ಬಳ್ಳಾರಿ: ವಾಲ್ಮೀಕಿ ನಿಗಮದ ಹಣ ತೆಲಂಗಾಣ, ಗೋವಾ, ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆಯಾಗಿದೆ. ವಾಲ್ಮೀಕಿ ನಿಗಮದ ಹಗರಣ ಮಾಡಿ ನೀತು ತಪ್ಪು ಮಾಡಿದ್ದೀಯಾ. ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡಿದ್ದಲ್ಲದೇ ಅದನ್ನು ಸಮರ್ಥನೆ ಮಾಡಿಕೊಳ್ಳಲು ನಿನಗೆ ಸಾಧ್ಯವಾಗುತ್ತಿಲ್ಲ. ನಿನ್ನ ಕಣ್ಣೀರಿಗೆ ಬಿಜೆಪಿಯವರು ಕಾರಣವಲ್ಲ, ನಿನ್ನ ಕಣ್ಣೀರಿಗೆ ನಿನ್ನ ಕರ್ಮ ಕಾರಣ ಎಂದು ಶಾಸಕ ಜನಾರ್ಧನ ರೆಡ್ಡಿ ಬಿ.ನಾಗೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯಲ್ಲಿ ಬಿಜೆಪಿ ನಾಯಕರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಾರ್ಧನ ರೆಡ್ಡಿ, ನಿನ್ನ ತಲೆದಂಡ ಮಾಡಿದ್ದು ಕಾಂಗ್ರೆಸ್, ರಾಮಾಯಣದ ಕಥೆ ಹೇಳಿ ಜನರನ್ನು ದಾರಿ ತಪ್ಪಿಸಬೇಡ. ನಾಗೇಂದ್ರ ಸ್ವಯಂ ಘೋಷಿತ ಶಂಭುಕ. ಈಗ ಕಣ್ಣೀರು ಹಾಕಿ ನಾಟಕವಾಡಬೇಡ ಎಂದು ಏಕವಚನದಲ್ಲಿ ಹರಿಹಾಯ್ದಿದ್ದಾರೆ.
ಜನಾರ್ದನ ರೆಡ್ಡಿ ಅವರಿಂದ ನೀನು ಎಂಎಲ್‌ಎ ಆಗಿದ್ದು. ನಿನ್ನ ಇತಿಹಾಸದ ಬಗ್ಗೆ ನಮ್ಮವರು ಮಾತನಾಡುತ್ತಾರೆ. ಮನುವಾದದ ಬಗ್ಗೆ ಮಾತನಾಡುತ್ತೀಯಾ. ನಿನ್ನ ರಾಜಕೀಯ ಆರಂಭವಾಗಿದ್ದು ಬಿಜೆಪಿಯಿಂದ. ವಾಲ್ಮೀಕಿ ರಾಮಾಯಣದ ಬಗ್ಗೆ ಶಂಭುಕನ ಬಗ್ಗೆ ಮಾತನಾಡುತ್ತೀಯಾ? ರಾಜಕೀಯಕ್ಕೆ ರಾಮಾಯಣ ತರುತ್ತೀಯಾ? ಈ ಬಗ್ಗೆ ನಿನಗೆ ಮಾತನಾಡಲು ಯೋಗ್ಯತೆ ಇಲ್ಲ. ಶಂಭುಕನ ಹತ್ಯೆ ಯಾಕೆ ಆಯ್ತು ನಿನಗೆ ಗೊತ್ತಾ? ದಲಿತ ಚಂದ್ರಶೇಖರ್ ಅವರನ್ನು ನೇರವಾಗಿ ಹತ್ಯೆ ಮಾಡಿದ್ದು ನೀವು. ಚಂದ್ರಶೇಖರ್ ಆತ್ಮಹತ್ಯೆಗೆ ಕಾರಣವಾಗಿದ್ದು ನೀನು. ಬಿಜೆಪಿ ಎಂಎಲ್‌ಎ ಇದ್ದಾಗ ನಿನಗೆ ಮನುವಾದ ಗೊತ್ತಿರಲಿಲ್ವ? ಎಂದು ಪ್ರಶ್ನಿಸಿದರು.
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹಗರಣ ಮಾಡಿದ್ದು ನೀನು. ಇಡಿ ಮತ್ತು ಸಿಬಿಐ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ಈ ಹಗರಣದಲ್ಲಿ ನಾನು ಇಲ್ಲ ಇಲ್ಲ ಅಂತ ಹೇಳುತ್ತಿದ್ದೀಯಾ ನೀನು ಹಗರಣ ಮಾಡಿಲ್ಲ ಅಂದರೆ ಆಗಿನ ಸಿಎಂ ಸಿದ್ದರಾಮಯ್ಯ ನಿನ್ನ ರಾಜೀನಾಮೆ ಯಾಕೆ ಪಡೆದುಕೊಂಡ್ರು? 90 ಕೋಟಿ ಹಗರಣ ಆಗಿದೆ ಎಂದು ಸ್ವತಃ ಸಿದ್ದರಾಮಯ್ಯನವರು ಒಪ್ಪಿಕೊಂಡಿದ್ದರು. ಈ ಹಗರಣದಲ್ಲಿ ನೀನು ಇದ್ದೀಯಾ ಎಂದು ನಾನು ಹೇಳುತ್ತೇನೆ ಎಂದರು.
