ರಾಯಚೂರು: ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಕಚೇರಿಯಲ್ಲಿ ವಾಮಾಚಾರ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯ ಮೇಲ್ಭಾಗದಲ್ಲಿದ್ದ ಹುಣಸೆ ಮರದಲ್ಲಿ ವಾಮಾಚಾರ ಮಾಡಿರುವುದು ಬೆಳಕಿಗೆ ಬಂದಿದೆ.
ಮಹಾಲಯ ಅಮಾವಾಸ್ಯೆಯ ದಿನದಂದೇ ಈ ಘಟನೆ ಕಂಡು ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ. ರಾಯಚೂರಿನ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಕಚೇರಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯ ಮೇಲ್ಭಾಗದಲ್ಲಿದ್ದ ಹುಣಸೆ ಮರದಲ್ಲಿ ಮಾನವ ಆಕೃತಿಯ ಕಪ್ಪು ಗೊಂಬೆಯನ್ನು ನೇತುಹಾಕಲಾಗಿದೆ.
ಸೌಲಭ್ಯಗಳ ಪರಿಶೀಲನೆಗೆ ತೆರಳಿದ್ದ ಸಿಬ್ಬಂದಿಯೊಬ್ಬರಿಗೆ ಈ ಗೊಂಬೆ ಮೊದಲಿಗೆ ಗೋಚರಿಸಿದ್ದು, ನಂತರ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ತಕ್ಷಣವೇ ಸಿಬ್ಬಂದಿ ಈ ಗೊಂಬೆಯನ್ನು ಸುಟ್ಟು ಹಾಕಿದ್ದಾರೆ.
ಕಚೇರಿಯಲ್ಲಿ ಬಾಕಿ ಉಳಿದಿರುವ ಬಿಲ್‌ಗಳು ಮತ್ತು ತೆರವುಗೊಳ್ಳದ ಫೈಲ್‌ಗಳಿಂದ ಬೇಸತ್ತ ಯಾರೋ ಈ ವಾಮಾಚಾರ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ಬಳಿಕ ಪಿಡಬ್ಲ್ಯೂಡಿ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ. ಈ ಕೃತ್ಯವು ಕಚೇರಿಯ ಕೆಲಸದ ವಾತಾವರಣಕ್ಕೆ ಅಡ್ಡಿಯಾಂಟಾಗುವಂತಾಗಿದೆ.
ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಪೊಲೀಸರಿಂದ ನಿರ್ಬಂಧ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅಂತಿಮ ಸಿದ್ಧಗಳು ನಡೆದಿವೆ. ಆದರೆ ದಸರಾ ಸಂಭ್ರಮದ ನಡುವೆಯೇ ಮೈಸೂರಿನಲ್ಲಿ ಕೆಲ ಸಂಘಟನೆಗಳಿಂದ ಮಹಿಷ ದಸರಾ ಆಚರಣೆಗೆ ತಯಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.
ಮೈಸೂರಿನಲ್ಲಿ ಮಹಿಷ ದಸರಾ ಆಚರಣಾ ಸಮಿತಿ ಮಹಿಷ ದಸರಾ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಚಾಮುಂಡಿ ಬೆಟ್ಟದಲ್ಲಿ ಆಚರಣೆಗೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಆದರೆ, ನಗರದ ಪುರಭವನದಲ್ಲಿ ಮಹಿಷ ದಸರಾ ಆಚರಣೆಗೆ ಅವಕಾಶ ನೀಡಲಾಗಿದೆ.
ದಸರಾ ಸಂದರ್ಭದಲ್ಲಿ ಪ್ರವಾಸಿಗರಿಗೆ ತೊಂದರೆಯಾಗುವ ಹಾಗೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮೈಸೂರು ದಸರಾ ಅದರಲ್ಲೂ ವಿಶ್ವ ವಿಖ್ಯಾತ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಜಂಬೂಸವಾರಿ ವೀಕ್ಷಣೆಗೆ ನೀಡಲಾಗುವ ಗೋಲ್ಡ್ ಪಾಸ್‌ಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯ ಎರಡನೇ ಹಂತದ ಸಿಡಿಮದ್ದು ತಾಲೀಮು ಯಶಸ್ವಿಯಾಗಿ ಪೂರ್ಣಗೊಂಡಿದೆ. ಏಳು ಫಿರಂಗಿಗಳ ಮೂಲಕ ಮೂರು ಸುತ್ತುಗಳಲ್ಲಿ ಒಟ್ಟು 21 ಬಾರಿ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲಾಗಿದೆ. ಸಿಡಿಮದ್ದಿನ ಭಾರೀ ಶಬ್ದಕ್ಕೂ ದಸರಾ ಆನೆಗಳು ಬೆದರದೆ ನಿಂತು ಶಬ್ದಾಭ್ಯಾಸದಲ್ಲಿ ಪಾಲ್ಗೊಂಡಿವೆ.
ಇನ್ನು ಮರದ ಅಂಬಾರಿ ಹೊರುವ ತಾಲೀಮು ವೇಳೆ ಅರ್ಧ ದಾರಿಯಲ್ಲೇ ನಿಂತಿದ್ದ ಮಹೇಂದ್ರ ಆನೆಯನ್ನು ಈ ಬಾರಿಯ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗಿದೆ. ಧನಂಜಯ, ಪ್ರಶಾಂತ, ಸುಗ್ರೀವ ಹಾಗೂ ಏಕಲವ್ಯ ಆನೆಗಳು ಮರದ ಅಂಬಾರಿ ಹೊರುವ ತಾಲೀಮಿನಲ್ಲಿ ಸಮರ್ಥವಾಗಿ ಪಾಲ್ಗೊಳ್ಳುತ್ತಿವೆ.
ಮತ್ತೊಂದೆಡೆ ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಭದ್ರತೆಗಾಗಿ 6 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

