ರೈಲ್ವೆ ಪ್ರಯಾಣಿಕರಿಂದ ಆರ್‌ಎಸಿ (RAC) ಟಿಕೆಟ್‌ಗಳ ಹೆಸರಿನಲ್ಲಿ ಪೂರ್ಣ ಪ್ರಮಾಣದ ದರ ವಸೂಲಿ ಮಾಡುವುದು ಸಮಂಜಸವಲ್ಲ ಎಂದು ಸಂಸದೀಯ ಸಮಿತಿಯು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪೂರ್ಣ ಪ್ರಮಾಣದ ಬರ್ತ್ ಸೌಲಭ್ಯ ನೀಡದಿದ್ದಾಗ ಪ್ರಯಾಣಿಕರಿಂದ ಪೂರ್ಣ ಟಿಕೆಟ್ ದರ ಪಡೆಯುವುದು ಅನ್ಯಾಯ. ಅಂತಹ ಪ್ರಯಾಣಿಕರಿಗೆ ಟಿಕೆಟ್ ಮೊತ್ತದ ಒಂದು ಭಾಗವನ್ನು ರೀಫಂಡ್ (ಹಣ ವಾಪಸ್) ಮಾಡಬೇಕು ಎಂದು ಸಮಿತಿಯು ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿದೆ.
ಸಾಮಾನ್ಯವಾಗಿ ಆರ್‌ಎಸಿ ಟಿಕೆಟ್ ಹೊಂದಿರುವ ಇಬ್ಬರು ಪ್ರಯಾಣಿಕರು ಒಂದೇ ಸೈಡ್ ಲೋಯರ್ ಬರ್ತ್ ಅನ್ನು ಹಂಚಿಕೊಳ್ಳಬೇಕಾಗುತ್ತದೆ. ಅಂದರೆ ಒಬ್ಬರು ಮಲಗುವ ಜಾಗದಲ್ಲಿ ಇಬ್ಬರು ಕುಳಿತು ಪ್ರಯಾಣಿಸಬೇಕಾದ ಅನಿವಾರ್ಯತೆ ಇರುತ್ತದೆ. ಆದರೆ ರೈಲ್ವೆ ಇಲಾಖೆ ಮಾತ್ರ ಇಬ್ಬರಿಂದಲೂ ಪೂರ್ಣ ಬರ್ತ್‌ನ ಹಣವನ್ನು ವಸೂಲಿ ಮಾಡುತ್ತಿದೆ. ಬುಧವಾರ ಸಂಸತ್ತಿನಲ್ಲಿ ಮಂಡಿಸಲಾದ ವರದಿಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ (PAC) ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಪೂರ್ಣ ಹಣ ಪಾವತಿಸಿದರೂ ಪೂರ್ಣ ಬರ್ತ್ ಸಿಗದ ಪ್ರಯಾಣಿಕರಿಗೆ ಹಣದ ಒಂದು ಭಾಗವನ್ನು ಹಿಂತಿರುಗಿಸುವ ಹೊಸ ನೀತಿಯನ್ನು ಜಾರಿಗೆ ತರಲು ಸಮಿತಿ ಸೂಚಿಸಿದೆ.
ರೈಲುಗಳ ವೇಗದ ಬಗ್ಗೆಯೂ ಅಸಮಾಧಾನ : ಕೇವಲ ಆರ್‌ಎಸಿ ಟಿಕೆಟ್ ಮಾತ್ರವಲ್ಲದೆ, ರೈಲುಗಳ ವೇಗದ ವಿಷಯದಲ್ಲೂ ಸಮಿತಿಯು ರೈಲ್ವೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ. ಗಂಟೆಗೆ ಕನಿಷ್ಠ 55 ಕಿಲೋಮೀಟರ್ ವೇಗದಲ್ಲಿ ಚಲಿಸುವ ರೈಲುಗಳನ್ನು ‘ಸೂಪರ್ ಫಾಸ್ಟ್’ ವರ್ಗಕ್ಕೆ ಸೇರಿಸುವುದು ಸರಿಯಲ್ಲ, ಇದು ಹಳೆಯ ಪದ್ಧತಿ ಎಂದು ಸಮಿತಿ ಹೇಳಿದೆ. ಕೇವಲ ಸೂಪರ್ ಫಾಸ್ಟ್ ಸರ್‌ಚಾರ್ಜ್ ವಸೂಲಿ ಮಾಡಲು ರೈಲುಗಳಿಗೆ ಆ ಹೆಸರಿಡಲಾಗುತ್ತಿದೆ. ವಾಸ್ತವವಾಗಿ ನೂರಕ್ಕೂ ಹೆಚ್ಚು ಸೂಪರ್ ಫಾಸ್ಟ್ ರೈಲುಗಳು 55 ಕಿ.ಮೀ ಗಿಂತ ಕಡಿಮೆ ವೇಗದಲ್ಲಿ ಚಲಿಸುತ್ತಿವೆ ಎಂದು ಸಮಿತಿ ಬಹಿರಂಗಪಡಿಸಿದೆ.
ವಿಶ್ವದ ಇತರ ದೇಶಗಳೊಂದಿಗೆ ಸ್ಪರ್ಧಿಸಬೇಕಾದರೆ ಭಾರತೀಯ ರೈಲ್ವೆ ತನ್ನ ಮಾನದಂಡಗಳನ್ನು ಬದಲಾಯಿಸಿಕೊಳ್ಳಬೇಕು ಎಂದು ಸಮಿತಿ ಸಲಹೆ ನೀಡಿದೆ. 2030ರ ವೇಳೆಗೆ ಸೂಪರ್ ಫಾಸ್ಟ್ ರೈಲುಗಳ ಸರಾಸರಿ ವೇಗವನ್ನು ಗಂಟೆಗೆ 100 ಕಿಲೋಮೀಟರ್‌ಗೆ ಹೆಚ್ಚಿಸುವ ಗುರಿ ಹೊಂದಬೇಕು. ಹಾಗೆಯೇ, ಹೊಸ ರೈಲುಗಳನ್ನು ಪರಿಚಯಿಸುವ ಭರಾಟೆಯಲ್ಲಿ ಹಳೆಯ ರೈಲುಗಳು ವಿಳಂಬವಾಗಬಾರದು. ಇರುವ ರೈಲುಗಳನ್ನು ಸರಿಯಾದ ಸಮಯಕ್ಕೆ ಓಡಿಸುವುದರತ್ತ ರೈಲ್ವೆ ಗಮನಹರಿಸಬೇಕು ಎಂದು ಸಮಿತಿ ಸ್ಪಷ್ಟಪಡಿಸಿದೆ.

