ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಇದೆ. ಭೀಕರ ಬರಗಾಲ ಎದುರಾಗಿದೆ. ಆದರೂ ಕಾಂಗ್ರೆಸ್ ನಾಯಕರು, ಶಾಸಕರು ಜಾಲಿ ಟ್ರಿಪ್ ಮಾಡ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ಮ್ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇದೇ ಹಣೆಬರಹ. ಬರಗಾಲ ಬಂದಾಗ ಸರ್ಕಾರ ಯಾವುದೇ ಕ್ರಮಕೈಗೊಳ್ಳಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಮುಂಜಾಗ್ರತಾ ಕ್ರಮ ಕೈಗೊಂಡಿದ್ವಿ. ಬಿಜೆಪಿಯ ಕೆಲಸವನ್ನು ನೋಡಿ ಕಾಂಗ್ರೆಸ್ ಕಲಿಯಬೇಕು ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಡಿ.ಕೆ.ಶಿವಕುಮಾರ್ ಅವರು ಬೆಳೆ ಬೆಳೆಯಬೇಡಿ ಅಂತಾರೆ. ರೈತರು ಬೆಳೆ ಬೆಳೆಯದೆ ಏನು ಮಾಡಬೇಕು? ಹಾಗಾದ್ರೆ ರೈತರಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಿ ಬಿಡಿ. ಕಾವೇರಿ ನದಿ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ. ಬರ ಪೀಡಿತವೆಂದು ಘೋಷಣೆ ಮಾಡಿದರೆ ಕೇಂದ್ರ ಸರ್ಕಾರ ನಿಯೋಗ ಕಳಿಸಿ ವರದಿ ಪಡೆದು ಹಣ ಕೊಡುತ್ತೆ. ಬರ ಅಂತಾ ಘೋಷಣೆ ಮಾಡದಿದ್ದರೆ ಈ ಅನುದಾನ ಸಿಗುವುದಿಲ್ಲ. ಕಾಂಗ್ರೆಸ್ಗೆ ಕಾಳಜಿ ಇದ್ದರೆ ಕೂಡಲೇ ಬರ ಅಂತಾ ಘೋಷಿಸಲಿ ಎಂದು ಆಗ್ರಹಿಸಿದರು.
ಎಸ್ ಡಿ ಆರ್ ಎಫ್ ಹಣವನ್ನು ಯಾವುದಕ್ಕೆ ಬಳಕೆ ಮಾಡಿದ್ದಾರೋ ಗೊತ್ತಿಲ್ಲ. ಬರ ಘೋಷಣೆ ಮಾಡೋ ಬದಲು ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಕುಳಿತಿದ್ದಾರೆ. ರಾಜ್ಯ ಸರ್ಕಾರ 1 ಲಕ್ಷ ರೂ.ವರೆಗೆ ರೈತರ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

