ರಾಯಚೂರು: ಬಿಸಿಯೂಟ ಸೇವಿಸಿದ್ದ 51 ಮಕ್ಕಳು ಇಬ್ಬರು ಅತಿಥಿ ಶಿಕ್ಷಕರು ಅಸ್ವಸ್ಥರಾಗಿದ್ದಾರೆ. ಚಿತ್ರಾನ್ನ ಸೇವಿಸಿದ್ದ ಮಕ್ಕಳಲ್ಲಿ ವಾಂತಿ ಭೇದಿ ಉಂಟಾಗಿ ಅಸ್ವಸ್ಥರಾಗಿದ್ದು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಯಚೂರು ಜಿಲ್ಲೆ ಅರಕೇರಾ ತಾಲೂಕಿನ ಮಲ್ಲಾಪುರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ ಶಾಲೆಯಲ್ಲಿ ಬಿಸಿಯೂಟ ಸಿಬ್ಬಂದಿ ಚಿತ್ರಾನ್ನ ಮಾಡಿದ್ದರು. ಊಟದ ನಂತರ ಕೆಲವು ದಿನ ಬಳಿಕ ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ವಾಂತಿ, ಭೇದಿ ಹೊಟ್ಟೆ ನೋವಿನಿಂದ ಮಕ್ಕಳು, ಇಬ್ಬರು ಶಿಕ್ಷಕರು ಅಸ್ವಸ್ಥರಾಗಿದ್ದಾರೆ. ಮಕ್ಕಳನ್ನು ಅರಕೇರಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಇಡೀ ರಾತ್ರಿ ವಿದ್ಯಾರ್ಥಿಗಳು ನರಳಾಡಿದ್ದಾರೆ. ಒಂದು ತಿಂಗಳಿನಿಂದ ಬಳಕೆ ಮಾಡದ ಟ್ಯಾಂಕ್ ನೀರು ಬಳಸಿದ ಆರೋಪ ಕೇಳಿ ಬಂದಿದೆ. ಕಲುಷಿತ ನೀರನ್ನು ಅಡುಗೆಗೆ ಬಳಸಿರುವ ಆರೋಪ ಕೇಳಿ ಬಂದಿದ್ದು, ಅಡುಗೆ ಸಿಬ್ಬಂದಿ ಮತ್ತು ಶಾಲಾ ಮೇಲ್ವಿಚಾರಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.

