HomeLatest NewsSHOCKING: ಹಣ ಪತ್ತೆ ಹಚ್ಚುವ ನೆಪದಲ್ಲಿ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕಿ !

SHOCKING: ಹಣ ಪತ್ತೆ ಹಚ್ಚುವ ನೆಪದಲ್ಲಿ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕಿ !

ವಿದ್ಯಾ ದೇಗುಲವಾಗಬೇಕಿದ್ದ ಶಾಲೆಯಲ್ಲೇ ವಿದ್ಯಾರ್ಥಿನಿಯರ ಆತ್ಮಗೌರವಕ್ಕೆ ಧಕ್ಕೆ ತಂದ ಅಮಾನವೀಯ ಘಟನೆಯೊಂದು ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಕಳೆದುಹೋದ ಕೇವಲ 500 ರೂಪಾಯಿ ನಗದು ಪತ್ತೆ ಹಚ್ಚುವ ನೆಪದಲ್ಲಿ, ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬಳು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ತಪಾಸಣೆ ನಡೆಸಿರುವ ಆಘಾತಕಾರಿ ಆರೋಪ ಕೇಳಿಬಂದಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆ, ಸದರಿ ಶಿಕ್ಷಕಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.

ಬ್ಯಾಗ್‌ನಲ್ಲಿದ್ದ ಹಣ ಮಾಯ: ಕೊಠಡಿಯಲ್ಲಿ ಕೂಡಿಹಾಕಿದ ಶಿಕ್ಷಕಿ! ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ಬಾಮನ್‌ವಾಸ್ ತಾಲೂಕಿಗೆ ಒಳಪಡುವ ಲಿವಾಲಿ ಗ್ರಾಮದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಹಿರಿಯ ಹಿಂದಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸರಸ್ವತಿ ಮೀನಾ ಎಂಬುವವರ ಬ್ಯಾಗ್‌ನಿಂದ 500 ರೂಪಾಯಿ ನಾಪತ್ತೆಯಾಗಿತ್ತು. ಇಡೀ ಶಾಲೆಯಲ್ಲಿ ಹುಡುಕಾಡಿದರೂ ಹಣ ಸಿಗದಿದ್ದಾಗ, ತರಗತಿಯ ವಿದ್ಯಾರ್ಥಿನಿಯರೇ ಕಳ್ಳತನ ಮಾಡಿರಬಹುದೆಂದು ಶಿಕ್ಷಕಿ ಶಂಕಿಸಿದ್ದಾರೆ.

ಇಷ್ಟಕ್ಕೇ ನಿಲ್ಲದ ಶಿಕ್ಷಕಿ ಸರಸ್ವತಿ, ತನ್ನ ಸಹೋದ್ಯೋಗಿಯೊಬ್ಬರ ನೆರವು ಪಡೆದು 9 ಮತ್ತು 11ನೇ ತರಗತಿಯ ವಿದ್ಯಾರ್ಥಿನಿಯರನ್ನು ತರಗತಿ ಕೊಠಡಿಯೊಂದರ ಒಳಗೆ ಕರೆದೊಯ್ದು ಹೊರಗಿನಿಂದ ಚಿಲಕ ಹಾಕಿದ್ದಾರೆ. ಬಳಿಕ ‘ಹಣದ ತನಿಖೆ’ಯ ನೆಪವೊಡ್ಡಿ ಬಾಲಕಿಯರ ಬಟ್ಟೆಗಳನ್ನು ಬಲವಂತವಾಗಿ ಬಿಚ್ಚಿಸಿ, ಅಮಾನವೀಯವಾಗಿ ತಪಾಸಣೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಾಲೆಯ ಮುಂದೆ ಪೋಷಕರ ಆಕ್ರೋಶ, ರಣರಂಗವಾದ ಆವರಣ: ಶಾಲೆಯಿಂದ ಮನೆಗೆ ಮರಳಿದ ವಿದ್ಯಾರ್ಥಿನಿಯರು ಕಣ್ಣೀರಿಡುತ್ತಾ ತಮಗಾದ ಕಹಿ ಅನುಭವವನ್ನು ಪೋಷಕರಿಗೆ ತಿಳಿಸಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಪೋಷಕರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಆವರಣಕ್ಕೆ ಧಾವಿಸಿ ಶಿಕ್ಷಕಿಯ ವಿರುದ್ಧ ಭಾರಿ ಪ್ರತಿಭಟನೆ ನಡೆಸಿದರು. ಶಾಲೆಯ ಮುಂದೆ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಸ್ಥಳೀಯ ಆಡಳಿತ ಹಾಗೂ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣವೇ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಪ್ಪು ಮಾಡಿದ ಶಿಕ್ಷಕಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿ ಪೋಷಕರನ್ನು ಶಾಂತಗೊಳಿಸಿದರು.

ಶಿಕ್ಷಣ ಇಲಾಖೆಯಿಂದ ಸಸ್ಪೆಂಡ್ ಆರ್ಡರ್: ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಶಿಕ್ಷಣಾಧಿಕಾರಿಗಳು ನೀಡಿದ ಪ್ರಾಥಮಿಕ ವರದಿಯನ್ನು ಆಧರಿಸಿ, ಭರತ್‌ಪುರ ವಿಭಾಗದ ಶಾಲಾ ಶಿಕ್ಷಣ ಜಂಟಿ ನಿರ್ದೇಶಕರ ಕಚೇರಿಯು ಶಿಕ್ಷಕಿ ಸರಸ್ವತಿ ಮೀನಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ರಾಜಸ್ಥಾನ ನಾಗರಿಕ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1958ರ ರೂಲ್ 13ರ ಅಡಿಯಲ್ಲಿ ಈ ಶಿಸ್ತು ಕ್ರಮ ಜರುಗಿಸಲಾಗಿದೆ. ಅಮಾನತಿನ ಅವಧಿಯಲ್ಲಿ ಶಿಕ್ಷಕಿಯ ಕೇಂದ್ರ ಸ್ಥಾನವನ್ನು ಧೋಲ್‌ಪುರದ ರಾಜಖೇಡಾ ಬ್ಲಾಕ್ ಶಿಕ್ಷಣ ಕಚೇರಿಗೆ ನಿಯೋಜಿಸಲಾಗಿದ್ದು, ಇಲಾಖಾ ಮಟ್ಟದ ಸಮಗ್ರ ಮತ್ತು ಕಠಿಣ ತನಿಖೆಗೆ ಆದೇಶಿಸಲಾಗಿದೆ. ಮಕ್ಕಳ ಹಕ್ಕುಗಳು ಮತ್ತು ಮುಗ್ಧ ಮನಸ್ಸುಗಳಿಗೆ ತೀವ್ರ ಆಘಾತ ಉಂಟುಮಾಡಿರುವ ಈ ಘಟನೆ ಇಡೀ ಶಿಕ್ಷಕ ಸಮುದಾಯ ತಲೆತಗ್ಗಿಸುವಂತೆ ಮಾಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular