ಬೆಂಗಳೂರು: ಕೇಂದ್ರದಲ್ಲಿ NEET ಪರೀಕ್ಷೆಗೆ ಸಂಬಂಧಿಸಿದ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜಕೀಯ ಹಾಗೂ ಆಡಳಿತಾತ್ಮಕ ಹೊಣೆ ಹೊತ್ತು ಕೇಂದ್ರ ಸಚಿವರು ರಾಜೀನಾಮೆ ನೀಡಿದ್ದಾರೆ. ಹಾಗಾದರೆ ಕರ್ನಾಟಕದಲ್ಲಿ ನಡೆದ ಗಂಭೀರ ಘಟನೆಗಳಿಗೆ ನೈತಿಕ ಮತ್ತು ಆಡಳಿತಾತ್ಮಕ ಹೊಣೆ ಯಾರು ಹೊರುತ್ತಾರೆ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆರ್.ಅಶೋಕ್ ಸಾಲು ಸಾಲು ಪ್ರಶ್ನೆ ಮುಂದಿಟ್ಟಿದ್ದಾರೆ. ದೇಶದಲ್ಲಿ Gen Z ಹೆಸರಲ್ಲಿ ರಾಜಕೀಯ ಮಾಡುವ ಸಿಎಂ ಡಿ.ಕೆ.ಶಿವಕುಮಾರ್ ಅವರೇ, ರಾಜ್ಯದಲ್ಲಿ Gen Z ಮಾತ್ರವಲ್ಲ ಎಲ್ಲಾ ಜನರೇಷನ್ ಸಂಕಷ್ಟದಲ್ಲಿದೆ. ವೃದ್ಧರಿಗೆ ಪಿಂಚಣಿಯಿಲ್ಲ, ರೈತರಿಗೆ ಬೆಳೆ ಪರಿಹಾರವಿಲ್ಲ, ಯುವಜನತೆಗೆ ಉದ್ಯೋಗಾವಕಾಶಗಳಿಲ್ಲ. ಮೊದಲು ಇತ್ತ ನೋಡಿ… ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟರ್ ಮೂಲಕ ಕಿಡಿಕಾರಿದ್ದಾರೆ.
KPSC ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಒಂದು ಹುದ್ದೆಗೆ ₹80 ಲಕ್ಷ ಡೀಲ್ ನಡೆದಿರುವ ಆರೋಪದ ಆಡಿಯೋ ಬಹಿರಂಗವಾಗಿದೆ. ಈ ಆರೋಪಗಳ ಕುರಿತು ಸಮಗ್ರ, ಸ್ವತಂತ್ರ ಮತ್ತು ಪಾರದರ್ಶಕ ತನಿಖೆ ಯಾವಾಗ? ಇದರ ಹೊಣೆ ಯಾರು ಹೊರುತ್ತಾರೆ? ಯಾರು ರಾಜೀನಾಮೆ ಕೊಡುತ್ತಾರೆ? ಎಂದು ಕೇಳಿದ್ದಾರೆ.
ಐಪಿಎಲ್ ವಿಜಯೋತ್ಸವದ ಕಾಲ್ತುಳಿತ ದುರಂತದಲ್ಲಿ 11 ಅಮಾಯಕ ಜೀವಗಳು ಬಲಿಯಾದವು. ಆ ದುರಂತಕ್ಕೆ ನೈತಿಕ ಮತ್ತು ಆಡಳಿತಾತ್ಮಕ ಹೊಣೆ ಯಾರು ಹೊರುತ್ತಾರೆ? ನೊಂದ ಕುಟುಂಬಗಳಿಗೆ ಸಂಪೂರ್ಣ ನ್ಯಾಯ ಯಾವಾಗ ದೊರೆಯುತ್ತದೆ? ಇದರ ಹೊಣೆ ಯಾರು ಹೊರುತ್ತಾರೆ? ಯಾರ ರಾಜೀನಾಮೆ ನೀಡುತ್ತಾರೆ?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಳೆದ ಮೂರು ವರ್ಷಗಳಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್ ಹಾವಳಿ ತಡೆಯಲಾರದೆ ನೂರಾರು ಬಡವ ಸಾಲಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ? ಇದಕ್ಕೆಲ್ಲ ಯಾರು ಹೊಣೆ? ಯಾರು ರಾಜೀನಾಮೆ ಕೊಡುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಅಧಿಕಾರ ಎಂದರೆ ಕೇವಲ ಹುದ್ದೆಯಲ್ಲ; ಅದರೊಂದಿಗೆ ಜವಾಬ್ದಾರಿಯೂ ಇರುತ್ತದೆ. ತಪ್ಪುಗಳು ನಡೆದಾಗ ಅಧಿಕಾರಿಗಳ ಮೇಲೆ ಗೂಬೆ ಕೂರಿಸದೆ, ನಾಮಕಾವಸ್ತೆ ತನಿಖೆಗಳ ಹೆಸರಿನಲ್ಲಿ ತಪ್ಪಿಸಿಕೊಳ್ಳದೆ ಉತ್ತರದಾಯಿತ್ವ ಸ್ವೀಕರಿಸಬೇಕು. ಪ್ರತಿಯೊಂದು ಪ್ರಕರಣದಲ್ಲೂ ಸತ್ಯ ಹೊರಬರಬೇಕು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಾಗಬೇಕು ಹಾಗೂ ಜನರ ವಿಶ್ವಾಸವನ್ನು ಮರುಸ್ಥಾಪಿಸುವ ಕಾರ್ಯ ನಡೆಯಬೇಕು ಎಂದು ಹೇಳಿದ್ದಾರೆ.

