ಮಾಸ್ಕೋ: ಉಕ್ರೇನ್ ಸಂಘರ್ಷದ ನಡುವೆ ನಡೆದ ಚುನಾವಣೆಯಲ್ಲಿ ‘ಅತ್ಯಧಿಕ ಬಹುಮತ'(supermajority) ಗಳಿಸಿದ ನಂತರ ರಷ್ಯಾದ ಮೇಲೆ ಪುಟಿನ್ ಹಿಡಿತ ಬಿಗಿಗೊಂಡಿದೆ.
ಮೂರು ದಿನಗಳ ಕಾಲ ನಡೆದ ಸಂಸತ್ತಿನ ಚುನಾವಣೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ‘ಯುನೈಟೆಡ್ ರಷ್ಯಾ’ ಪಕ್ಷವು ಭರ್ಜರಿ ಜಯಗಳಿಸಿದೆ. ಡ್ಯೂಮಾದ (ರಷ್ಯಾದ ಸಂಸತ್ತಿನ ಕೆಳಮನೆ) ಒಟ್ಟು 455 ಸ್ಥಾನಗಳ ಪೈಕಿ 355 ಸ್ಥಾನಗಳನ್ನು ಈ ಪಕ್ಷ ಗೆದ್ದುಕೊಂಡಿದೆ ಎಂದು ಚುನಾವಣಾ ಆಯೋಗದ ಮುಖ್ಯಸ್ಥೆ ಎಲ್ಲಾ ಪಾಮ್ಫಿಲೋವಾ ಸೋಮವಾರ ಘೋಷಿಸಿದರು. ಇದರೊಂದಿಗೆ ಪುಟಿನ್ ಅವರ ಪಕ್ಷವು ಡ್ಯೂಮಾದಲ್ಲಿ ಅತ್ಯಧಿಕ ಬಹುಮತವನ್ನು ಪಡೆದುಕೊಂಡಂತಾಗಿದ್ದು, ಅಗತ್ಯವಿದ್ದರೆ ಸಂವಿಧಾನವನ್ನೂ ಬದಲಾಯಿಸುವ ಅಧಿಕಾರವನ್ನು ಇದು ಅವರಿಗೆ ನೀಡಲಿದೆ.
ಫೆಬ್ರವರಿ 2022 ರಲ್ಲಿ ಉಕ್ರೇನ್ನೊಂದಿಗಿನ ಸಂಘರ್ಷ ಪ್ರಾರಂಭವಾದ ನಂತರ ರಷ್ಯಾದಲ್ಲಿ ನಡೆದ ಮೊದಲ ಸಂಸದೀಯ ಚುನಾವಣೆ ಇದಾಗಿದೆ.
ರಾಜಧಾನಿ ಮಾಸ್ಕೋದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಮ್ಫಿಲೋವಾ, ಮತದಾರರ ಭಾಗವಹಿಸುವಿಕೆಗೆ ಧನ್ಯವಾದ ಅರ್ಪಿಸಿದರು. ದೇಶದಲ್ಲಿನ “ಮಾನಸಿಕ ಒತ್ತಡ”ದ ನಡುವೆಯೂ ಶೇಕಡಾ 59 ಕ್ಕಿಂತ ಹೆಚ್ಚು ಮತದಾನವಾಗಿದೆ ಎಂದು ಅವರು ತಿಳಿಸಿದರು. “ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯ ಹೊರತಾಗಿಯೂ, ಈ ಚುನಾವಣೆಗಳಿಗೆ ಗರಿಷ್ಠ ಭದ್ರತೆಯನ್ನು ಖಾತ್ರಿಪಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ” ಎಂದು ಅವರು ಹೇಳಿದ್ದಾಗಿ ಎಎಫ್ಪಿ (AFP) ವರದಿ ಮಾಡಿದೆ.
ಪುಟಿನ್ ಅವರ ಹಿಡಿತವನ್ನು ಬಿಗಿಗೊಳಿಸಲಿರುವ ಫಲಿತಾಂಶಗಳು
ಈ ಗೆಲುವು ದೇಶದ ಮೇಲೆ ಪುಟಿನ್ ಅವರ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಲಿದೆ, ಏಕೆಂದರೆ ರಷ್ಯಾದ ಸಂವಿಧಾನವನ್ನೂ ಬದಲಾಯಿಸುವಷ್ಟು ಬಹುಮತ ಈಗ ಅವರ ಪಕ್ಷಕ್ಕಿದೆ. ಅವರ ಪಕ್ಷವು ಒಟ್ಟು ಮತಗಳಲ್ಲಿ ಶೇಕಡಾ 57.83 ರಷ್ಟು ಮತಗಳನ್ನು ಗಳಿಸಿದೆ; 2021 ರಲ್ಲಿ ಈ ಪ್ರಮಾಣವು ಶೇಕಡಾ 49.8 ರಷ್ಟಿತ್ತು ಎಂಬುದನ್ನು ಅಧಿಕಾರಿಗಳು ತೋರಿಸಿದ್ದಾರೆ.
“ಈ ಸೂಚಕಗಳು ಸಹಜವಾಗಿಯೇ, ರಾಷ್ಟ್ರದ ಮುಖ್ಯಸ್ಥರ ಸುತ್ತ ರಷ್ಯಾದ ಸಮಾಜದಲ್ಲಿನ ಅತ್ಯುನ್ನತ ಮಟ್ಟದ ಒಗ್ಗಟ್ಟನ್ನು ಸೂಚಿಸುತ್ತವೆ” ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾಗಿ ಎಎಫ್ಪಿ ವರದಿ ಮಾಡಿದೆ.
ರಷ್ಯಾದ ಕಮ್ಯುನಿಸ್ಟ್ ಪಕ್ಷ (CPRF) 40 ಸ್ಥಾನಗಳು ಮತ್ತು ಶೇಕಡ 13.8 ರಷ್ಟು ಮತಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೂರನೇ ಸ್ಥಾನದಲ್ಲಿರುವ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ರಷ್ಯಾ(LDPR) 25 ಸ್ಥಾನಗಳು ಮತ್ತು ಶೇಕಡಾ 8.99 ರಷ್ಟು ಮತಗಳನ್ನು ಪಡೆದುಕೊಂಡಿದೆ. ಮತ್ತೊಂದೆಡೆ, ‘ನ್ಯೂ ಪೀಪಲ್ ಪಾರ್ಟಿ’ (NPP) 20 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಶೇಕಡ 7.96 ರಷ್ಟು ಮತಗಳನ್ನು ಪಡೆದಿದೆ.
ಉಕ್ರೇನ್ ಯುದ್ಧದ ತೀವ್ರತೆ
ಕೈವ್ (Kyiv) ಭಾನುವಾರ ರಷ್ಯಾದ ಮೇಲೆ ತನ್ನ ‘ಅತ್ಯಂತ ದೊಡ್ಡ’ ಡ್ರೋನ್ ದಾಳಿಯನ್ನು ನಡೆಸುವ ಮೂಲಕ ಉಕ್ರೇನ್ ಯುದ್ಧವು ತೀವ್ರಗೊಂಡಿರುವ ಸಂದರ್ಭದಲ್ಲೇ ಈ ಫಲಿತಾಂಶಗಳು ಹೊರಬಿದ್ದಿವೆ. ರಷ್ಯಾದ ಅಧಿಕಾರಿಗಳ ಪ್ರಕಾರ, 1,600 ಕ್ಕೂ ಹೆಚ್ಚು ಡ್ರೋನ್ ಗಳನ್ನು ತಡೆಯಲಾಗಿದೆ ಮತ್ತು ಅವುಗಳಲ್ಲಿ 450 ಡ್ರೋನ್ ಗಳು ಮಾಸ್ಕೋವನ್ನು ಗುರಿಯಾಗಿಸಿಕೊಂಡಿದ್ದವು. ಭಾನುವಾರದ ದಾಳಿಗೆ ಪ್ರತಿಕ್ರಿಯೆಯಾಗಿ, ರಷ್ಯಾ ಉಕ್ರೇನ್ ನ ದಕ್ಷಿಣ ನಗರವಾದ ಝಪೊರಿಝಿಯಾದಲ್ಲಿನ ಸರಕು ಸಾಗಣೆ ಮತ್ತು ಪೂರೈಕೆ ಕೇಂದ್ರಗಳನ್ನು (ಲಾಜಿಸ್ಟಿಕ್ ಹಬ್ಗಳು) ಗುರಿಯಾಗಿಸಿಕೊಂಡಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ನೆರವನ್ನು ಕೋರಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾ ಸಂಘರ್ಷವನ್ನು ತಗ್ಗಿಸುವ ಯಾವುದೇ ಲಕ್ಷಣಗಳನ್ನು ತೋರಿಸಿಲ್ಲ ಎಂದು ಹೇಳಿದ್ದಾರೆ.