ನಮ್ಮನ್ನು ರಿಜೆಕ್ಟೆಡ್ ಪೀಸ್ ಅಂತಿದ್ದೀಯಾ. ನಾವೆಲ್ಲ ರಿಜೆಕ್ಟೆಡ್ ಪೀಸಾ? ಕಲಬುರಗಿಯಲ್ಲಿ ಹೀನಾಯ ಸೋಲನ್ನು ಕಂಡ ಮಲ್ಲಿಕಾರ್ಜುನ ಖರ್ಗೆಯವರನ್ನು ನೀವು ಇವತ್ತು ನಿಮ್ಮ ಎಐಸಿಸಿ ಅಧ್ಯಕ್ಷ ಮಾಡಿದ್ದೀರಿ. ಹಾಗಿದ್ರೆ ಅವರು ರಿಜಕ್ಟೆಡ್ ಪೀಸಾ? ಮಾತನಾಡುವ ಮೊದಲು ತಲೆಯಲ್ಲಿ ಸ್ವಲ್ಪ ಬುದ್ಧಿ ಇರಬೇಕು. ರಾಜಕೀಯದಲ್ಲಿ ಸೋಲು-ಗೆಲುವು ಎನ್ನುವುದು ಸರ್ವೇ ಸಾಮಾನ್ಯ. ವಾಲ್ಮೀಕಿ ನಿಗಮದ ದುಡ್ಡಿನಲ್ಲಿ ತುಕಾರಾಂ ಗೆದ್ದಿದ್ದಾನೆ. ತುಕಾರಾಂ ಕೂಡ ರಾಜೀನಾಮೆ ಕೊಡಬೇಕಿತ್ತು. ನಾಗೇಂದ್ರ ನಿನಗೆ ನಿನ್ನ ಪಕ್ಷಕ್ಕೆ ತಾಕತ್ತು ಇದ್ರೆ ತುಕಾರಾಂ ಸೇರಿ ಹತ್ತು ಶಾಸಕರಿಗೆ ರಾಜೀನಾಮೆ ಕೊಡಿಸು. ನಾಳೆಯೇ ಚುನಾವಣೆಗೆ ನಾವು ರೆಡಿ. 10ಕ್ಕೆ 10 ವಿಧಾನಸಭಾ ಕ್ಷೇತ್ರಗಳಲ್ಲಿ ನಿಮ್ಮ ವಿರುದ್ಧ ನಾವು ಗೆದ್ದಿಲ್ಲ ಅಂದ್ರೆ ನಾನು ಜನಾರ್ದನ ರೆಡ್ಡಿಯೇ ಅಲ್ಲ ಎಂದು ಸವಾಲು ಹಾಕಿದರು.
ವಾಲ್ಮೀಕಿ ನಿಗಮದ ಹಣ ತೆಲಂಗಾಣ, ಗೋವಾ, ಬಳ್ಳಾರಿ ಎಂಪಿ ಚುನಾವಣೆಗೆ ಬಳಕೆ ಮಾಡಿದ್ದೀರಿ. ಬಾಂಬೆಗೆ ಕೂಡ ಹಣ ಕಳುಹಿಸಿದ್ದಾರೆ. ನೇಹಾ ಮನ್ಸೂರಿ, ಜಾಹದ್ ಮನ್ಸೂರಿ, ಕಲಾಮ್ ಶೇಕೂರ್ ಮನ್ಸೂರಿ ಈ ಮೂವರಿಗೆ 6 ಕೋಟಿಗೂ ಅಧಿಕ ಹಣ ವರ್ಗಾವಣೆ ಮಾಡಿದ್ದಾರೆ. ಈ ಮೂವರ ಬಗ್ಗೆ ನಾಗೇಂದ್ರ ಸ್ಪಷ್ಟೀಕರಣ ಕೊಡಬೇಕು. ನಾಗೇಂದ್ರ ಕೇಸ್‌ನಲ್ಲಿ ಈ ಮೂವರು ಆರೋಪಿಗಳು ಬೆಂಗಳೂರು ಸಿಬಿಐ ಕೋರ್ಟ್‌ನಲ್ಲಿ ಬೇಲ್ ಪಡೆದಿದ್ದಾರೆ. ನಿಗಮದ ಖಾತೆಯಿಂದ ಈ ಮೂವರಿಗೆ ಹಣ ಹೋಗಿದೆ. ಈ ಮೂವರಿಗೂ ನಾಗೇಂದ್ರಗೂ ಇರುವ ಸಂಬಂಧ ಏನು? ಎಂದು ಪ್ರಶ್ನಿಸಿದರು.
ಈ ಕೇಸ್‌ನಲ್ಲಿ ನಾಗೇಂದ್ರ ಸೇರಿ 26 ಜನರು ಇದ್ದಾರೆ. ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಬಳ್ಳಾರಿಯಲ್ಲಿ ಒಂದು ಲಕ್ಷ ನಾಗೇಂದ್ರ ಇದ್ದಾರೆ ಎಂದು ಹೇಳುತ್ತೀಯಾ. ನಾಗೇಂದ್ರ ನಿನಗೆ ಏನೇನೋ ಆಗಿ ತಲೆ ಕೆಟ್ಟಿದೆ. 3 ಲಕ್ಷ ವಾಲ್ಮೀಕಿ ಕುಟುಂಬಗಳಿಗೆ ಸೇರಬೇಕಿದ್ದ ಹಣ ಅದು. ನಿನ್ನ ಕಣ್ಣೀರು ಕರ್ಮದ ಕಣ್ಣೀರು. ನೀನು ಹಾಕಿದ ಕರ್ಮದ ಕಣ್ಣೀರು ಸತ್ತು ಹೋಗಿರುವ ಚಂದ್ರಶೇಖರ್ ಆತ್ಮಕ್ಕೆ 1% ಆದ್ರೂ ಸಂತೋಷ ತಂದಿರುತ್ತೆ ಎಂದು ಕಿಡಿಕಾರಿದರು.

