ಬೆಂಗಳೂರು: ದೇಶದ ಷೇರು ಮಾರುಕಟ್ಟೆ ಹಾಗೂ ಉದ್ಯಮ ವಲಯದಲ್ಲಿ ಭಾರಿ ಸಂಚಲನ ಮೂಡಿಸುವ ಸುದ್ದಿಯೊಂದು ಹೊರಬಿದ್ದಿದೆ. ವರ್ಷಗಳಿಂದ ಭಾರತದ ಅತ್ಯಂತ ಯಶಸ್ವಿ ಉದ್ಯಮಗಳಲ್ಲಿ ಒಂದಾಗಿ, ಜಾಗತಿಕ ಚಿನ್ನದ ದೈತ್ಯ ಕಂಪನಿ ಎನಿಸಿಕೊಂಡಿದ್ದ ಬೆಂಗಳೂರು ಮೂಲದ ರಾಜೇಶ್ ಎಕ್ಸ್ಪೋರ್ಟ್ಸ್ (Rajesh Exports) ಈಗ ಗಂಭೀರ ಆರ್ಥಿಕ ಹಗರಣದ ಸುಳಿಗೆ ಸಿಲುಕಿದೆ. ಜೂನ್ 3 ರಂದು ಹೊರಡಿಸಿರುವ ಮಧ್ಯಂತರ ಆದೇಶದಲ್ಲಿ, ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ (SEBI) ರಾಜೇಶ್ ಎಕ್ಸ್ಪೋರ್ಟ್ಸ್ ಕಂಪನಿ ಮತ್ತು ಅದರ ಪ್ರವರ್ತಕ-ಅಧ್ಯಕ್ಷ ರಾಜೇಶ್ ಮೆಹ್ತಾ (Rajesh Mehta) ಅವರು ಷೇರು ಮಾರುಕಟ್ಟೆ ಪ್ರವೇಶಿಸದಂತೆ ಕಠಿಣ ನಿಷೇಧ ಹೇರಿದೆ.
ಕಂಪನಿಯು ಕಳೆದ 5 ಹಣಕಾಸು ವರ್ಷಗಳಲ್ಲಿ ಬರೋಬ್ಬರಿ 15.15 ಲಕ್ಷ ಕೋಟಿ ರೂಪಾಯಿಗಳಷ್ಟು ಆದಾಯವನ್ನು (Revenues) ಸುಳ್ಳಾಗಿ ಬಿಂಬಿಸಿದೆ ಎಂದು ಸೆಬಿ ಗಂಭೀರ ಆರೋಪ ಮಾಡಿದೆ. ಈ ಮೊತ್ತ ಎಷ್ಟ ದೊಡ್ಡದಿದೆ ಎಂದರೆ, ಜಗತ್ತಿನ ಹಲವು ಸಣ್ಣ ದೇಶಗಳ ವಾರ್ಷಿಕ ಆರ್ಥಿಕ ಉತ್ಪಾದನೆಗಿಂತಲೂ (GDP) ಇದು ಹೆಚ್ಚಾಗಿದೆ
ತನಿಖೆಗೆ ಕಿಡಿ ಹೊತ್ತಿಸಿದ್ದು ಯಾರು?
ಈ ಹೈ-ಪ್ರೊಫೈಲ್ ಹಗರಣದ ಇನ್ಸೈಡ್ ಸ್ಟೋರಿ ಆರಂಭವಾಗಿದ್ದು 2024 ರ ಮಾರ್ಚ್ 11 ರಂದು ಸೆಬಿಗೆ ಸಲ್ಲಿಕೆಯಾದ ಒಬ್ಬ ಷೇರುದಾರನ ದೂರಿನಿಂದ. ಕಂಪನಿಯು ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲ ವಸೂಲಿ ಮಾಡದೆ ಬಾಕಿ ಉಳಿಸಿಕೊಂಡಿದ್ದ ಅತಿ ದೊಡ್ಡ ಮೊತ್ತದ ಟ್ರೇಡ್ ರಿಸೀವಬಲ್ಸ್ (ಬರಬೇಕಾದ ಹಣ) ಬಗ್ಗೆ ಆ ದೂರಿನಲ್ಲಿ ಪ್ರಶ್ನಿಸಲಾಗಿತ್ತು.
