ಪ್ರವಾಸ ಎಂದರೆ ಸಾಮಾನ್ಯವಾಗಿ ತಿಂಗಳುಗಟ್ಟಲೆ ಪ್ಲಾನ್ ಮಾಡಿ, ಹಣ ಉಳಿಸಿ ಹೋಗುವಂತಹದ್ದು. ಆದರೆ ಈಗಿನ ಜೆನ್-ಜೀ (Gen Z) ಮತ್ತು ಮಿಲೇನಿಯಲ್ಸ್ ಹೊಸದೊಂದು ಹಾದಿ ಹಿಡಿದಿದ್ದಾರೆ. ಆಫೀಸಿನ ಕಿರಿಕಿರಿ ಅಥವಾ ಜೀವನದ ಜಿಗುಪ್ಸೆಯಿಂದ ಕೋಪ ಬಂದಾಗ ಶಾಪಿಂಗ್ ಮಾಡುವ ಬದಲು, ತಕ್ಷಣವೇ ವಿಮಾನ ಅಥವಾ ಹೋಟೆಲ್ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಇದನ್ನೇ ‘ರೇಜ್ ಬುಕಿಂಗ್’ (Rage Booking) ಎಂದು ಕರೆಯಲಾಗುತ್ತಿದೆ.
ಹೌದು. ಅತಿಯಾದ ಕೋಪ, ನಿರಾಸೆ ಅಥವಾ ಮಾನಸಿಕ ಒತ್ತಡದಲ್ಲಿದ್ದಾಗ, ಆ ಕ್ಷಣದ ಆವೇಶದಲ್ಲಿ ಯಾವುದೇ ಪ್ಲಾನಿಂಗ್ ಇಲ್ಲದೆ ಪ್ರವಾಸಕ್ಕಾಗಿ ಹೋಟೆಲ್ ಅಥವಾ ವಿಮಾನ ಟಿಕೆಟ್ ಬುಕ್ ಮಾಡುವುದನ್ನೇ ‘ರೇಜ್ ಬುಕಿಂಗ್’ ಎನ್ನಲಾಗುತ್ತದೆ. ಹಿಂದೆ ಜನರು ಕೋಪ ಬಂದಾಗ ಮನಸ್ಸಿನ ನೆಮ್ಮದಿಗಾಗಿ ಶಾಪಿಂಗ್ ಮಾಡುತ್ತಿದ್ದರು (ಇದನ್ನು ‘ರಿಟೇಲ್ ಥೆರಪಿ’ ಎನ್ನುತ್ತಾರೆ). ಆದರೆ ಇಂದಿನ ಯುವಪಡೆ ಶಾಪಿಂಗ್ ಬದಲು ಪ್ರವಾಸ’ ವನ್ನೇ ಮದ್ದಾಗಿ ಬಳಸುತ್ತಿದ್ದಾರೆ.
ಏನಿದು ಈ ಹೊಸ ಟ್ರೆಂಡ್?
ಬದುಕು ಅಂದುಕೊಂಡಂತೆ ನಡೆಯದಿದ್ದಾಗ ಅಥವಾ ಕೆಲಸದ ಒತ್ತಡ (Burnout) ಮಿತಿಮೀರಿದಾಗ, ಆ ಕ್ಷಣದ ಆಕ್ರೋಶವನ್ನು ತಣಿಸಿಕೊಳ್ಳಲು ಯುವಜನತೆ ಈ ಮಾರ್ಗವನ್ನು ಆರಿಸಿಕೊಳ್ಳುತ್ತಿದ್ದಾರೆ.
ತಕ್ಷಣದ ನಿರ್ಧಾರ: ಯಾವುದೇ ಮುನ್ಸೂಚನೆ ಇಲ್ಲದೆ, ಸೀದಾ ಫೋನ್ ತೆಗೆದು ಹತ್ತಿರದ ಹಿಲ್ ಸ್ಟೇಷನ್ ಅಥವಾ ಬೀಚ್‌ಗೆ ಟಿಕೆಟ್ ಬುಕ್ ಮಾಡುವುದು.
ನಿಯಂತ್ರಣದ ಭಾವ: ಆಫೀಸಿನಲ್ಲಿ ಬಾಸ್ ಹೇಳಿದಂತೆ ಕೇಳಬೇಕಾದ ಪರಿಸ್ಥಿತಿಯಲ್ಲಿ, “ನನ್ನ ಜೀವನದ ನಿರ್ಧಾರ ನಾನು ತಗೆದುಕೊಳ್ಳಬಲ್ಲೆ” ಎಂಬ ಹಂಬಲವೇ ಈ ಬುಕಿಂಗ್‌ಗೆ ಪ್ರೇರಣೆ.
ವರದಿ ಏನು ಹೇಳುತ್ತದೆ ?
ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ:ಪ್ರತಿ ಮೂವರಲ್ಲಿ ಒಬ್ಬರು ಕೆಲಸದ ಒತ್ತಡದಿಂದ ತಪ್ಪಿಸಿಕೊಳ್ಳಲು ಇಂತಹ ‘ರೇಜ್ ಬುಕಿಂಗ್’ ಮಾಡುತ್ತಿದ್ದಾರೆ.ಶೇ. 83 ರಷ್ಟು ಜನರು ಈ ರೀತಿ ಹಠಾತ್ ಪ್ರವಾಸಕ್ಕೆ ಹೋದ ನಂತರ ತಮ್ಮ ಮಾನಸಿಕ ಸ್ಥಿತಿ ಸುಧಾರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಚ್ಚರಿಯ ವಿಷಯವೆಂದರೆ, ರಾತ್ರಿ 3 ರಿಂದ 4 ಗಂಟೆಯ ಸಮಯದಲ್ಲಿ ಇಂತಹ ಬುಕಿಂಗ್‌ಗಳು ಹೆಚ್ಚಾಗಿ ನಡೆಯುತ್ತಿವೆ!
ಕೋಪದಲ್ಲಿ ಪ್ರವಾಸ.. ಜೇಬಿಗೆ ಕತ್ತರಿ?
ರೇಜ್ ಬುಕಿಂಗ್‌ಗಳು ಹೆಚ್ಚಾಗಿ ಕೊನೆಯ ಕ್ಷಣದಲ್ಲಿ (Last Minute) ನಡೆಯುವುದರಿಂದ ವಿಮಾನ ಟಿಕೆಟ್ ದರಗಳು ಹೆಚ್ಚಿರುತ್ತವೆ. ಆದರೂ, “ಹಣಕ್ಕಿಂತ ಮಾನಸಿಕ ನೆಮ್ಮದಿಯೇ ಮುಖ್ಯ” ಎಂಬುದು ಈ ಪೀಳಿಗೆಯ ವಾದ. ಇದನ್ನೊಂದು ‘ಟ್ರಾವೆಲ್ ಥೆರಪಿ‘ ಎಂದು ಅವರು ಭಾವಿಸುತ್ತಿದ್ದಾರೆ.
ಯುವಜನತೆ ಹೀಗೆ ಮಾಡಲು ಪ್ರಮುಖ ಕಾರಣಗಳು:
- ಕೆಲಸದ ಒತ್ತಡ (Work Burnout): ಆಫೀಸಿನಲ್ಲಿ ಬಾಸ್ ಕಿರಿಕಿರಿ ಮಾಡಿದಾಗ ಅಥವಾ ಕೆಲಸದ ಹೊರೆ ಜಾಸ್ತಿಯಾದಾಗ, “ಇನ್ನು ನನ್ನ ಕೈಯಿಂದ ಸಾಧ್ಯವಿಲ್ಲ” ಎಂಬ ಕೋಪದಲ್ಲಿ ತಕ್ಷಣವೇ ಎಲ್ಲೋ ದೂರ ಹೋಗಲು ಟಿಕೆಟ್ ಬುಕ್ ಮಾಡುತ್ತಾರೆ.
- ನಿಯಂತ್ರಣದ ಹಂಬಲ: ಬದುಕಿನಲ್ಲಿ ಅಥವಾ ವೃತ್ತಿಜೀವನದಲ್ಲಿ ಎಲ್ಲವೂ ಕೈಮೀರಿ ಹೋಗುತ್ತಿದೆ ಎಂದೆನಿಸಿದಾಗ, ತಮ್ಮ ಜೀವನದ ಮೇಲೆ ತಮಗೆ ನಿಯಂತ್ರಣವಿದೆ ಎಂದು ಸಾಬೀತುಪಡಿಸಲು ಈ ರೀತಿ ಮಾಡುತ್ತಾರೆ.
- ಭಾವನಾತ್ಮಕ ಬಿಡುಗಡೆ: ಕೋಪದಲ್ಲಿರುವಾಗ ಪರಿಸರ ಬದಲಾದರೆ ಮನಸ್ಸು ಶಾಂತವಾಗುತ್ತದೆ ಎಂಬ ನಂಬಿಕೆ.
- ಸೋಶಿಯಲ್ ಮೀಡಿಯಾ ಪ್ರಭಾವ: ಇನ್‌ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್‌ನಲ್ಲಿ ಇತರರು ಪ್ರವಾಸ ಮಾಡುತ್ತಿರುವುದನ್ನು ನೋಡಿ, ತಾವು ಕೂಡ ಆ ಕ್ಷಣವೇ ಹೊರಡಬೇಕೆಂದು ನಿರ್ಧರಿಸುತ್ತಾರೆ.
ಗಮನಿಸಿ: ಕೋಪದಲ್ಲಿ ಪ್ರವಾಸಕ್ಕೆ ಹೋಗುವುದು ತಾತ್ಕಾಲಿಕವಾಗಿ ಮನಸ್ಸಿಗೆ ಮುದ ನೀಡಬಹುದು, ಆದರೆ ಬಜೆಟ್ ಮೀರಿ ಖರ್ಚು ಮಾಡುವುದು ಆರ್ಥಿಕ ಒತ್ತಡಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ನೀವು ಕೂಡ ಎಂದಾದರೂ ಆಫೀಸ್ ಒತ್ತಡಕ್ಕೆ ಬೇಸತ್ತು ಹೀಗೆ ಮಾಡಿದ್ದೀರಾ ? ಈ ಟ್ರೆಂಡ್ ಗೆ ನಿಮ್ಮಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ!

