ಪಂಜಾಬ್ನಲ್ಲಿ ಪೊಲೀಸರ ಮೇಲಿನ ದಾಳಿಗಳು ಆತಂಕ ಮೂಡಿಸಿವೆ. ಇತ್ತೀಚೆಗೆ, 2026ರ ಅಕ್ಟೋಬರ್ 11ರಂದು ತರನ್ತಾರನ್ ಜಿಲ್ಲೆಯಲ್ಲಿ ಎಎಸ್ಐ ಇಕ್ಬಾಲ್ ಸಿಂಗ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರು ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದಾಗ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಅವರನ್ನು ಗುರಿಯಾಗಿಸಿಕೊಂಡಿದ್ದರು. ಇದಕ್ಕೂ ಮೊದಲು ಪಂಜಾಬ್ನಲ್ಲಿ ಹಲವು ಪೊಲೀಸ್ ಸಿಬ್ಬಂದಿಯ ಹತ್ಯೆ ಹಾಗೂ ಅವರ ಮೇಲೆ ಮಾರಣಾಂತಿಕ ದಾಳಿಗಳು ನಡೆದಿವೆ.
ನಿರಂತರವಾಗಿ ನಡೆಯುತ್ತಿರುವ ಈ ಘಟನೆಗಳು ಪೊಲೀಸ್ ಸಿಬ್ಬಂದಿಯ ಸುರಕ್ಷತೆ ಮತ್ತು ಅವರನ್ನು ಗುರಿಯಾಗಿಸಿಕೊಳ್ಳುತ್ತಿರುವುದರ ಹಿಂದಿನ ಸಂಚಿನ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಹಾಗಾದರೆ, ಪಂಜಾಬ್ನಲ್ಲಿ ಪೊಲೀಸರ ಮೇಲಿನ ದಾಳಿಗಳು ಹೆಚ್ಚಾಗಲು ಕಾರಣವೇನು? ಇದರ ಹಿಂದೆ ಸಂಘಟಿತ ಸಂಚು ಇದೆಯೇ ಅಥವಾ ಪ್ರತಿಯೊಂದು ಘಟನೆಯ ಹಿಂದೆಯೂ ಬೇರೆ ಬೇರೆ ಕಾರಣಗಳಿವೆಯೇ? ಈ ದಾಳಿಗಳ ಹಿಂದಿನ ಸಾಧ್ಯತೆಗಳು ಮತ್ತು ತನಿಖೆಯಲ್ಲಿ ಇದುವರೆಗೆ ಬೆಳಕಿಗೆ ಬಂದಿರುವ ಅಂಶಗಳೇನು ಎಂಬುದನ್ನು ತಿಳಿಯೋಣ.
2026ರ ಮೇಯಿಂದ ಅಕ್ಟೋಬರ್ವರೆಗೆ ಪಂಜಾಬ್ನಲ್ಲಿ ಪೊಲೀಸ್ ಸಿಬ್ಬಂದಿಯ ಹತ್ಯೆ ಮತ್ತು ಅವರ ಮೇಲಿನ ಮಾರಣಾಂತಿಕ ದಾಳಿಗಳ ಹಲವು ಘಟನೆಗಳು ವರದಿಯಾಗಿವೆ. ಈ ಅವಧಿಯಲ್ಲಿ ಯಾವ ದಿನ, ಎಲ್ಲಿ ದಾಳಿ ನಡೆದಿದೆ ಎಂಬುದನ್ನು ನೋಡೋಣ.
