ಶ್ರೀಕಾಕುಳಂ: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, ರೈಲು ಡಿಕ್ಕಿಯಾಗಿ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಿಲ್ಲೆಯ ಟೆಕ್ಕಲಿ ವಿಧಾನಸಭಾ ಕ್ಷೇತ್ರದ ರಾವಿವಲಸ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ರಾಜ್ಯರಾಣಿ ಎಕ್ಸ್ಪ್ರೆಸ್ ರೈಲು ಡಿಕ್ಕಿಯಾಗಿ ನಾಲ್ವರು ಯುವಕರು ಮೃತಪಟ್ಟಿದ್ದಾರೆ. ಮೀನು ಹಿಡಿದು ಮನೆಗೆ ಹೋಗುತ್ತಿದ್ದ ವೇಳೆ ವೇಳೆ ರೈಲು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಮೃತರನ್ನು ವಿಶಾಖ ರಾವ್, ದಿಲೀಪ್, ಶರತ್ ಮತ್ತು ಶಿವ ಎಂದು ಗುರುತಿಸಲಾಗಿದೆ. ಸಲ್ಮಾನ್ ರಾಜು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆರೆಗೆ ಮೀನು ಹಿಡಿಯಲು ತೆರಳಿದ್ದ ಈ ಯುವಕರು, ಬಳಿಕ ರಾವಿವಲಸಕ್ಕೆ ಹಿಂದಿರುಗುವ ವೇಳೆ ಬರ್ಮಾ ಕಾಲನಿ ಸಮೀಪದ ರೈಲು ಹಳಿಯನ್ನು ದಾಟುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತಕ್ಕೊಳಗಾದ ಐವರೂ 12ನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ.
“ಭುವನೇಶ್ವರದಿಂದ ಗುಣಪುರದತ್ತ ಸಂಚರಿಸುತ್ತಿದ್ದ ರಾಜ್ಯರಾಣಿ ಎಕ್ಸ್ಪ್ರೆಸ್ ರೈಲು ಯುವಕರಿಗೆ ಡಿಕ್ಕಿ ಹೊಡೆದು ಅವರ ಮೇಲೆಯೇ ಹರಿದುಹೋಯಿತು. ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ,” ಎಂದು ಟೆಕ್ಕಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯನ್ನು ಕಣ್ಣಾರೆ ಕಂಡ ಸ್ಥಳೀಯರು ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಗಾಯಗೊಂಡಿದ್ದ ಯುವಕನನ್ನು ಟೆಕ್ಕಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
“ಮೃತರಾದ ನಾಲ್ವರು ಹಾಗೂ ಗಾಯಗೊಂಡಿರುವ ಯುವಕ ಐವರೂ ಇಂಟರ್ಮೀಡಿಯೇಟ್ (12ನೇ ತರಗತಿ) ವಿದ್ಯಾರ್ಥಿಗಳಾಗಿದ್ದು, ಟೆಕ್ಕಲಿಯ ಸರ್ಕಾರಿ ಎಸ್ಸಿ/ಎಸ್ಟಿ ವಿದ್ಯಾರ್ಥಿ ನಿಲಯದಲ್ಲಿ ವಾಸಿಸುತ್ತಿದ್ದರು. ಐವರೂ ಟೆಕ್ಕಲಿ ಮಂಡಲದ ದಾಮರು ಗ್ರಾಮದ ನಿವಾಸಿಗಳು,” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ
ಅಪಘಾತದ ಬಳಿಕ ರೈಲ್ವೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಆರಂಭಿಸಿದರು. ಟೆಕ್ಕಲಿ ಆರ್ಡಿಒ ಕೃಷ್ಣಮೂರ್ತಿ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಪೊಲೀಸರು ಮೃತದೇಹಗಳನ್ನು ಪರಿಶೀಲಿಸಿ, ಘಟನಾ ಸ್ಥಳದಿಂದ ಪ್ರಾಥಮಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಸ್ಥಳೀಯರಿಂದಲೂ ಮಾಹಿತಿ ಪಡೆದುಕೊಂಡಿದ್ದು, ಮೃತರ ಗುರುತು ಖಚಿತಪಡಿಸಿಕೊಳ್ಳಲು ಅವರ ಬಳಿ ಪತ್ತೆಯಾದ ವಸ್ತುಗಳು ಮತ್ತು ಇತರ ಸಾಮಗ್ರಿಗಳನ್ನು ಪರಿಶೀಲಿಸಿದ್ದಾರೆ.
“ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ನಿಖರವಾಗಿ ಕಾರಣವಾದ ಪರಿಸ್ಥಿತಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ,” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನಾಲ್ವರು ಯುವಕರ ಸಾವು
ಅಪಘಾತ ಹೇಗೆ ಸಂಭವಿಸಿತು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೊಲೀಸರು ಹಾಗೂ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಮೃತರ ಗುರುತು ಪತ್ತೆಹಚ್ಚುವ ಕಾರ್ಯವೂ ನಡೆಯುತ್ತಿದೆ. ಅಪಘಾತದ ಹಿನ್ನೆಲೆಯಲ್ಲಿ ರೈಲು ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಉಂಟಾಗಿದೆ. ಘಟನೆಯಲ್ಲಿ ಮತ್ತೊಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

