ರಾಯಚೂರು: ಇತ್ತೀಚಿನ ದಿನಗಳಲ್ಲಿ ಪ್ರೀತಿ-ಪ್ರೇಮದ ಹೆಸರಲ್ಲಿ ಯುವತಿಯರನ್ನು ನಂಬಿಸಿ ಮೋಸ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇಲ್ಲೋರ್ವ ವ್ಯಕ್ತಿ 10 ವರ್ಷಗಳ ಕಾಲ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಲ್ಲದೇ ಈಗ ಬೇರೊಂದು ಯುವತಿಯನ್ನು ವಿವಾಹವಾಗಲು ಸಿದ್ಧತೆ ನಡೆಸಿರುವ ಘಟನೆ ನಡೆದಿದೆ.
ರಾಅಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಯುವಕನಿಂದ ಮೋಸಹೋದ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಶಿವು ಅಲಿಯಾಸ್ ಶಿವಕುಮಾರ್ ವಿರುದ್ಧ ದೂರುಬ್ ದಾಖಲಾಗಿದೆ.
ಶಿವಕುಮಾರ್ 10 ವರ್ಷ ಪ್ರೀತಿಸಿ, ಮದುವೆ ಭರವಸೆ ನೀಡಿ ಯುವತಿಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದ. ಇದೀಗ ಬೇರೊಬ್ಬ ಯುವತಿಯನ್ನು ಮದುವೆಯಾಗಲು ಸಿದ್ಧನಾಗಿದ್ದು, ಸಂತ್ರಸ್ತ ಯುವತಿ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಇತ್ತೀಚೆಗೆ ಶಿವಕುಮಾರ್ ಸಂತ್ರಸ್ತೆಯನ್ನು ಬಿಟ್ಟು ಬೇರೊಬ್ಬ ಯುವತಿಯನ್ನು ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದ. ಈ ವಿಷಯ ತಿಳಿದು ಸಂತ್ರಸ್ತೆ ಪ್ರಶ್ನಿಸಿದ್ದಕ್ಕೆ ಆರೋಪಿ ಶಿವಕುಮಾರ್ ಮತ್ತು ಆತನ ಕುಟುಂಬಸ್ಥರು ಸಂತ್ರಸ್ತೆಗೆ ಕೊಲೆ ಬೆದರಿಕೆ ಹಾಕಿದ್ದಾರಂತೆ.
ಯುವತಿ ನೀಡಿದ ದೂರಿನ ಮೇರೆಗೆ ಆರೋಪಿ ಶಿವಕುಮಾರ್ ಹಾಗೂ ಆತನಿಗೆ ಬೆಂಬಲ ನೀಡಿದ ಕುಟುಂಬಸ್ಥರ ವಿರುದ್ಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

