ಉತ್ತರ ಪ್ರದೇಶದ 7 ವರ್ಷದ ರಾಗಿಣಿಯ ಬದುಕು ಕಣ್ಣೀರು ತರಿಸುವಂತಿದೆ. ಒಂದೇ ಕಾಲಿನಲ್ಲಿ, ಯಾವುದೇ ಊರುಗೋಲು ಅಥವಾ ಗಾಲಿಕುರ್ಚಿಯ ನೆರವಿಲ್ಲದೆ ಪ್ರತಿದಿನ ಸುಮಾರು 400 ಮೀಟರ್ ದೂರ ಕುಂಟುತ್ತಾ ಶಾಲೆಗೆ ತೆರಳುತ್ತಾಳೆ. ದಾರಿಯಲ್ಲಿ ನೋವು ತಾಳಲಾರದೆ ಅಳುತ್ತಾ, “ನನಗೇ ಏಕೆ ಈ ಶಿಕ್ಷೆ ದೇವರೇ?” ಎಂದು ಪ್ರಶ್ನಿಸುವ ಬಾಲಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರ ಮನಕಲಕಿದೆ.
ಹೌದು. ವಿಧಿ ಮಾಡಿದ ಗಾಯ ಆ ಪುಟ್ಟ ಬಾಲಕಿಯ ಕಾಲನ್ನೇ ಕಸಿದುಕೊಂಡಿದೆ. ವಯಸ್ಸು ಕೇವಲ 7 ವರ್ಷ. ಆಡಿ-ಆಡುತ್ತಾ ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿ ಒಂದು ಕಾಲಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾಳೆ. ಊರುಗೋಲು ಇಲ್ಲ, ಗಾಲಿಕುರ್ಚಿಯೂ ಇಲ್ಲ. ಆದರೆ ಓದಬೇಕು ಎಂಬ ಆಕೆಯ ದೃಢಸಂಕಲ್ಪದ ಮುಂದೆ ಅಂಗವೈಕಲ್ಯವೂ ಸೋತಿದೆ.
ತೀವ್ರ ಬಡತನದ ನಡುವೆಯೂ ಒಂದೇ ಕಾಲಿನಲ್ಲಿ ಕುಂಟುತ್ತಾ ಪ್ರತಿದಿನ ನೂರಾರು ಮೀಟರ್‌ಗಳಷ್ಟು ದೂರ ಹಾರಿ-ಹಾರಿ ಶಾಲೆಗೆ ತೆರಳುತ್ತಿರುವ ಉತ್ತರ ಪ್ರದೇಶದ ಬಾಲಕಿ ರಾಗಿಣಿಯ ಕಷ್ಟದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪುಟ್ಟ ಬಾಲಕಿಯ ಸಂಕಷ್ಟ ಕಂಡು ಗ್ರಾಮಸ್ಥರು ಹಾಗೂ ನೆಟ್ಟಿಗರು ಕಣ್ಣೀರಿಡುತ್ತಿದ್ದಾರೆ.
6 ತಿಂಗಳ ವಯಸ್ಸಿನಲ್ಲೇ ಜೀವನವನ್ನೇ ಬದಲಿಸಿದ ಅಪಘಾತ!
ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ದಿಘೇಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಣಿಪುರ ಗ್ರಾಮದ 7 ವರ್ಷದ ರಾಗಿಣಿಯ ಕರುಣಾಜನಕ ಕಥೆ ಇದು.
ರಾಗಿಣಿಗೆ ಕೇವಲ 6 ತಿಂಗಳ ವಯಸ್ಸಿದ್ದಾಗ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಆಕೆಯ ಒಂದು ಕಾಲಿಗೆ ಗಂಭೀರ ಗಾಯವಾಗಿತ್ತು. ಕೂಲಿ ಕೆಲಸ ಮಾಡಿದರೆ ಮಾತ್ರ ಕುಟುಂಬದ ಜೀವನ ಸಾಗುವಂತಹ ಪರಿಸ್ಥಿತಿ. ತೀವ್ರ ಬಡತನದಿಂದಾಗಿ ಬಾಲಕಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಕುಟುಂಬಕ್ಕೆ ಸಾಧ್ಯವಾಗಲಿಲ್ಲ.
ಕಾಲಕ್ರಮೇಣ ಆಕೆಯ ಒಂದು ಕಾಲು ಸಂಪೂರ್ಣವಾಗಿ ಹಾನಿಗೊಳಗಾಯಿತು. ಆದರೂ ರಾಗಿಣಿ ಮನೆಯಲ್ಲೇ ಕುಳಿತುಕೊಳ್ಳಲಿಲ್ಲ. ತನ್ನ ಸಹಪಾಠಿಗಳು ಶಾಲೆಗೆ ಹೋಗುವುದನ್ನು ನೋಡಿದಾಗ ತಾನೂ ಶಾಲೆಗೆ ಹೋಗಬೇಕು ಎಂದು ಹಠ ಹಿಡಿಯುತ್ತಿದ್ದಳು. ಕೊನೆಗೆ ಸ್ಥಳೀಯ ಪ್ರಾಥಮಿಕ ಶಾಲೆಯೊಂದರಲ್ಲಿ ಮೊದಲ ತರಗತಿಗೆ ಸೇರಿಕೊಂಡಳು.
