ಜಿಮ್‌ನಲ್ಲಿ ಪರಿಚಯವಾದ ಯುವಕನೊಂದಿಗೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಉದ್ಯಮಿಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿರುವ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ಪತ್ನಿಯ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದ ಹಿನ್ನೆಲೆಯಲ್ಲಿ ಮನೆಯೊಳಗೆ ಯಾರಿಗೂ ತಿಳಿಯದಂತೆ ರಹಸ್ಯ ಆಡಿಯೋ ರೆಕಾರ್ಡರ್ ಅಳವಡಿಸಿ, ಪತ್ನಿ ಹಾಗೂ ಆಕೆಯ ಪ್ರಿಯಕರನ ನಡುವಿನ ಸಂಭಾಷಣೆಯನ್ನು ಉದ್ಯಮಿ ಸಾಕ್ಷಿ ಸಮೇತ ಪತ್ತೆ ಹಚ್ಚಿದ್ದಾರೆ.
ಪ್ರಸ್ತುತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸ್ಥಳೀಯ ನ್ಯಾಯಾಲಯವು, ಈ ಕುರಿತು ಸಮಗ್ರ ತನಿಖೆ ನಡೆಸಿ ಒಂದು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಸೈಬರ್ ಕ್ರೈಂ ವಿಭಾಗಕ್ಕೆ ಖಡಕ್ ನಿರ್ದೇಶನ ನೀಡಿದೆ.
ಅನುಮಾನ ಮೂಡಿಸಿದ್ದು ನೆರೆಹೊರೆಯವರು ಮತ್ತು ಮಕ್ಕಳು !
ದೂರುದಾರ ಉದ್ಯಮಿಯ ಪತ್ನಿ ನಿಯಮಿತವಾಗಿ ಜಿಮ್‌ಗೆ ಹೋಗುತ್ತಿದ್ದರು. ಅಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಆಕೆ ಕ್ರಮೇಣ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದಾಳೆ ಎನ್ನಲಾಗಿದೆ. ಗಂಡ ಮನೆಯಲ್ಲಿ ಇಲ್ಲದ ಸಮಯದಲ್ಲಿ ಆತ ಈಕೆಯ ಮನೆಗೂ ಬರಲು ಆರಂಭಿಸಿದ್ದಾನೆ. ಈ ಇಬ್ಬರ ಅತಿಯಾದ ಓಡಾಟವನ್ನು ಗಮನಿಸಿದ ನೆರೆಹೊರೆಯವರು ಹಾಗೂ ಸ್ವತಃ ದಂಪತಿಯ ಇಬ್ಬರು ಮಕ್ಕಳು ತಂದೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಿಂದ ಉದ್ಯಮಿಗೆ ಪತ್ನಿಯ ಮೇಲೆ ತೀವ್ರ ಅನುಮಾನ ಮೂಡಿದೆ.
ಮನೆಯೊಳಗೆ ಗುಪ್ತ ಮೈಕ್, ಕಾರಿನಲ್ಲೂ ಫಾಲೋ !
ಪತ್ನಿಯ ಅಕ್ರಮ ಸಂಬಂಧಕ್ಕೆ ಬಲವಾದ ಸಾಕ್ಷಿ ಸಿಗದ ಕಾರಣ, ಉದ್ಯಮಿ ವಿಭಿನ್ನ ಉಪಾಯ ಹೂಡಿದ್ದಾರೆ. ಪತ್ನಿಗೆ ಕಿಂಚಿತ್ತೂ ಅನುಮಾನ ಬಾರದಂತೆ ಮನೆಯೊಳಗೆ ಅತ್ಯಾಧುನಿಕ ರಹಸ್ಯ ಆಡಿಯೋ ರೆಕಾರ್ಡಿಂಗ್ ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಈ ಡಿವೈಸ್‌ನಲ್ಲಿ ಪತ್ನಿ ಮತ್ತು ಆಕೆಯ ಜಿಮ್ ಗೆಳೆಯನ ನಡುವಿನ ಖಾಸಗಿ ಸಂಭಾಷಣೆಗಳು ಹಾಗೂ ವಿಡಿಯೋ ಕಾಲ್ ಮಾತುಕತೆಗಳು ರೆಕಾರ್ಡ್ ಆಗಿವೆ. ಅಷ್ಟೇ ಅಲ್ಲದೆ, ಇಬ್ಬರೂ ಹೊರಗಡೆ ಪ್ರವಾಸಕ್ಕೆ ಹೋದಾಗ ಬೆನ್ನಟ್ಟಿದ ಉದ್ಯಮಿ, ಅವರಿಬ್ಬರೂ ಕಾರಿನಲ್ಲಿ ಒಟ್ಟಿಗೆ ಇದ್ದದ್ದನ್ನು ಪತ್ತೆ ಹಚ್ಚಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಎನ್ನಲಾಗಿದೆ.
