ಬೆಂಗಳೂರು: ಪ್ರತಿಷ್ಠಿತ ಆಕಾಶ್ ಗ್ರೂಪ್ ಆಫ್ ಇನ್ಸ್ ಟಿಟ್ಯೂಟ್ ನಲ್ಲಿ ರ‍್ಯಾಗಿಂಗ್ ನಡೆದಿದ್ದು, ದೂರು ನೀಡಿದ್ದಕ್ಕೆ ಸೀನಿಯರ್ ವಿದ್ಯಾರ್ಥಿಗಳು ಜ್ಯೂನಿಯರ್ಸ್ ಸೇರಿದಂತೆ ಸಂಸ್ಥೆಯ ಪ್ರಾಧ್ಯಾಪಕರ ಮೇಲೂ ರೌಡಿಗಳಂತೆ ಹೊಡೆದಾಡಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಆಕಾಶ್ ಇನ್ಸ್ ಟಿಟ್ಯೂಟ್ ನಲ್ಲಿ ಈ ಘಟನೆ ನಡೆದಿದೆ. ಸೀನಿಯರ್ ವಿದ್ಯಾರ್ಥಿಗಳು ಜ್ಯೂನಿಯರ್ ವಿದ್ಯಾರ್ಥಿಗಳಿಗೆ ಎಣ್ಣೆ, ಸಿಗರೇಟ್ಸ್ ತೆಗೆದುಕೊಂಡು ಬರುವಂತೆ ಆವಾಜ್ ಹಾಕುತ್ತಿದ್ದರು. ಸೀನಿಯರ್ಸ್ ಹೇಳಿದಂತೆ ಕೇಳದಿದ್ದಕ್ಕೆ ಹಲ್ಲೆ ನಡೆಸಿದ್ದರು. ರ‍್ಯಾಗಿಂಗ್ ನಿಂದ ಬೇಸತ್ತ ಕಿರಿಯ ವಿದ್ಯಾರ್ಥಿಗಳು ಸಂಸ್ಥೆಯ ಆಡಳಿತಮಂಡಳಿಗೆ ದೂರು ನೀಡಿದ್ದರು. ದೂರು ನೀಡಿದ್ದಕ್ಕೆ ಕಿರಿಯ ವಿದ್ಯಾರ್ಥಿಗಳ ಮೇಲೆ ಹಿರಿಯ ವಿದ್ಯಾರ್ಥಿಗಳು ಮತ್ತಷ್ಟು ಹಲ್ಲೆ ಮಾಡಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಕಾಲೇಜು ಆಡಳಿತ ಮಂಡಳಿಯ ಸಿಬ್ಬಂದಿಗಳ ಮೇಲೂ ಹಲ್ಲೆ ನಡೆಸಿದ್ದಾರೆ.
ಅಲ್ಲದೇ ಪ್ರಾಧ್ಯಾಪಕರ ಮೇಲೂ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಅಡ್ಮಿಷನ್ ಹೆಡ್ ಮಿಥುನ್ ಮಾಧವನ್ ಎಂಬುವವರು ರ‍್ಯಾಗಿಂಗ್ ಮಾಡಿದ ಹಗೂ ಹಲ್ಲೆ ನಡೆಸಿರುವ ವಿದ್ಯಾರ್ಥಿಗಳ ವಿರುದ್ಧ ದೇವನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಹಲ್ಲೆ ನಡೆಸಿರುವ ಬಿಲಾಲ್, ಜಿರಲ್, ಮಿಶಾಲ್, ಅರ್ಜುನ್, ಎಡ್ವಿನ್, ಆಂಟೋನಿ, ಸರನ್ ಸೇರಿದಂತೆ 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