ಅಮೃತಸರದಲ್ಲಿ ಎಎಸ್ಐ ಜೋಗಾ ಸಿಂಗ್ ಹತ್ಯೆ
ಇಂಡಿಯನ್ ಎಕ್ಸ್ಪ್ರೆಸ್ ಮೇ 27ರಂದು ಪ್ರಕಟಿಸಿದ ವರದಿಯ ಪ್ರಕಾರ, ‘ತಹ್ರೀಕ್-ಎ-ತಾಲಿಬಾನ್ ಹಿಂದೂಸ್ತಾನ್’ (TTH) ಎಂಬ ಸಂಘಟನೆ ಈ ಹತ್ಯೆಯ ಹೊಣೆ ಹೊತ್ತಿತ್ತು. ಅಲ್ಲದೆ, ಘಟನೆಯ ವಿಡಿಯೋವನ್ನೂ ಬಿಡುಗಡೆ ಮಾಡಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಸಂಘಟನೆಯು ಈ ಹಿಂದೆ ಸರ್ಕಾರಿ ನೌಕರರು ಮತ್ತು ಪೊಲೀಸ್ ಸಿಬ್ಬಂದಿಗೆ ಬೆದರಿಕೆ ಹಾಕಿತ್ತು ಎನ್ನಲಾಗಿದೆ. ಆದರೆ, ಯಾವುದೇ ಸಂಘಟನೆ ಹತ್ಯೆಯ ಹೊಣೆ ಹೊತ್ತುಕೊಂಡ ಮಾತ್ರಕ್ಕೆ ಆ ಕೃತ್ಯದ ಹಿಂದೆ ಅದೇ ಸಂಘಟನೆಯ ಕೈವಾಡವಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅದನ್ನು ಸಾಬೀತುಪಡಿಸಲು ತನಿಖೆಯಲ್ಲಿ ಬಲವಾದ ಸಾಕ್ಷ್ಯಗಳು ದೊರೆಯಬೇಕು.
ಫೋಟೋ: ಎಎಸ್ಐ ಜೋಗಾ ಸಿಂಗ್
ಅಮೃತಸರದಲ್ಲಿ ಎಎಸ್ಐ ಹರ್ಜಿತ್ ಸಿಂಗ್ ಹತ್ಯೆ
ಅಮೃತಸರದ ಗೇಟ್ ಹಕೀಮಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಿಸಿಆರ್ ಕರ್ತವ್ಯದಲ್ಲಿದ್ದ ಎಎಸ್ಐ ಹರ್ಜಿತ್ ಸಿಂಗ್ ಅವರನ್ನು ಸೆಪ್ಟೆಂಬರ್ 18ರಂದು ಮುಂಜಾನೆ ಸುಮಾರು 2.30ರ ವೇಳೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಅವರು ಭಕ್ತಾನ್ವಾಲಾ ಧಾನ್ಯ ಮಾರುಕಟ್ಟೆ ಸಮೀಪ ರಾತ್ರಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಮೋಟಾರ್ಸೈಕಲ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಗಾಯಗೊಂಡಿದ್ದ ಹರ್ಜಿತ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.
ಸೆಪ್ಟೆಂಬರ್ 19ರಂದು ಪ್ರಕಟವಾದ ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ಪೊಲೀಸರು ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿ, ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದರು. ಬಳಿಕ, ದೀಪಕ್ ಸಿಂಗ್ ಎಂಬ ಶಂಕಿತನನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದರು.
ತರನ್ತಾರನ್ನಲ್ಲಿ ಎಎಸ್ಐ ಇಕ್ಬಾಲ್ ಸಿಂಗ್ ಹತ್ಯೆ
ಪಂಜಾಬ್ ಪೊಲೀಸ್ ಇಲಾಖೆಯ ಕೌಂಟರ್ ಇಂಟೆಲಿಜೆನ್ಸ್ ವಿಭಾಗಕ್ಕೆ ಸಂಬಂಧಿಸಿದ 55 ವರ್ಷದ ಎಎಸ್ಐ ಇಕ್ಬಾಲ್ ಸಿಂಗ್ ಅವರನ್ನು ಅಕ್ಟೋಬರ್ 11ರಂದು ತರನ್ತಾರನ್ ಜಿಲ್ಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಅವರು ಫಿರೋಜ್ಪುರ ಜಿಲ್ಲೆಯ ಮಖು ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಡ್ಯೂಟಿ ಮುಗಿಸಿ ಮನೆಗೆ ಮರಳುತ್ತಿದ್ದಾಗ ನೌಶೇರಾ-ಲೋಹ್ಕಾ ರಸ್ತೆಯ ಸಮೀಪ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಅವರನ್ನು ಸುತ್ತುವರಿದು ಗುಂಡು ಹಾರಿಸಿದ್ದಾರೆ.
ಅಕ್ಟೋಬರ್ 12ರಂದು ಪ್ರಕಟವಾದ ಮಾಧ್ಯಮ ವರದಿಗಳ ಪ್ರಕಾರ, ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದರು. ಸೆಪ್ಟೆಂಬರ್ನಲ್ಲಿ ನಡೆದಿದ್ದ ಅವರ ಸೋದರಳಿಯ ಅಜ್ಮೀತ್ ಸಿಂಗ್ ಹತ್ಯೆಗೂ ಈ ಘಟನೆಗೂ ಸಂಬಂಧವಿದೆಯೇ ಎಂಬ ಆಯಾಮದಲ್ಲೂ ಪ್ರಾಥಮಿಕ ತನಿಖೆ ನಡೆಯುತ್ತಿದೆ.
