ಮುಂಬೈ: ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
9ಕೋಟಿ ರೂಪಾಯಿ ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ರಾಜ್ ಪಾಲ್ ಯಾದವ್ ಗೆ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. ಒಟ್ಟು 1.3 ಕೋಟಿ ರೂ.ಗಳನ್ನು ಪ್ರತಿವಾದಿಯ ಖಾತೆಗೆ ಜಮಾ ಮಾಡಿದ ನಂತರ ಮಧ್ಯಂತರ ಜಾಮೀನು ನೀಡಲಾಗಿದೆ. ರಾಜ್ ಪಾಲ್ ಅವರ ಸೋದರ ಸೊಸೆಯ ಮದುವೆಗೆ ಹಾಜರಾಗಲು ಈ ಜಾಮೀನು ನೀಡಲಾಗಿದೆ ಎಂದು ತಿಳಿದುಬಂದಿದೆ.
ರಾಜ್‌ಪಾಲ್‌ಗೆ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್ ಮಾರ್ಚ್ 18 ಕ್ಕೆ ಮುಂದಿನ ವಿಚಾರಣೆ ಮುಂದೂಡಿದೆ. ಅಂದು ಕೋರ್ಟ್ ಗೆ ರಾಜ್ ಪಾಲ್ ಖುದ್ದು ಇಲ್ಲವೇ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಸೂಚಿಸಲಾಗಿದೆ.
ಬಾಲಿವುಡ್ ಖ್ಯಾತ ನಟ ರಾಜ್‌ಪಾಲ್ ಯಾದವ್ 9 ಕೋಟಿ ರೂಪಾಯಿ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿದ್ದರು. ಈಗ ಅವರು ಜಾಮೀನು ಪಡೆದುಕೊಂಡಿದ್ದಾರೆ. ಇಂದು ರಾಜ್‌ಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಮಧ್ಯಾಹ್ನ 3 ಗಂಟೆ ಒಳಗೆ 1.3 ಕೋಟಿ ರೂಪಾಯಿ ಹಣವನ್ನು ಪಾವತಿ ಮಾಡುವಂತೆ ಸೂಚಿಸಲಾಗಿತ್ತು. ಹಣ ಹೊಂದಿಸಿದ ಬಳಿಕ ಅವರಿಗೆ ಜಾಮೀನು ನೀಡಲಾಯಿತು.
ಮಾರ್ಚ್ 18ರ ತನಕ ರಾಜ್‌ಪಾಲ್ ಯಾದವ್ ಅವರು ಜೈಲಿನಿಂದ ಹೊರಗೆ ಇರಲಿದ್ದಾರೆ. ಅಂದು ಮತ್ತೆ ಈ ಪ್ರಕರಣದ ವಿಚಾರಣೆ ನಡೆಯಲಿದೆ. ಸಿನಿಮಾ ನಿರ್ಮಾಣ ಮಾಡುವ ಸಲುವಾಗಿ ಅವರು ಹಲವು ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದರು. ಸಿನಿಮಾ ಸೋತ ಬಳಿಕ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೇ, ಹಲವು ಬಾರಿ ಚೆಕ್ ಬೌನ್ಸ್ ಆಗಿದ್ದರಿಂದ ಪ್ರಕರಣ ದಾಖಲಿಸಲಾಗಿತ್ತು.

