ಚೆನ್ನೈ: ಭಾರತದಲ್ಲಿ ಉತ್ತರ ಮತ್ತು ದಕ್ಷಿಣದ ರಾಜ್ಯಗಳ ನಡುವೆ ಭಾಷೆ, ಆಹಾರ ಮತ್ತು ಸಂಪ್ರದಾಯಗಳ ವಿಷಯದಲ್ಲಿ ದೊಡ್ಡ ವ್ಯತ್ಯಾಸಗಳಿವೆ ಎಂಬ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ ಪ್ರೀತಿ ಮತ್ತು ಪರಸ್ಪರ ಗೌರವ ಇದ್ದರೆ ಈ ಎಲ್ಲಾ ಗೋಡೆಗಳನ್ನು ಮೀರಿ ಸುಂದರ ಬಾಂಧವ್ಯ ಬೆಳೆಸಬಹುದು ಎಂಬುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ತಮಿಳುನಾಡಿನ ಮಾವ ಮತ್ತು ರಾಜಸ್ಥಾನಿ ಅಳಿಯನ ನಡುವಿನ ಮಧುರ ಬಾಂಧವ್ಯ ಈಗ ನೆಟ್ಟಿಗರ ಮನ ಗೆದ್ದಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಸಂಪ್ರದಾಯಬದ್ಧ ತಮಿಳು ಕುಟುಂಬದ ತಂದೆ ಮತ್ತು ಅವರ ಉತ್ತರ ಭಾರತೀಯ ಅಳಿಯನ ನಡುವಿನ ಆತ್ಮೀಯ ಕ್ಷಣಗಳನ್ನು ಸೆರೆಹಿಡಿಯಲಾಗಿದೆ. ವಿಡಿಯೋದ ಒಂದು ಭಾಗದಲ್ಲಿ ಕೆಂಪು ಬಣ್ಣದ ಟ್ರ್ಯಾಕ್ಟರ್ ಏರಿ ಹೊಲದಲ್ಲಿ ಕುಳಿತಿರುವ ಮಾವನ ಪಕ್ಕದಲ್ಲೇ ಕುಳಿತು ಅಳಿಯ ನಗುನಗುತ್ತಾ ಆ ಕ್ಷಣವನ್ನು ದಾಖಲಿಸುತ್ತಿರುವುದು ಕಂಡುಬಂದಿದೆ. ಇದು ಕೇವಲ ಔಪಚಾರಿಕ ಭೇಟಿಯಲ್ಲ, ಬದಲಿಗೆ ಇಬ್ಬರ ನಡುವಿನ ಗಾಢವಾದ ಸ್ನೇಹಕ್ಕೆ ಹಿಡಿದ ಕನ್ನಡಿಯಂತಿದೆ.
ಇನ್ನೊಂದು ದೃಶ್ಯದಲ್ಲಿ, ಹಸಿರಿನಿಂದ ಕಂಗೊಳಿಸುತ್ತಿರುವ ಮನೆಯ ಅಂಗಳದಲ್ಲಿ ಮಾವ ತನ್ನ ಅಳಿಯನಿಗೆ ಸಾಂಪ್ರದಾಯಿಕ ಸಾಧನವನ್ನು ಬಳಸಿ ತೆಂಗಿನಕಾಯಿಯನ್ನು ಹೇಗೆ ಸರಿಯಾಗಿ ಒಡೆಯಬೇಕು ಎಂಬುದನ್ನು ಕಲಿಸಿಕೊಡುತ್ತಿದ್ದಾರೆ. ನೆಲದ ಮೇಲೆ ತೆಂಗಿನಕಾಯಿ ಚೂರುಗಳು ಬಿದ್ದಿದ್ದು, ಇಬ್ಬರೂ ಈ ಕೆಲಸದಲ್ಲಿ ತಲ್ಲೀನರಾಗಿರುವುದು ನೋಡುಗರಿಗೆ ಮುದ ನೀಡುತ್ತದೆ. ‘ನನ್ನ ಸಂಪ್ರದಾಯಬದ್ಧ ತಮಿಳು ತಂದೆ ಮತ್ತು ನಾನು ಮದುವೆಯಾದ ಉತ್ತರ ಭಾರತದ ವ್ಯಕ್ತಿ’ ಎಂಬ ಶೀರ್ಷಿಕೆಯಡಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.
ಈ ವಿಡಿಯೋ ಪ್ರಕಟವಾದ ಬೆನ್ನಲ್ಲೇ ಸಾವಿರಾರು ಜನರು ಮೆಚ್ಚುಗೆ ಸೂಚಿಸಿದ್ದಾರೆ. “ಇಂತಹ ವಿವಾಹಗಳು ಭಾರತವನ್ನು ಒಂದುಗೂಡಿಸುತ್ತವೆ” ಎಂದು ಒಬ್ಬರು ಕಾಮೆಂಟ್ ಮಾಡಿದರೆ, “ಇದು ನಮ್ಮ ದೇಶದ ನಿಜವಾದ ಏಕತೆ” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಬಿಹಾರದ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿ, “ನಾನು ಬಿಹಾರದವನಾದರೂ ದಕ್ಷಿಣ ಭಾರತಕ್ಕೆ ಹೋದಾಗಲೆಲ್ಲಾ ನನ್ನ ಸ್ವಂತ ಮನೆಯಲ್ಲಿದ್ದೇನೆ ಎಂಬ ಭಾವನೆ ಮೂಡುತ್ತದೆ” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇಂದಿನ ದಿನಗಳಲ್ಲಿ ಪರಸ್ಪರ ದ್ವೇಷಕ್ಕಿಂತ ಇಂತಹ ಪ್ರೀತಿಯ ಕಥೆಗಳೇ ಹೆಚ್ಚು ಅವಶ್ಯಕ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