ಹೀಗಾಗಿ, ತನಿಖೆ ಪೂರ್ಣಗೊಳ್ಳುವ ಮುನ್ನವೇ ಈ ಹತ್ಯೆಯನ್ನು ಗಡಿಯಾಚೆಗಿನ ಸಂಚು ಅಥವಾ ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡಿರುವ ದೊಡ್ಡ ಅಭಿಯಾನದ ಭಾಗವೆಂದು ಪರಿಗಣಿಸುವುದು ಅವಸರದ ನಿರ್ಧಾರವಾಗುತ್ತದೆ.
ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್ಗಳು ದಾಳಿ ನಡೆಸಿಸುತ್ತಿದ್ದಾರೆಯೇ?
ಪಂಜಾಬ್ನಲ್ಲಿ ಪೊಲೀಸ್ ಸಿಬ್ಬಂದಿಯ ಮೇಲಿನ ದಾಳಿಗಳು ನಡೆದಾಗಲೆಲ್ಲ ಗಡಿಯಾಚೆಯಿಂದ ಸಂಚು ರೂಪಿಸಲಾಗುತ್ತಿದೆ ಎಂಬ ಶಂಕೆಗಳು ವ್ಯಕ್ತವಾಗಿವೆ. ಗುರುದಾಸ್ಪುರದ ಪ್ರಕರಣದಲ್ಲಿ ಪಾಕಿಸ್ತಾನದ ಐಎಸ್ಐ ಹ್ಯಾಂಡ್ಲರ್ಗಳ ಕೈವಾಡವಿದೆ ಎಂದು ಪೊಲೀಸರು ಆರೋಪಿಸಿದ್ದರು.
ಎಎಸ್ಐ ಜೋಗಾ ಸಿಂಗ್ ಮತ್ತು ಎಎಸ್ಐ ಹರ್ಜಿತ್ ಸಿಂಗ್ ಅವರ ಹತ್ಯೆಗಳಲ್ಲಿಯೂ ಕೆಲವು ಸಂಘಟನೆಗಳ ಪಾತ್ರ ಅಥವಾ ಗಡಿಯಾಚೆಗಿನ ಸಂಪರ್ಕಗಳ ಕುರಿತು ಅನುಮಾನಗಳು ವ್ಯಕ್ತವಾಗಿದ್ದವು.
ಇಂತಹ ಶಂಕೆಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವುದು ಅಗತ್ಯ. ಆದರೆ, ಪ್ರತ್ಯೇಕ ಘಟನೆಗಳ ಹಿಂದಿರುವ ಎಲ್ಲ ಕಾರಣಗಳನ್ನು ಪರಿಶೀಲಿಸದೆ ಅವುಗಳನ್ನೆಲ್ಲ ಒಂದೇ ಸಂಚಿನ ಭಾಗವೆಂದು ಪರಿಗಣಿಸುವುದು ಸರಿಯಲ್ಲ.
ಒಂದೇ ಸಂಚಿನಡಿ ಈ ದಾಳಿಗಳು ನಡೆಯುತ್ತಿವೆಯೇ?
ಪಂಜಾಬ್ನಲ್ಲಿ ಪೊಲೀಸ್ ಸಿಬ್ಬಂದಿಯ ಮೇಲಿನ ದಾಳಿಗಳಿಗೆ ಇದುವರೆಗೆ ಒಂದೇ ನಿರ್ದಿಷ್ಟ ಕಾರಣ ಪತ್ತೆಯಾಗಿಲ್ಲ. ಆದರೂ, ತನಿಖಾಧಿಕಾರಿಗಳು ಹಲವು ಗಂಭೀರ ಆಯಾಮಗಳನ್ನು ಪರಿಶೀಲಿಸುತ್ತಿದ್ದಾರೆ.
ಕೆಲವು ಪ್ರಕರಣಗಳಲ್ಲಿ ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್ಗಳು ಮತ್ತು ಐಎಸ್ಐಗೆ ಸಂಬಂಧಿಸಿದ ಜಾಲಗಳ ಪಾತ್ರವಿದೆ ಎಂದು ಆರೋಪಿಸಲಾಗಿದೆ. ಇಂತಹ ಜಾಲಗಳು ಸ್ಥಳೀಯ ಯುವಕರಿಗೆ ಹಣದ ಆಮಿಷವೊಡ್ಡಿ ದಾಳಿ ನಡೆಸಲು ಪ್ರೇರೇಪಿಸಬಹುದು ಮತ್ತು ಅವರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಬಹುದು ಎಂಬುದು ಪೊಲೀಸರ ಅನುಮಾನವಾಗಿದೆ.