ಸಾಮಾನ್ಯವಾಗಿ ಇಷ್ಟು ದೀರ್ಘಕಾಲ ಹಣ ಬಾಕಿ ಉಳಿದಿದ್ದರೆ ಅದು ಪಾವತಿ ಸಂಗ್ರಹಣೆಯ ತೊಂದರೆ ಅಥವಾ ಖಾತೆಗಳಲ್ಲಿನ ಅಕ್ರಮವನ್ನು ಸೂಚಿಸುತ್ತದೆ. ಈ ದೂರಿನ ಬೆನ್ನಲ್ಲೇ ಎಚ್ಚೆತ್ತ ಸೆಬಿ, ಅಕ್ಟೋಬರ್ 2024 ರಲ್ಲಿ ತನಿಖಾಧಿಕಾರಿಯನ್ನು ನೇಮಿಸಿತು ಮತ್ತು ಕಂಪನಿಯ ಪುಸ್ತಕಗಳನ್ನು ಪರಿಶೀಲಿಸಲು ‘ಬಿಡಿಒ’ (BDO) ಎಂಬ ವಿಧಿವಿಜ್ಞಾನ ಆಡಿಟರ್ (Forensic Auditor) ಅನ್ನು ಕಣಕ್ಕಿಳಿಸಿತು.
15.15 ಲಕ್ಷ ಕೋಟಿ ರೂಪಾಯಿಯ ಅಸಲಿ ಗೋಲ್ಮಾಲ್ ಏನು
ಸೆಬಿಯ ತನಿಖೆಯಲ್ಲಿ ಬಹಿರಂಗವಾಗಿರುವ ಅತ್ಯಂತ ಆಘಾತಕಾರಿ ಅಂಶ ಇಲ್ಲಿದೆ:
ವಿದೇಶಿ ಅಂಗಸಂಸ್ಥೆಗಳ ಲಿಂಕ್: FY21 ಮತ್ತು FY25 ರ ನಡುವೆ, ರಾಜೇಶ್ ಎಕ್ಸ್ಪೋರ್ಟ್ಸ್ನ ಒಟ್ಟು ಆದಾಯದ ಶೇ. 97 ರಿಂದ ಶೇ. 99 ರಷ್ಟು ಭಾಗ ವಿದೇಶಿ ಅಂಗಸಂಸ್ಥೆಗಳಿಂದಲೇ ಬಂದಿದೆ ಎಂದು ತೋರಿಸಲಾಗಿತ್ತು. ಇದರಲ್ಲಿ ಸ್ವಿಟ್ಜರ್ಲೆಂಡ್ ಮೂಲದ ಪ್ರಸಿದ್ಧ ಚಿನ್ನದ ರಿಫೈನರಿ ಕಂಪನಿ ‘ವಲ್ಕಂಬಿ ಎಸ್ಎ’ (Valcambi SA) ಈ ಸಮೂಹದ ಪ್ರಮುಖ ಬೆನ್ನೆಲುಬಾಗಿತ್ತು.
ಲೆಕ್ಕದಲ್ಲಿ ಭಾರಿ ವ್ಯತ್ಯಾಸ: ಆಡಿಟರ್ಗಳು ವಲ್ಕಂಬಿ ಮತ್ತು ಇತರ ವಿದೇಶಿ ಅಂಗಸಂಸ್ಥೆಗಳ ದಾಖಲೆಗಳನ್ನು ಪರಿಶೀಲಿಸಿದಾಗ ದೊಡ್ಡ ಮಿಸ್ಮ್ಯಾಚ್ ಪತ್ತೆಯಾಗಿದೆ. ಕಂಪನಿಯು ತೋರಿಸಿದ ಒಟ್ಟು ಆದಾಯಕ್ಕೂ, ಅಂಗಸಂಸ್ಥೆಗಳ ನಿಜವಾದ ದಾಖಲೆಗಳಿಗೂ ಯಾವುದೇ ಹೋಲಿಕೆಯೇ ಇರಲಿಲ್ಲ.
ಮಹಾ ವಂಚನೆ: ಈ ರೀತಿ 5 ವರ್ಷಗಳಲ್ಲಿ ಒಟ್ಟು 15.15 ಲಕ್ಷ ಕೋಟಿ ರೂಪಾಯಿಗಳಷ್ಟು ಆದಾಯದ ವ್ಯತ್ಯಾಸ ಕಂಡುಬಂದಿದೆ. ಇದು ಸಾಬೀತಾದರೆ ಭಾರತದ ಕಾರ್ಪೊರೇಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಆದಾಯ ವಂಚನೆ ಪ್ರಕರಣವಾಗಲಿದೆ.
