ದೆಹಲಿ: ಉತ್ತರಾಖಂಡದ ಹಾಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರ‍್ಯಾಲಿ ಉದ್ದೇಶಿಸಿ ಮಾತನಾಡಿದ್ದ ಸ್ಥಳದಲ್ಲಿ ಇತ್ತೀಚೆಗೆ ನಡೆದ ‘ಶುದ್ಧೀಕರಣ’ ಅಥವಾ ‘ಪವಿತ್ರೀಕರಣ’ ಆಚರಣೆಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ.
‘ಶುದ್ಧೀಕರಣ’ ಎಂಬುದು ಅಸ್ಪೃಶ್ಯತೆಯ ಮತ್ತೊಂದು ರೂಪ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ಇಂತಹ ಕೃತ್ಯವು ಸಂವಿಧಾನದ ಪ್ರಕಾರ ಅಪರಾಧ ಎಂದು ಹೇಳಿದ್ದಾರೆ.ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವಿರುದ್ಧ ವಾಗ್ದಾಳಿ ನಡೆಸಿದರು.
“ನಮ್ಮ ರಾಜಸ್ಥಾನದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಅದಾದ ಬಳಿಕ ಬಿಜೆಪಿ ನಾಯಕರು ‘ಶುದ್ಧೀಕರಣ’ ಆಚರಣೆ ನಡೆಸುತ್ತಾರೆ. ದೇಶ ಹಾಗೂ ಸಂವಿಧಾನಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಾಲ್ದ್ವಾನಿಯ ರಾಮಲೀಲಾ ಮೈದಾನಕ್ಕೆ ತೆರಳಿ ಭಾಷಣ ಮಾಡುತ್ತಾರೆ. ಅಲ್ಲಿಯೂ ‘ಶುದ್ಧೀಕರಣ’ ಆಚರಣೆ ನಡೆಸಲಾಗುತ್ತದೆ. ಇದನ್ನು ಯಾರು ಮಾಡುತ್ತಾರೆ? ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರೇ ಇಂತಹ ಕೆಲಸ ಮಾಡುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಆರೋಪಿಸಿದರು.
ದೇಶದಲ್ಲಿ ಸದ್ಯ ಸಂವಿಧಾನದ ಸಿದ್ಧಾಂತ ಮತ್ತು ಬಿಜೆಪಿ-ಆರ್‌ಎಸ್‌ಎಸ್‌ನ ಸಿದ್ಧಾಂತಗಳ ನಡುವೆ ರಾಜಕೀಯ ಸಂಘರ್ಷ ನಡೆಯುತ್ತಿದೆ ಎಂದು ಅವರು ಹೇಳಿದರು. ಖರ್ಗೆ ಅವರ ವಿರುದ್ಧ ನಡೆದಿರುವ ಈ ರೀತಿಯ ವರ್ತನೆ ಸಾಮಾಜಿಕ ತಾರತಮ್ಯವನ್ನು ತೋರಿಸುತ್ತದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಸಂವಿಧಾನವು ಎಲ್ಲರಿಗೂ ಸಮಾನತೆ ಮತ್ತು ಗೌರವದ ಹಕ್ಕನ್ನು ನೀಡಿದೆ ಎಂದು ಒತ್ತಿ ಹೇಳಿದರು.