ಇನ್ನೊಂದೆಡೆ, ಗ್ಯಾಂಗ್ವಾರ್, ಹಳೆಯ ವೈಷಮ್ಯ ಮತ್ತು ವೈಯಕ್ತಿಕ ದ್ವೇಷದಂತಹ ಆಯಾಮಗಳನ್ನೂ ಪರಿಶೀಲಿಸಲಾಗುತ್ತಿದೆ.
ಅಕ್ಟೋಬರ್ನಲ್ಲಿ ಎಎಸ್ಐ ಸುಖ್ಚೈನ್ ಸಿಂಗ್ ಅವರ ಮೇಲಿನ ದಾಳಿ ಪ್ರಕರಣದಲ್ಲಿ ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್ಗಳಿಗೆ ಸಂಬಂಧಿಸಿದ ಜಾಲವನ್ನು ಪತ್ತೆಹಚ್ಚಿರುವುದಾಗಿ ಪಂಜಾಬ್ ಪೊಲೀಸರು ಹೇಳಿಕೊಂಡಿದ್ದರು. ಇದೇ ವೇಳೆ, ಎಎಸ್ಐ ಇಕ್ಬಾಲ್ ಸಿಂಗ್ ಅವರ ಹತ್ಯೆಯಲ್ಲಿ ಅವರ ಸೋದರಳಿಯನ ಹತ್ಯೆಯೊಂದಿಗಿನ ಸಂಭಾವ್ಯ ಸಂಬಂಧದ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಆದರೆ, ಈ ಎಲ್ಲ ಘಟನೆಗಳೂ ಒಂದೇ ಸಂಚಿನ ಭಾಗವಾಗಿವೆ ಎಂಬುದನ್ನು ದೃಢಪಡಿಸುವಷ್ಟು ಸಾರ್ವಜನಿಕ ಸಾಕ್ಷ್ಯಗಳು ಈವರೆಗೆ ಲಭ್ಯವಾಗಿಲ್ಲ.
ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರ ಸುರಕ್ಷತೆ ಬಗ್ಗೆ ಏನು ಹೇಳುತ್ತದೆ ಈ ಘಟನೆ?
ಎಎಸ್ಐ ಹರ್ಜಿತ್ ಸಿಂಗ್ ಹತ್ಯೆಯ ಬಳಿಕ ಸೆಪ್ಟೆಂಬರ್ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸೂಚನಾ ಪತ್ರ ವೈರಲ್ ಆಗಿತ್ತು.
ಗಡಿ ವಲಯದ ಪೊಲೀಸ್ ಅಧಿಕಾರಿಗಳು ಅಮೃತಸರ ಗ್ರಾಮೀಣ, ಬಟಾಲಾ, ಗುರುದಾಸ್ಪುರ ಮತ್ತು ಪಠಾಣ್ಕೋಟ್ನ ಪೊಲೀಸ್ ಸಿಬ್ಬಂದಿಗೆ ಕರ್ತವ್ಯಕ್ಕೆ ಬರುವಾಗ ಮತ್ತು ಮನೆಗೆ ಮರಳುವಾಗ ಸಾಮಾನ್ಯ ಉಡುಪು ಧರಿಸುವಂತೆ ಹಾಗೂ ತಾವು ಪೊಲೀಸ್ ಸಿಬ್ಬಂದಿ ಎಂಬುದನ್ನು ಗುರುತಿಸುವ ಸೂಚನೆಗಳಿಂದ ದೂರವಿರುವಂತೆ ಆದೇಶಿಸಿದ್ದಾರೆ ಎಂದು ಆ ಪತ್ರದಲ್ಲಿ ಹೇಳಲಾಗಿತ್ತು.
