ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ರಜತ್ ಕಿಶನ್ ವಿವಾದ, ಕಿರಿಕ್ ಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇದೀಗ ರಜತ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಜತ್ ಕಿಶನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಅವರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಎಫ್ಐಆರ್ ದಾಖಲಾಗಿದೆ. ಡಾಗ್ ಸತೀಶ್ ಜೊತೆ ಸ್ನೇಹ ಮಾಡಬಾರದು ಎಂದು ರಜತ್ ಕಿಶನ್ ಅವರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಡಾಗ್ ಸತೀಶ್ ಜೊತೆ ಸ್ನೇಹ ಮಾಡಿದವರಿಗೆ ಬೆದರಿಕೆ ಸಂದೇಶ ಕಳಿಸಿದ ಆರೋಪದ ಮೇಲೆ ರಜತ್ ವಿರುದ್ಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬೆದರಿಕೆ ಮತ್ತು ನಿಂದನೆ ಆರೋಪದ ಮೇಲೆ ದೂರು ನೀಡಲಾಗಿದೆ.
ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಅವರು ರಜತ್ ಕಿಶನ್ ವಿರುದ್ಧ ದೂರು ನೀಡಿದ್ದಾರೆ. ರಜತ್ ಅವರು ಫೋನ್ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ದೂರುದಾರರ ಕಾರಿನ ಫೋಟೋ ಕಳಿಸಿ ರಜತ್ ಬೆದರಿಸಿದ್ದಾರೆ. ಇದರಿಂದಾಗಿ ರಜತ್ ಗೆ ಮತ್ತೆ ಸಂಕಷ್ಟ ಎದರಾಗಿದೆ.
‘ಸರ್ ಇದು ರಜತ್ ಬುಜ್ಜಿ. ಕಾಲ್ ಮಾಡುತ್ತಿದ್ದೇನೆ. ವಾಪಸ್ ಕಾಲ್ ಮಾಡ್ತೀರಾ ಇಲ್ಲ, ನಾವೇ ಒಳಗೆ ನುಗ್ಬೇಕಾ’ ಎಂದು ಗಿರೀಶ್ ಕುಮಾರ್ ಅವರಿಗೆ ರಜತ್ ಕಿಶನ್ ಅವರು ವಾಯ್ಸ್ ನೋಟ್ ಮೂಲಕ ಬೆದರಿಕೆ ಸಂದೇಶ ಕಳಿಸಿದ್ದಾರೆ. ಅಲ್ಲದೇ, ಕಾನ್ಫರೆನ್ಸ್ ಕಾಲ್ನಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಜತ್ ಕಿಶನ್ ಹಾಗೂ ಕಿರಣ್ ವಿರುದ್ಧ ಬಿಎನ್ ಎಸ್ ಕಾಯ್ದೆ 351(2), 352 ಸೆಕ್ಷನ್ ಅಡಿ ಕೇಸ್ ದಾಖಲಾಗಿದೆ.
ರಜತ್ ಕಿಶನ್ ಈ ಹಿಂದೆ ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು. ಅಲ್ಲದೇ ಮೈಸೂರಿನ ಪಾರಂಪರಿಕ ಕಟ್ಟಡ ಎದುರು ಸಿಗರೇಟ್ ಸೇದುತ್ತಾ ವಿಡಿಯೋ ಚಿತ್ರೀಕರಣ ಮಾಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಈಗ ಮತ್ತೆ ಬೆದರಿಕೆ ಕರೆ ಮೂಲಕ ವಿವಾದಕ್ಕೀಡಾಗಿದ್ದು, ಪ್ರಕರಣ ದಾಖಲಾಗಿದೆ.