ತನಿಖೆಗೆ ಅಸಹಕಾರ ಮತ್ತು ಆಫ್ರಿಕನ್ ಗಣಿ ರಹಸ್ಯ
ಸೆಬಿ ತನಿಖೆ ನಡೆಸಲು ಹೋದಾಗ ಕಂಪನಿಯು ಪ್ರಮುಖ ಗ್ರಾಹಕರ ದಾಖಲೆಗಳು, ವೆಂಡರ್ ವಿವರಗಳು ಮತ್ತು ಹಣಕಾಸು ಹೇಳಿಕೆಗಳನ್ನು ನೀಡದೆ ತನಿಖೆಗೆ ಅಸಹಕಾರ ತೋರಿತು. ಇದರ ಜೊತೆಗೆ ಸೆಬಿಗೆ ಮತ್ತೊಂದು ದೊಡ್ಡ ಸೀಕ್ರೆಟ್ ಪತ್ತೆಯಾಗಿದೆ
ಆಫ್ರಿಕನ್ ಗಣಿ ಹೂಡಿಕೆ: ಆಫ್ರಿಕಾದಲ್ಲಿ ಚಿನ್ನದ ಗಣಿಗಾರಿಕೆ ಸ್ವತ್ತುಗಳಿಗಾಗಿ 1,035 ಕೋಟಿ ರೂಪಾಯಿ ಹೂಡಿಕೆ ಮಾಡಿರುವುದಾಗಿ ಕಂಪನಿ ಹೇಳಿಕೊಂಡಿತ್ತು. ಆದರೆ ಆ ಹೂಡಿಕೆಯ ಅಸ್ತಿತ್ವ ಮತ್ತು ಮೌಲ್ಯಮಾಪನವನ್ನು ಸಾಬೀತುಪಡಿಸಲು ಕಂಪನಿಯ ಬಳಿ ಯಾವುದೇ ಸೂಕ್ತ ದಾಖಲೆಗಳೇ ಇರಲಿಲ್ಲ.
ಷೇರುದಾರರ ಕಂಪನಿ ವಂಚನೆ: ಅಫ್ಲುಯೆನ್ಸ್ ಶೇರ್ಸ್ ಅಂಡ್ ಸ್ಟಾಕ್ಸ್ ಕಂಪನಿಯೊಂದಿಗೆ 11,487 ಕೋಟಿ ರೂ. ಮಾರಾಟ ಮತ್ತು 11,488 ಕೋಟಿ ರೂ. ಖರೀದಿ ವಹಿವಾಟು ನಡೆಸಿದ್ದಾಗಿ ರಾಜೇಶ್ ಎಕ್ಸ್ಪೋರ್ಟ್ಸ್ ಬರೆದುಕೊಂಡಿತ್ತು. ಆದರೆ ತನಿಖೆ ವೇಳೆ ಅಫ್ಲುಯೆನ್ಸ್ ಕಂಪನಿಯು, ರಾಜೇಶ್ ಎಕ್ಸ್ಪೋರ್ಟ್ಸ್ ನಮಗೆ ಕ್ಲೈಂಟ್ ಆಗಿಯೇ ಇರಲಿಲ್ಲ, ಇಂತಹ ಯಾವುದೇ ಒಪ್ಪಂದ ನಡೆದಿಲ್ಲ ಎಂದು ಬಾಂಬ್ ಸಿಡಿಸಿದೆ
ಹಣ ದುರುಪಯೋಗ: ಅಷ್ಟೇ ಅಲ್ಲದೆ, ಕಂಪನಿಯ ಕೋಟ್ಯಂತರ ರೂಪಾಯಿ ಹಣವನ್ನು ಪ್ರವರ್ತಕ ರಾಜೇಶ್ ಮೆಹ್ತಾ ಅವರ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಿ, ಅದನ್ನು ಅವರ ಸ್ವಂತ ಡೆರಿವೇಟಿವ್ ಟ್ರೇಡಿಂಗ್ (Personal Derivative Trading) ವ್ಯವಹಾರಕ್ಕೆ ಬಳಸಲಾಗಿದೆ ಎಂದು ಸೆಬಿ ಗಂಭೀರ ಆರೋಪ ಮಾಡಿದೆ.