ಆದರೆ, ಈ ಸೂಚನಾ ಪತ್ರ ನಕಲಿ ಎಂದು ಪಂಜಾಬ್ ಪೊಲೀಸ್ ಪ್ರಧಾನ ಕಚೇರಿ ಸ್ಪಷ್ಟಪಡಿಸಿತ್ತು. ಪ್ರಧಾನ ಕಚೇರಿ ಅಥವಾ ಅದರ ಅಧೀನದ ಯಾವುದೇ ಕಚೇರಿ ಪೊಲೀಸ್ ಸಿಬ್ಬಂದಿಗೆ ಪ್ರಯಾಣದ ವೇಳೆ ಸಮವಸ್ತ್ರ ಧರಿಸಬಾರದು ಎಂಬ ಇಂತಹ ಆದೇಶ ಹೊರಡಿಸಿಲ್ಲ ಎಂದು ಪೊಲೀಸರು ತಿಳಿಸಿದ್ದರು.
ವೈರಲ್ ಸೂಚನಾ ಪತ್ರದ ಕುರಿತು ಪಂಜಾಬ್ ಪೊಲೀಸರ ಸ್ಪಷ್ಟನೆ
ಪೊಲೀಸ್ ಸಿಬ್ಬಂದಿಯ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಹೆಚ್ಚುತ್ತಿರುವ ಪ್ರಶ್ನೆಗಳು
ಈ ಸರಣಿ ಘಟನೆಗಳು ಪೊಲೀಸ್ ಸಿಬ್ಬಂದಿಯ ಸುರಕ್ಷತೆಯ ಕುರಿತು ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
-
ರಾತ್ರಿ ಗಸ್ತು ತಿರುಗುವ ಮತ್ತು ಒಬ್ಬರೇ ಪ್ರಯಾಣಿಸುವ ಪೊಲೀಸ್ ಸಿಬ್ಬಂದಿಗೆ ಸಾಕಷ್ಟು ಭದ್ರತೆ ಒದಗಿಸಲಾಗಿದೆಯೇ?
-
ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ವ್ಯವಸ್ಥೆ ಮತ್ತು ಸಿಸಿಟಿವಿ ನಿಗಾವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆಯೇ?
-
ಗುಪ್ತಚರ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುವ ವ್ಯವಸ್ಥೆಯನ್ನು ಸುಧಾರಿಸಬೇಕೇ?
-
ದಾಳಿಗಳಿಗೆ ಬಳಸಲಾದ ಶಸ್ತ್ರಾಸ್ತ್ರಗಳು ಮತ್ತು ಸ್ಥಳೀಯ ಸಂಪರ್ಕಗಳ ಬಗ್ಗೆ ತನಿಖೆ ಸಮರ್ಪಕ ವೇಗದಲ್ಲಿ ನಡೆಯುತ್ತಿದೆಯೇ?
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸ್ ಸಿಬ್ಬಂದಿಯ ಪ್ರಮುಖ ಕರ್ತವ್ಯ. ಆದರೆ, ಕರ್ತವ್ಯ ನಿರ್ವಹಿಸುವಾಗ ಅಥವಾ ಡ್ಯೂಟಿ ಮುಗಿಸಿ ಮನೆಗೆ ಮರಳುವಾಗಲೇ ಅವರ ಸುರಕ್ಷತೆ ಪ್ರಶ್ನಾರ್ಹವಾಗುತ್ತಿದ್ದರೆ, ಅದು ಕೇವಲ ಪೊಲೀಸ್ ಇಲಾಖೆಯ ಸಮಸ್ಯೆಯಾಗಿ ಉಳಿಯುವುದಿಲ್ಲ. ಇಡೀ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಗಂಭೀರ ವಿಚಾರವಾಗುತ್ತದೆ.
ಒಟ್ಟಿನಲ್ಲಿ, ಪಂಜಾಬ್ನಲ್ಲಿ ಪೊಲೀಸ್ ಸಿಬ್ಬಂದಿಯ ಮೇಲಿನ ದಾಳಿಗಳ ಹಿಂದೆ ಒಂದೇ ಸಂಚು ಇದೆಯೇ ಅಥವಾ ಪ್ರತ್ಯೇಕ ಕಾರಣಗಳಿವೆಯೇ ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ. ಆರೋಪಗಳಿಗಿಂತ ಸಾಕ್ಷ್ಯಾಧಾರಿತ ತನಿಖೆ, ಸೂಕ್ತ ಭದ್ರತಾ ಕ್ರಮಗಳು ಮತ್ತು ಪೊಲೀಸ್ ಸಿಬ್ಬಂದಿಯ ಸುರಕ್ಷತೆಗೆ ಆದ್ಯತೆ ನೀಡುವುದು ಈಗ ಅತ್ಯಗತ್ಯವಾಗಿದೆ.

