದ್ದು, ಆರಂಭದಲ್ಲಿ ಸ್ವಲ್ಪ ಮಳೆ ಬಿದ್ದ ಪ್ರಯುಕ್ತ ರೈತರು ಸಾಲ ಮಾಡಿ ಬೀಜ, ಗೊಬ್ಬರಗಳನ್ನು ಖರೀದಿಸಿ, ಬಿತ್ತನೆ ಮಾಡಿರುತ್ತಾರೆ. ಆದರೆ, ಸಕಾಲಕ್ಕೆ ಮಳೆಯಾಗದ ಕಾರಣ ಬೆಳೆಗಳು ಬತ್ತಿಹೋಗಿದ್ದು, ಜನ – ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯುಂಟಾಗಿರುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ 28.08.2026ರಂದು ಮನವಿ ಪತ್ರವನ್ನು ಸಲ್ಲಿಸಿ, ಇಂಡಿ ತಾಲ್ಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಮನವಿ ಪತ್ರ ಸಲ್ಲಿಸಲಾಗಿತ್ತು. ಆದರೆ, ವಿಜಯಪುರ ಜಿಲ್ಲೆಯ ಒಟ್ಟು 13 ತಾಲೂಕುಗಳ ಪೈಕಿ ನನ್ನ ಇಂಡಿ ಮತ್ತು ಚಡಚಣ ಈ 2 ತಾಲೂಕುಗಳನ್ನು ಹೊರತುಪಡಿಸಿ, ಇದುವರೆಗೂ ರಾಜ್ಯದ 177 ತಾಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿರುತ್ತದೆ.
ನಾನು ಆಡಳಿತ ಪಕ್ಷದ ಶಾಸಕನಾಗಿದ್ದು, ನಮ್ಮ ಸರ್ಕಾರಕ್ಕೆ ಮುಜಗರವಾಗಬಾರದು ಎಂದು ಸೂಕ್ಷ್ಮ ಮತಿಯನಾಗಿ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇನೆ. ಆದರೂ ಸಹ ನಮ್ಮ ಮಾತಿಗೆ, ನಮ್ಮ ಭಾವನೆಗಳಿಗೆ ಬೆಲೆ ಇಲ್ಲದಂತಾಗಿದ್ದು, ಈಗಿನ ರಾಜಕೀಯ ವಾತವಾರಣದಲ್ಲಿ ಬಲಾಢ್ಯರಿಗೆ, ಒತ್ತಡ ತಂತ್ರಗಳನ್ನು ಎಣಿಯುವವರಿಗೆ ಮನ್ನಣೆ ನೀಡಲಾಗುತ್ತಿದೆ. ನಮ್ಮಂತಹ ಸೌಮ್ಯ ಸ್ವಭಾವದವರಿಗೆ ಯಾವುದೇ ಕೆಲಸಗಳಿಗೆ ಮನ್ನಣೆ ದೊರೆಯುತ್ತಿಲ್ಲ. ಆದ್ದರಿಂದ ನನ್ನ ಕ್ಷೇತ್ರದ ಜನರ ಆಶೆ, ಆಶೋತ್ತರಗಳಿಗೆ ಸ್ಪಂದಿಸಲು ಸಾಧ್ಯವಾಗದ ಪ್ರಯುಕ್ತ ನಾನು ಸ್ವ – ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ಅಂಗೀಕರಿಸಿ ಎಂದು ಮನವಿ ಮಾಡಿದ್ದಾರೆ. ಈ ಸರ್ಕಾರಕ್ಕೆ ಕಿಂಚಿತ್ತಾದರೂ ನಾಚಿಕೆ ಬೇಡವೇ? ಬರ ಪರಿಸ್ಥಿತಿ ಇದ್ದರೂ ಬರಗಾಲವನ್ನು ಸರ್ಕಾರ ಘೋಷಿಸುತ್ತಿಲ್ಲ. ಇದರಿಂದ ನೊಂದು ಆಡಳಿತ ಪಕ್ಷದ ಶಾಸಕರೇ ರಾಜೀನಾಮೆ ನೀಡಿದ್ದಾರೆ ಎಂದು ಕಿಡಿಕಾರಿದರು.
ನಿಮ್ಮ ಶಾಸಕರುಗಳು ನಮ್ಮ ಸರ್ಕಾರದ ವಿರುದ್ಧ ಕೊಟ್ಟಿರುವ ರಾಜೀನಾಮೆ ಇದು. ನಾಚಿಕೆ ಆಗ್ಬೇಕು ನಿಮ್ಮ ಸರ್ಕಾರಕ್ಕೆ. ಸರ್ಕಾರದ ಯೋಗ್ಯತೆ ಏನು, ಶಾಸಕರು ರಾಜೀನಾಮೆ ಕೊಡುತ್ತೇನೆ ಅಂತಾರೆ. ಮೊನ್ನೆ ಹೆಚ್.ಕೆ.ಪಾಟೀಲ್ ರಾಜೀನಾಮೆ ನೀಡಿರುವುದಾಗಿ ಹೇಳಿದ್ದರು. ಈಗ ರಾಯಗೌಡ ಪಾಟೀಲ್ ರಾಜೀನಾಮೆ ಕೊಟ್ಟಿದ್ದಾರೆ ಎಂದು ಗುಡುಗಿದರು. ಈ ವೇಳೆ ಆಡಳಿತ ಹಾಗೂ ವಿಪಕ್ಷ ಶಾಸಕರ ನಡುವೆ ವಾಗ್ವಾದ ನಡೆಯಿತು.
ಡಿಸಿಎಂ ಪರಮೇಶ್ವರ್ ಎದ್ದುನಿಂತು ಇದಕ್ಕೆಲ್ಲ ಕಾರಣ ಕೇಂದ್ರ ಸರ್ಕಾರ. ರಾಜ್ಯಕ್ಕೆ ನೀಡಬೇಕಿರುವ ಅನುದಾನವನ್ನು ಹಾಗೂ ಪರಿಹಾರ ಹಣವನ್ನು ನೀಡುತ್ತಿಲ್ಲ ಎಂದು ಸಮಜಾಯಿಷಿ ನೀಡಿದರು. ನಾವು ಕೇಂದ್ರ ಸರ್ಕಾರಕ್ಕೆ 10 ಪತ್ರ ಬರೆದಿದ್ದೇವೆ ಆದರೂ ಅನುದಾನ ನೀಡಿಲ್ಲ ಎಂದು ಆರೋಪಿಸಿದರು. ಇದಕ್ಕೆ ಇನ್ನಷ್ಟು ಕೆರಳಿದ ವಿಪಕ್ಷ ಸದಸ್ಯರು ಶೇಮ್ ಶೇಮ್ ಎಂದು ಘೋಷಣೆ ಕೂಗುತ್ತಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸದನದಲ್ಲಿ ಗದ್ದಲ, ಕೋಲಾಹಲ ನಡೆಯಿತು.

