ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್ ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದ ಹೋಟೆಲ್ ಗಳ ಮೇಲೆ ಆಹಾರ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಅಗತ್ಯ ವಸ್ತುಗಳ ಕಾಯ್ದೆ ಅಡಿ 316 ಪ್ರಕರಣ ದಾಖಲಿಸಿ ಸಿಲಿಂಡರ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಪೀಣ್ಯದಲ್ಲಿ 45, ಚಿಕ್ಕಜಾಲದಲ್ಲಿ 209, ಶಿವಮೊಗ್ಗದಲ್ಲಿ 3, ಯಾದಗಿರಿಯಲ್ಲಿ 46 ಹಾಗೂ ದಾವಣಗೆರೆಯಲ್ಲಿ 13 ಪ್ರಕರಣ ದಾಖಲಿಸಲಾಗಿದೆ,
ಕೋಲಾರ ಜಿಲ್ಲೆಯ ಕೆಜಿಎಫ್ ನಲ್ಲಿ ಅಕ್ರಮ ರೀಫಿಲ್ಲಿಂಗ್ ನಡೆಸುತ್ತಿದ್ದ ಗ್ಯಾಸ್ ಏಜೆನ್ಸಿ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಶನಿವಾರ ಒಂದೇ ದಿನ ರಾಜ್ಯದ್ಯಂತ 14.2 ಕೆಜಿಯ ಗೃಹ ಬಳಕೆಯ ಒಟ್ಟು 3,86,363 ಸಿಲಿಂಡರ್ ಮತ್ತು ವಾಣಿಜ್ಯ ಬಳಕೆಯ 6371 ಸಿಲಿಂಡರ್ ಗಳನ್ನು ವಿತರಿಸಲಾಗಿದೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ವಾಣಿಜ್ಯ ಬಳಕೆ ಸಿಲಿಂಡರ್ ಗಳ ಪೈಕಿ ಶೇಕಡ 20ರಷ್ಟು ಸಿಲಿಂಡರ್ ಗಳನ್ನು ಆಸ್ಪತ್ರೆ, ಶಾಲಾ ಶಿಕ್ಷಣ ಸಂಸ್ಥೆಗಳು, ವಿಮಾನ, ರೈಲು, ಬಸ್ ನಿಲ್ದಾಣಗಳ ಕ್ಯಾಂಟೀನ್, ಪ್ರಮುಖ ದೇವಾಲಯಗಳಲ್ಲಿ ಪ್ರಸಾದ ವಿನಿಯೋಗ, ಸರ್ಕಾರಿ ಕಚೇರಿ, ವೃದ್ಧಾಶ್ರಮ, ಪ್ರಮುಖ ಖಾಸಗಿ ವಲಯದ ಕಚೇರಿಗಳಿಗೆ ಆದ್ಯತೆ ಮೇರೆಗೆ ವಿತರಿಸಲು ಸೂಚಿಸಲಾಗಿದೆ ಎಂದು ಹೇಳಲಾಗಿದೆ.