ಜಂಟಿ ಬ್ಯಾಂಕ್ ಲಾಕರ್ ಸೀಜ್, ₹1 ಕೋಟಿ ಬ್ಲಾಕ್‌ಮೇಲ್ ಆರೋಪ !
ಪತ್ನಿಯ ಅಫೇರ್ ಖಾತರಿಯಾಗುತ್ತಿದ್ದಂತೆ ಎಚ್ಚೆತ್ತ ಉದ್ಯಮಿ, ತನ್ನ ಹೆಸರಿನಲ್ಲಿದ್ದ ಜಂಟಿ ಬ್ಯಾಂಕ್ ಲಾಕರ್‌ನಲ್ಲಿದ್ದ ಬೆಲೆಬಾಳುವ ಆಭರಣ ಹಾಗೂ ದಾಖಲೆಗಳು ದುರುಪಯೋಗವಾಗಬಹುದು ಎಂಬ ಭೀತಿಯಿಂದ ತಕ್ಷಣವೇ ನ್ಯಾಯಾಲಯದ ಮೊರೆ ಹೋಗಿ ಲಾಕರ್ ಅನ್ನು ಫ್ರೀಜ್ (Freeze) ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಂಕ್ ಲಾಕರ್ ಸೀಜ್ ಆಗುತ್ತಿದ್ದಂತೆ ಆಕ್ರೋಶಗೊಂಡ ಪತ್ನಿಯ ಪ್ರಿಯಕರ, ಉದ್ಯಮಿಗೆ ನೇರವಾಗಿ ಬೆದರಿಕೆ ಹಾಕಲು ಆರಂಭಿಸಿದ್ದಾನೆ. “ರೆಕಾರ್ಡ್ ಮಾಡಿರುವ ಆಡಿಯೋ ಸಾಕ್ಷ್ಯಗಳನ್ನು ನಮಗೆ ಒಪ್ಪಿಸಬೇಕು. ಇಲ್ಲದಿದ್ದರೆ ₹1 ಕೋಟಿ ರೂಪಾಯಿಯ ನಕಲಿ ಆರ್ಥಿಕ ವಂಚನೆ ಪ್ರಕರಣದಲ್ಲಿ ನಿನ್ನನ್ನು ಸಿಲುಕಿಸುತ್ತೇವೆ” ಎಂದು ಬ್ಲಾಕ್‌ಮೇಲ್ ಮಾಡಿದ್ದಾನೆ ಎಂದು ಉದ್ಯಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರು ಸುಮ್ಮನಾದಾಗ ಕೋರ್ಟ್ ಕೊಟ್ಟ ತಪರಾಕಿ !
ಈ ತರಹದ ಬ್ಲಾಕ್‌ಮೇಲ್ ಹಾಗೂ ಮಾನಸಿಕ ಕಿರುಕುಳದಿಂದ ಉದ್ಯಮಿ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಆರಂಭದಲ್ಲಿ ಈ ದೂರಿಗೂ ತಮಗೂ ಸಂಬಂಧವಿಲ್ಲ ಎಂಬಂತೆ ಪೊಲೀಸರು ಹಾಗೂ ಸೈಬರ್ ಕ್ರೈಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತು ಉದ್ಯಮಿ ನೇರವಾಗಿ ನ್ಯಾಯಾಲಯದ ಮೊರೆ ಹೋದಾಗ, ಕೋರ್ಟ್ ಸೈಬರ್ ಕ್ರೈಂ ಇಲಾಖೆಗೆ ಚಾಟಿ ಬೀಸಿದ್ದು, ತಕ್ಷಣವೇ ತನಿಖೆ ನಡೆಸಿ 30 ದಿನಗಳೊಳಗೆ ವರದಿ ನೀಡುವಂತೆ ಆದೇಶಿಸಿದೆ. ಸದ್ಯ ಈ ಹೈಪ್ರೊಫೈಲ್ ಕೌಟುಂಬಿಕ ಹೈಡ್ರಾಮಾ ಗುಜರಾತ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

