ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಕದನ ಶುರುವಾಗಿದೆ. ನಮ್ಮ ತಂದೆಯೇ 5 ವರ್ಷ ಸಿಎಂ ಎಂದು ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದೂ ಹೇಳಿದ್ದಾರೆ. ಹಾಗಾಗಿ ಇನ್ಮುಂದೆ ರಾಜ್ಯದಲ್ಲಿ ಪ್ರತಿದಿನ ಕಾಂಗ್ರೆಸ್ ನಲ್ಲಿ ಕುರ್ಚಿ ಕದನ ನೋಡಬಹುದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಈ ಹಿಂದೆಯೂ ನಮ್ಮ ತಂದೆ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ನಾಯಕತ್ವ ಬದಲಾವಣೆ ಇಲ್ಲ ಎಂದಿದ್ದರು. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್, ಯತೀಂದ್ರನೇ ನಮ್ಮ ಹೈಕಮಾಂಡ್. ಅವರ ಮಾತನ್ನೇ ಕೇಳೋಣ ಎಂದು ಹೇಳಿದ್ದರು. ಈಗ ಯತೀಂದ್ರ ಸಿದ್ದರಾಮಯ್ಯ, ಮತ್ತೆ ನಮ್ಮ ತಂದೆಯೇ 5 ವರ್ಷ ಸಿಎಂ ಆಗಿ ಪೂರ್ಣಾವಧಿ ಮುಗಿಸುತ್ತಾರೆ. ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದಿದ್ದಾರೆ. ಅಲ್ಲಿಗೆ ಎಲ್ಲವೂ ಮುಗಿದು ಹೋಯಿತು. ಇನ್ನೇನೂ ಉಳಿದಿಲ್ಲ. ಈ ಎಲ್ಲಾ ಬೆಳವಣಿಗೆಯನ್ನು ರಾಜ್ಯದ ಜನರು ಗಮನಿಸಿದರೆ ಇನ್ಮುಂದೆ ಪ್ರತಿ ದಿನ ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಕದನ ಕಾಣಬಹುದು ಎಂದರು.
ಕಾಂಗ್ರೆಸ್ ನಲ್ಲಿ ಇನ್ಮುಂದೆ ಕುರ್ಚಿ ಕಿತ್ತಾಟ ಮತ್ತಷ್ಟು ಜೋರಾಗಲಿದೆ. ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಗಮನವಿಲ್ಲ. ರಾಜ್ಯದ ಯಾವ ಭಾಗದಲಿಯೂ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಕಾಂಗ್ರೆಸ್ ನಾಯಕರು ಬರೀ ಕುರ್ಚಿಗಾಗಿ ಕಿತ್ತಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಯತೀಂದ್ರ ಅವರೇ ಹೈಕಮಾಂಡ್ ರೀತಿ ಆಡುತ್ತಿದ್ದಾರೆ. ಎಲ್ಲವನ್ನೂ ಅವರೇ ಹೇಳುತ್ತಾರೆ. ದೆಹಲಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ಸತ್ತು ಹೋಗಿದೆ ಎಂದು ವ್ಯಂಗ್ಯವಾಡಿದರು.

