ಬೆಂಗಳೂರು: ರಾಜ್ಯದ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ.
ಈ ಸಂಬಂಧ ಹತ್ತು ದಿನದಲ್ಲಿ ಅಧಿಕೃತ ಆದೇಶ ಹೊರಡಿಸಲಾಗುವುದು. ಮೊದಲ ಹಂತದಲ್ಲಿ ಪದವಿ ಪೂರ್ವ ಮತ್ತು ಪಿಯು ಕಾಲೇಜುಗಳಲ್ಲಿ ಮಾತ್ರ ಚುನಾವಣೆ ನಡೆಸಲಾಗುವುದು. ಈ ಅವಧಿಯಲ್ಲಿ ಶೈಕ್ಷಣಿಕ ಕ್ಯಾಂಪಸ್ ಒಳಗೆ ರಾಜಕೀಯ ಚಟುವಟಿಕೆಗಳಿಗೆ ನಿಷೇಧ ಹೇರಲಾಗುವುದು.
ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸುವ ಸಂಬಂಧ ಕೆಪಿಸಿಸಿ ರಚಿಸಿದ್ದ ಸಮಿತಿಯ ಸಂಯೋಜಕರಾಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿ ಸಂಘಟನೆಗಳು, ರಾಜಕೀಯ ಪಕ್ಷಗಳು ಕ್ಯಾಂಪಸ್ ಒಳಗೆ ಚುನಾವಣೆ ಪ್ರಚಾರ, ಬಹಿರಂಗ ವೇದಿಕೆ ಬಳಸಿಕೊಳ್ಳುವುದನ್ನು ಸಂಪೂರ್ಣ ನಿರ್ಬಂಧಿಸಲಾಗುವುದು. ಸ್ಪರ್ಧಿಸುವವರು ನಿರ್ದಿಷ್ಟ ಸಂಘಟನೆ ರಾಜಕೀಯ ಪಕ್ಷದ ಅಭ್ಯರ್ಥಿ ಎಂದು ಬಿಂಬಿಸಿಕೊಂಡರೆ ಅಂತಹವರ ಉಮೇದುವಾರಿಕೆ ರದ್ದು ಮಾಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೊನೆಯ ಬಾರಿಗೆ ಕಾಲೇಜುಗಳ ವಿದ್ಯಾರ್ಥಿಗಳ ಸಂಘಗಳಿಗೆ 1989 ರಲ್ಲಿ ಚುನಾವಣೆ ನಡೆದಿದ್ದು, 37 ವರ್ಷಗಳ ನಂತರ ಮತ್ತೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಚುನಾವಣೆ ನಡೆಸಲಾಗುವುದು. ಎರಡನೇ ಹಂತದಲ್ಲಿ ವಿಶ್ವವಿದ್ಯಾಲಯಗಳಲ್ಲಿ ಚುನಾವಣೆ ನಡೆಯಲಿದೆ. ನಂತರ ಪ್ರತಿ ವರ್ಷ ಏಕಕಾಲಕ್ಕೆ ಚುನಾವಣೆ ನಡೆಸಲಾಗುತ್ತದೆ. ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿ ರಾಜಕೀಯ ಸಿದ್ದಾಂತ ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಅಥವಾ ಹಿಂಸಾಚಾರ ಬಳಕೆ ಮಾಡಿಕೊಂಡು ಸ್ಪರ್ಧಿಸಿದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವಿದ್ಯಾರ್ಥಿನಿಯರಿಗೆ ಮೀಸಲಾತಿ ಕಲ್ಪಿಸಲಾಗುವುದು. ಅಧ್ಯಕ್ಷ ಸ್ಥಾನ ಹೊರತುಪಡಿಸಿ ಒಂದು ಅಥವಾ ಎರಡು ಸ್ಥಾನಗಳನ್ನು ವಿದ್ಯಾರ್ಥಿನಿಯರಿಗೆ ಮೀಸಲಿರುವ ಬಗ್ಗೆ ಚರ್ಚಿಸಿದ್ದು, ಸೆಮಿಸ್ಟರ್ ಪರೀಕ್ಷೆ ಇತರೆ ಅಂಶ ಗಮನದಲ್ಲಿಟ್ಟುಕೊಂಡು ಚುನಾವಣ ವೇಳಾಪಟ್ಟಿ ಪ್ರಕಟಿಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ನಾಯಕರನ್ನು ಬೆಳೆಸುವ ಉದ್ದೇಶದಿಂದ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ವಿದ್ಯಾರ್ಥಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಇನ್ನು 10 ದಿನದಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಸಚಿವರು ತಿಳಿಸಿದ್ದಾರೆ.