ರಸ್ತೆಯಲ್ಲೇ ಅಳುತ್ತಾ ಶಾಲೆಯತ್ತ ಪ್ರಯಾಣ!
ರಾಗಿಣಿಯ ಮನೆಯಿಂದ ಶಾಲೆ ಸುಮಾರು 400 ಮೀಟರ್ ದೂರದಲ್ಲಿದೆ. ಈ ದೂರವನ್ನು ಆಕೆ ಒಂದೇ ಕಾಲಿನಲ್ಲಿ ಹಾರಿ, ಕುಂಟುತ್ತಾ ಕ್ರಮಿಸುತ್ತಾಳೆ. ಈ ಪ್ರಯಾಣ ಆ ಪುಟ್ಟ ಬಾಲಕಿಗೆ ನರಕಯಾತನೆಯಂತಾಗಿದೆ.
ದಾರಿಯಲ್ಲಿ ದಣಿದು, ನೋವು ತಾಳಲಾರದೆ ರಸ್ತೆಯಲ್ಲೇ ಕುಳಿತು ಅಳುತ್ತಾ, “ನನಗೇ ಏಕೆ ಈ ಶಿಕ್ಷೆ ದೇವರೇ?” ಎಂದು ಪ್ರಶ್ನಿಸುತ್ತಾಳೆ. ಸ್ವಲ್ಪ ಸಮಯದ ಬಳಿಕ ಕಣ್ಣೀರು ಒರೆಸಿಕೊಂಡು ಮತ್ತೆ ಒಂದೇ ಕಾಲಿನಲ್ಲಿ ಶಾಲೆಯತ್ತ ಹೆಜ್ಜೆ ಹಾಕುತ್ತಾಳೆ.
ಈ ಮನಕಲಕುವ ದೃಶ್ಯ ಕಂಡು ಶಾಲೆಯ ಮುಖ್ಯಶಿಕ್ಷಕ ಅಮಿತ್ ಪಾಲ್ ಯಾದವ್ ಕೂಡ ಮರುಗಿದ್ದಾರೆ. ಬಾಲಕಿಗೆ ಕೃತಕ ಕಾಲು ಅಥವಾ ಟ್ರೈಸೈಕಲ್ ಒದಗಿಸುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದಾರೆ. ಬಳಿಕ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಲಕಿಯ ನೆರವಿಗೆ ಧಾವಿಸಿದ ಅಧಿಕಾರಿಗಳು, ದಾನಿಗಳು!
ರಾಗಿಣಿಯ ಕಷ್ಟ ಸಾಮಾಜಿಕ ಜಾಲತಾಣಗಳ ಮೂಲಕ ಹೊರಬಂದ ಬಳಿಕ ಅಧಿಕಾರಿಗಳು ಹಾಗೂ ಹಲವು ನಾಯಕರು ತಕ್ಷಣ ಸ್ಪಂದಿಸಿದ್ದಾರೆ.ವಿಷಯ ತಿಳಿದ ಕೂಡಲೇ ಬಲ್ಲಿಯಾ ಜಿಲ್ಲಾಧಿಕಾರಿ ಮಂಗ್ಲಾ ಪ್ರಸಾದ್ ಸಿಂಗ್ ಕ್ರಮ ಕೈಗೊಂಡಿದ್ದು, ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರ ತಂಡವನ್ನು ಬಾಲಕಿಯ ಮನೆಗೆ ಕಳುಹಿಸಿದ್ದಾರೆ. ಸರ್ಕಾರದಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಇನ್ನೊಂದೆಡೆ, ಆಮ್ ಆದ್ಮಿ ಪಕ್ಷದ ಪ್ರತಿನಿಧಿಗಳು ರಾಗಿಣಿಯ ಮನೆಗೆ ತೆರಳಿ ತಕ್ಷಣದ ನೆರವಾಗಿ ಗಾಲಿಕುರ್ಚಿಯೊಂದನ್ನು ಹಾಗೂ ₹25,000 ಆರ್ಥಿಕ ಸಹಾಯವನ್ನು ನೀಡಿದ್ದಾರೆ. ಶೀಘ್ರದಲ್ಲೇ ಬಾಲಕಿಗೆ ಕೃತಕ ಕಾಲು ಅಳವಡಿಸಲು ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದ್ದಾರೆ.
ಓದಿಗಾಗಿ ಆ ಪುಟ್ಟ ಬಾಲಕಿ ಪಡುತ್ತಿರುವ ಕಷ್ಟಕ್ಕೆ ಇದೀಗ ನೆರವಿನ ಹಸ್ತಗಳು ಚಾಚಿರುವುದರಿಂದ ರಾಗಿಣಿಯ ಮುಖದಲ್ಲಿ ಮತ್ತೆ ನಗು ಮೂಡಿದೆ.

